More

    ಸುರತ್ಕಲ್ ಟೋಲ್‌ಗೇಟ್ ಮಾತ್ರ ಬಂದ್, ಹೆಜಮಾಡಿಯಲ್ಲಿ ಪೂರ್ತಿ ಶುಲ್ಕ ವಸೂಲಿ!

    ಮಂಗಳೂರು: ನಿರೀಕ್ಷೆಯಂತೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಸುರತ್ಕಲ್ ಟೋಲ್‌ಪ್ಲಾಜಾವನ್ನು ಹೆಜಮಾಡಿ ಟೋಲ್‌ಪ್ಲಾಜಾ ಜತೆಗೆ ವಿಲೀನ ಮಾಡಲಾಗಿದೆ. ಆದರೆ, ಇದರಿಂದ ಪ್ರಯಾಣಿಕರಿಗೆ ಲಾಭದ ಬದಲು ನಷ್ಟವೇ ಆಗಲಿದೆ. ಸುರತ್ಕಲ್ ಟೋಲ್‌ನಲ್ಲಿ ಸಂಗ್ರಹಿಸುತ್ತಿದ್ದ ಶುಲ್ಕವನ್ನು 1 ರೂಪಾಯಿಯೂ ಕಡಿಮೆ ಮಾಡದೆ ಹೆಜಮಾಡಿಯಲ್ಲಿ ಪಡೆಯಲು ಆದೇಶಿಸಲಾಗಿದೆ.

    ಡಿ.1ರಿಂದ (ನ.30 ಮಧ್ಯರಾತ್ರಿ) ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸುಂಕ ಸಂಗ್ರಹ ಇರುವುದಿಲ್ಲ. ಬದಲಿಗೆ ಈ ಶುಲ್ಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲೇ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ ಸುರತ್ಕಲ್‌ನಲ್ಲಿ ಕಾರಿಗೆ ಟೋಲ್ ಶುಲ್ಕ ಒಂದೇ ಪ್ರಯಾಣಕ್ಕೆ 60 ರೂ. ಮತ್ತು ರಿಟರ್ನ್ ಟ್ರಿಪ್‌ಗೆ 90 ರೂ. ಇದ್ದರೆ, ಹೆಜಮಾಡಿಯಲ್ಲಿ ಕ್ರಮವಾಗಿ 40 ರೂ. ಮತ್ತು 65 ರೂ. ಇದ್ದುದನ್ನೂ ಸೇರಿಸಿ ವಸೂಲಿ ಮಾಡಲಾಗುತ್ತದೆ. ಅಂದರೆ, ಹೆಜಮಾಡಿಯಲ್ಲಿ ಪರಿಷ್ಕೃತ ಶುಲ್ಕ ಜಾರಿಯಾದಾಗ ಒಂದೇ ಪ್ರಯಾಣಕ್ಕೆ 100 ರೂ. ಮತ್ತು ಹಿಂತಿರುಗಲು 155 ರೂ. ಪಾವತಿಸಬೇಕು.

    ಸ್ಥಳೀಯ ವಾಹನಗಳಿಗಿಲ್ಲ ವಿನಾಯಿತಿ: ಇದುವರೆಗೆ ಸುರತ್ಕಲ್ ಟೋಲ್‌ಪ್ಲಾಜಾದಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಇತ್ತು. ಆದರೆ, ಆ ವಾಹನಗಳು ಇನ್ನು ಹೆಜಮಾಡಿ ಹಾದುಹೋಗಬೇಕಿದ್ದರೆ ಸುರತ್ಕಲ್‌ನದ್ದನ್ನೂ ಸೇರಿಸಿ ಪೂರ್ತಿ ಸುಂಕ ಪಾವತಿಸಬೇಕಾಗುತ್ತದೆ. ಇತರ ವಾಹನಗಳ ಪೈಕಿ ಮಂಗಳೂರಿನಿಂದ ಹೆಜಮಾಡಿಯವರೆಗೆ ಮಾತ್ರ ಪ್ರಯಾಣಿಸುವವರಿಗೆ ಸುಂಕ ನೀಡಬೇಕಿಲ್ಲ. ಹೆಜಮಾಡಿ ದಾಟಬೇಕಾದವರು ಅಧಿಕ ಸುಂಕ ನೀಡಬೇಕಾಗುತ್ತದೆ. ಉಡುಪಿ ಕಡೆಯಿಂದ ಮೂಲ್ಕಿಗೆ ಬರುವವರೂ ಇನ್ನು ಸುರತ್ಕಲ್‌ನ ಸುಂಕವನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ. ಹೀಗಾಗಿ ಸುರತ್ಕಲ್ ಟೋಲ್‌ಗೇಟ್ ವಿಲೀನಗೊಂಡಿರುವುದರಿಂದ ವಾಹನ ಮಾಲೀಕರಿಗೆ ಅನುಕೂಲಕ್ಕಿಂತ ಅನನುಕೂಲವೇ ಜಾಸ್ತಿ. ಸುರತ್ಕಲ್‌ನಲ್ಲಿ ಟೋಲ್ ಪ್ಲಾಜಾ ಇರುವುದಿಲ್ಲ ಎಂಬುದಷ್ಟೇ ಆಗಿರುವ ಬದಲಾವಣೆ. ಎರಡೂ ಟೋಲ್‌ಗೇಟ್‌ಗಳಲ್ಲಿ ಈ ಹಿಂದೆ ಸಂಗ್ರಹಿಸಲಾಗುತ್ತಿದ್ದ ಸುಂಕಕ್ಕಿಂತ ಹೆಚ್ಚೇ ಟೋಲ್ ಇನ್ನು ಹೆಜಮಾಡಿಯಲ್ಲಿ ಸಂಗ್ರಹವಾಗಬಹುದು ಎಂಬ ಲೆಕ್ಕಾಚಾರಗಳಿವೆ.

    ಭದ್ರತೆ ಕೋರಿದ ಪ್ರಾಧಿಕಾರ: ಹೆಜಮಾಡಿಯಲ್ಲಿ ಸಂಯೋಜಿತ ಶುಲ್ಕ ಸಂಗ್ರಹಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿಕೊಂಡಿದೆ. ಯಾವುದೇ ಅಡ್ಡಿ ಅಥವಾ ತೊಂದರೆಯಾಗದಂತೆ ನೋಡಿಕೊಳ್ಳಲು ಎನ್‌ಎಚ್‌ಎಐ ಅಧ್ಯಕ್ಷರು ಈಗಾಗಲೇ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಹೆಜಮಾಡಿಯಲ್ಲಿ ಟೋಲ್ ಶುಲ್ಕ ಸಂಗ್ರಹಕ್ಕೆ ಅಡ್ಡಿ ಅಥವಾ ನಿಲುಗಡೆಯಿಂದ ಯಾವುದೇ ನಷ್ಟ ಉಂಟಾದರೆ, ಎನ್‌ಎಚ್‌ಎಐ ಮತ್ತು ರಾಜ್ಯ ಸರ್ಕಾರದ ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರವು ಅದನ್ನು ಮರುಪಾವತಿಸುವ ಹೊಣೆಗಾರಿಕೆ ಹೊಂದಿದೆ. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರಿಂದ ಯಾವುದೇ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಮಾಡಲಿದೆ.

    ಉಡುಪಿ ಡಿಸಿಗೆ ಪತ್ರ: ಎನ್‌ಎಚ್‌ಎಐ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಎಚ್.ಎಸ್.ಲಿಂಗೇ ಗೌಡ ಗುರುವಾರ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಹೆಜಮಾಡಿ ಟೋಲ್‌ನಲ್ಲಿ ಪರಿಷ್ಕೃತ ಶುಲ್ಕ ಸಂಗ್ರಹಿಸಲು ಜಿಲ್ಲಾಡಳಿತದ ನೆರವು ಕೋರಿದ್ದಾರೆ. ಪರಿಷ್ಕೃತ ಟೋಲ್ ಶುಲ್ಕ ವಸೂಲಿ ಆರಂಭಿಸಿದಾಗ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡುವಂತೆ ಮನವಿ ಮಾಡಿದ್ದಾರೆ.

    ದೊಡ್ಡ ವಂಚನೆ: ಇದು ಕರಾವಳಿ ಕರ್ನಾಟಕದ ಜನತೆಗೆ ಮಾಡುತ್ತಿರುವ ದೊಡ್ಡ ವಂಚನೆ. ಸುರತ್ಕಲ್ ಪ್ಲಾಜಾವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಸಮಿತಿ ಮತ್ತು ಜನರು ಒತ್ತಾಯಿಸುತ್ತಿದ್ದಾಗ, ಎನ್‌ಎಚ್‌ಎಐ ಅದನ್ನು ಹೆಜಮಾಡಿಯ ಜನವಿರೋಧಿ ನಿಲುವಿನ ಜೊತೆಗೆ ವಿಲೀನಗೊಳಿಸಿದೆ. ಜನರ ಭಾವನೆ ಮತ್ತು ಕಷ್ಟಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವ ಜನಪ್ರತಿನಿಧಿಗಳು ಮಾತ್ರ ಇಂತಹ ನಿರ್ಧಾರವನ್ನು ಬೆಂಬಲಿಸಲು ಸಾಧ್ಯ. ಈ ಕ್ರಮವನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts