More

    ಮಾತೃ ಭಾಷೆಯಲ್ಲಿ ಶಿಕ್ಷಣ ಅಭಿವೃದ್ಧಿಗೆ ಪೂರಕ

    ರಾಯಚೂರು: ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಮಕ್ಕಳ ಅಭಿವೃದ್ಧಿಗೆ ಪೂರಕವಾಗಿದ್ದು, ಮನುಷ್ಯ ಯಾವ ಭಾಷೆಯಲ್ಲಿ ಕನಸು ಕಾಣುತ್ತಾನೋ ಅದೇ ಭಾಷೆಯಲ್ಲಿ ಶಿಕ್ಷಣ ಸಿಕ್ಕಾಗ ಮಾತ್ರ ಆ ವ್ಯಕ್ತಿ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವೀರೇಶ ಹೇಳಿದರು.
    ಸ್ಥಳೀಯ ಪಿಸಿಪಿಬಿ ಪದವಿ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಮೂಲ ಬುನಾದಿ ಭಾಷೆಯಾಗಿದ್ದು, ಭಾಷೆ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
    ಭಾಷೆ ನಾಶವಾದರೆ ಸಂಸ್ಕೃತಿ ನಾಶವಾಗುತ್ತಿದ್ದು, ಭಾಷೆಯಲ್ಲಿ ಸಂಸ್ಕೃತಿ, ಆಚಾರ ವಿಚಾರಗಳಿವೆ. ಶಿಕ್ಷಣದಲ್ಲಿ ಮಾತೃ ಭಾಷೆ ಮಹತ್ವದ ಸ್ಥಾನ ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ಹೇಳಿದರು.
    ಕಾಲೇಜು ಪ್ರಾಚಾರ್ಯ ಮಾರುತಿ ಮಾತನಾಡಿ, ಯುವಕರಿಗೆ ತಾವು ಮಾಡುವ ಕೆಲಸದ ಬಗ್ಗೆ ನಿಖರತೆ, ಸ್ಪಷ್ಟತೆ ಮತ್ತು ಅಧ್ಯಯನಶೀಲತೆ ಇರಬೇಕು. ಸ್ಪಷ್ಟ ಗುರಿ ಇಟ್ಟುಕೊಂಡು ಓದಬೇಕು. ಯಾರ ಜೀವನದಲ್ಲಿ ಉತ್ಸಾಹ, ಆತ್ಮವಿಶ್ವಾಸ ಇರುತ್ತದೆಯೋ ಅವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
    ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಸಾಕಷ್ಟು ಜನ ಪದವಿ ಪಡೆದಿರುತ್ತಾರೆ. ಆದರೆ ಪ್ರಜ್ಞಾವಂತಿಕೆ ಇರುವುದಿಲ್ಲ. ಪ್ರಜ್ಞಾವಂತಿಕೆ ಇರದ ಪದವಿ ವ್ಯರ್ಥವಾಗಿದೆ. ಕನ್ನಡ ನಾಡಿನ ಅಸ್ಮಿತೆ ಕನ್ನಡ ಭಾಷೆಯಾಗಿದ್ದು, ಅದನ್ನು ಉಳಿಸಿ, ಬೆಳೆಸಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
    ಸೇವಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಪದಾಕಾರಿಗಳಾದ ವಿಜಯರಾಜೇಂದ್ರ, ರಾವುತ್‌ರಾವ್ ಬರೂರು, ಯಲ್ಲಪ್ಪ ಮರ್ಚೆಡ್, ರೇಖಾ ಬಡಿಗೇರ, ಉಪನ್ಯಾಸಕರಾದ ಮಹೇಶ್ವರಿ, ನೇತ್ರಾವತಿ, ರಾಜಶ್ರೀ, ಸರಸ್ವತಿ, ಹನುಮಂತ ಹೊಸಪೇಟೆ, ಪ್ರಾಣೇಶ, ಭೀಮರಾಯ ರಸ್ತಾಪುರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts