More

    ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ಕ್ರಮ, ರೈತರು ಭಯ ಪಡಬೇಕಿಲ್ಲ: ಸಂಸದ ರಾಜಾ ಅಮರೇಶ್ವರ ನಾಯಕ

    ರಾಯಚೂರು: ಸಿಸಿಐ ಮೂಲಕ ಒಂದು ಹತ್ತಿ ಗಿರಣಿಯಲ್ಲಿ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಮತ್ತೊಂದು ಗಿರಣಿಯಲ್ಲಿ ಖರೀದಿ ಆರಂಭಿಸಲಾಗುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

    ಸಿಸಿಐನಿಂದ ಹತ್ತಿ ಖರೀದಿ ಪ್ರಕ್ರಿಯೆ ನಡೆಯುತ್ತಿರುವ ನಗರದ ಬಾವಲ್ ಕಾಟನ್ ಮಿಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಎಪಿಎಂಸಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು. ಹತ್ತಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರು ಭಯ ಬೀಳುವ ಅಗತ್ಯವಿಲ್ಲ. 2019ರ ನ.18 ರಿಂದ ಖರೀದಿ ಪ್ರಕ್ರಿಯೆ ಆರಂಭಿಸಲಾಗಿತ್ತು. 2020ರ ಮಾ.17ರವರೆಗೆ 1,100 ರೈತರಿಂದ 48 ಸಾವಿರ ಕ್ವಿಂಟಾಲ್ ಹತ್ತಿ ಖರೀದಿಸಲಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು ಎಂದರು.

    ಪುನಾ ಮೇ 4 ರಿಂದ ಹತ್ತಿ ಖರೀದಿ ಪ್ರಕ್ರಿಯೆ ಪುನಾರಂಭಿಸಲಾಗಿದ್ದು, ಈವರೆಗೆ 44 ರೈತರಿಂದ 3,200 ಕ್ವಿಂಟಾಲ್ ಹತ್ತಿ ಖರೀದಿ ನಡೆಸಲಾಗಿದೆ. ದೇವದುರ್ಗದಲ್ಲಿ 2,500 ರೈತರಿಂದ 9 ಸಾವಿರ ಕ್ವಿಂಟಾಲ್ ಹತ್ತಿ ಖರೀದಿಸಲಾಗಿದ್ದು, ಗುಣಮಟ್ಟವಿಲ್ಲ ಎನ್ನುವ ನೆಪ ಹೇಳದಂತೆ ನಿಯಮಾವಳಿಯಂತೆ ಖರೀದಿ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಬಲ ಬೆಲೆಯಲ್ಲಿ 58 ಸಾವಿರ ಕ್ವಿಂಟಾಲ್ ಜೋಳ ಹಾಗೂ 2 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ತಾಂತ್ರಿಕ ಸಮಸ್ಯೆ ಎದುರಾಗಿರುವ ರೈತರನ್ನು ಬಿಟ್ಟು ಉಳಿದವರ ಖಾತೆಗೆ ಹಣ ಜಮಾ ಮಾಡಲಾಗಿದೆ.

    ಎಪಿಎಂಸಿಗಳನ್ನು ಖಾಸಗೀಕರಣಗೊಳಿಸುವ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ. ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ರೈತರ ಹಿತದೃಷ್ಟಿಯಲ್ಲಿ ಸರ್ಕಾರ ಸೂಕ್ತ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು. ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಗಂಗಾಧರ ನಾಯಕ, ಮುಖಂಡರಾದ ನಾಗನಗೌಡ ಹರವಿ, ಸಿದ್ದನಗೌಡ ನೆಲಹಾಳ, ಬಾಬುರಾವ್, ಸಣ್ಣ ನರಸಿಂಹ ನಾಯಕ, ಮುಕ್ತಿಯಾರ್, ಎಪಿಎಂಸಿ ಕಾರ್ಯದರ್ಶಿ ರಂಗನಾಥ ದೇಸಾಯಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts