More

    ಭ್ರಷ್ಟ ಅಧಿಕಾರಿ ರಕ್ಷಣೆಗೆ ಬಿಜೆಪಿ ಸದಸ್ಯರ ಸಾಥ್ : ಪ್ರತಿಭಟನಕಾರರ ಆರೋಪ

    ಮುದ್ದೇಬಿಹಾಳ : ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ತಮ್ಮ ಪತಿ ಹೆಸರಿನಲ್ಲಿ 2.75 ಲಕ್ಷ ರೂ. ವಾಹನ ಬಾಡಿಗೆಯನ್ನು ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಪಾವತಿಸಿದ್ದಾರೆ ಎಂದು ತನಿಖಾ ತಂಡವೇ ನಿಖರವಾಗಿ ತಿಳಿಸಿದ್ದು, ಆ ಕುರಿತಂತೆ ಪೌರಾಡಳಿತ ನಿರ್ದೇಶಕರಿಗೆ ಡಿಸಿ ಅವರು ತಪ್ಪಿತಸ್ಥ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಬರೆದಿರುವ ಪತ್ರವನ್ನು ಬಿಜೆಪಿ ಸದಸ್ಯರು ಮೊದಲು ಓದಿಕೊಳ್ಳಲಿ ಎಂದು ಪುರಸಭೆ ಸದಸ್ಯ ಮಹೆಬೂಬ್ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಹೇಳಿದರು.

    ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸದಸ್ಯರ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.

    ಜುಲೈ 23, 2018ರ ಸಾಮಾನ್ಯ ಸಭೆಯ ಠರಾವಿನಲ್ಲಿ ವಾಹನ ಬಾಡಿಗೆಗೆ ಹಣ ಪಾವತಿಸುವಂತೆ ಮುಖ್ಯಾಧಿಕಾರಿಯೇ ಸಹಿ ಮಾಡಿ ತಮ್ಮ ಪತಿಯ ಹೆಸರಿನಲ್ಲಿ ಹಣ ತೆಗೆಸುತ್ತಾರೆ. ಆಗ ಮುಖ್ಯಾಧಿಕಾರಿಗೆ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

    ಬಿಜೆಪಿ ಸದಸ್ಯರು ಸ್ವಂತ ಬುದ್ಧಿಯಿಂದ ಮಾತನಾಡುತ್ತಿಲ್ಲ. ಅವರು ಮುಖ್ಯಾಧಿಕಾರಿ ಗುಲಾಮರಂತೆ ವರ್ತಿಸುತ್ತಿದ್ದಾರೆ. ಮುಖ್ಯಾಧಿಕಾರಿ ಬರೆದುಕೊಟ್ಟಿದ್ದನ್ನೇ ಮಾಧ್ಯಮದವರ ಎದುರಿಗೆ ಓದಿ ಹೇಳಿದ್ದಾರೆ. ನಾವು ಕೈಗೊಂಡಿರುವ ಧರಣಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳು ಉತ್ತರ ಕೊಡುತ್ತಾರೆ. ವಿರೋಧ ಪಕ್ಷದಲ್ಲಿರುವ ಇವರು ನಮಗೆ ಉತ್ತರ ಕೊಡುವವರು ಯಾರು? ಎಂದು ಪ್ರಶ್ನಿಸಿದರು. ನಾವು ಯಾವುದಕ್ಕೂ ಹೆದರುವುದಿಲ್ಲ. ಜಗ್ಗುವುದಿಲ್ಲ. ನಮ್ಮ ತಪ್ಪಿದ್ದರೆ ದಾಖಲೆಗಳ ಸಮೇತ ಹೋರಾಟಕ್ಕೆ ಕೂಡಲಿ. ಅಧಿಕಾರಿಗಳಿಗೆ ಕೇಳಲಿ, ಜನರಿಗೆ ನಮ್ಮ ತಪ್ಪು ಏನೆಂಬುದನ್ನು ವಿವರಿಸಿ ಹೇಳಲಿ ಎಂದು ಸವಾಲು ಹಾಕಿದರು.

    ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ, ಹೋರಾಟಕ್ಕೆ ಕುಳಿತಿರುವುದು ಇಬ್ಬರೇ ಸದಸ್ಯರು ಅಲ್ಲ. ಮಾಜಿ ಶಾಸಕ ಸಿ.ಎಸ್. ನಾಡಗೌಡ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸೇರಿ ತಾಳಿಕೋಟೆ ಹಾಗೂ ನಮ್ಮ ಕೆಲವು ಪುರಸಭೆ ಸದಸ್ಯರು ಬೆಂಬಲಿಸಿದ್ದಾರೆ. ಸಾರ್ವಜನಿಕರನ್ನು ಕರೆದು ತಂದು ಕೂಡಿಸುವುದಕ್ಕೆ ಸಾರ್ವಜನಿಕರಿಗೇನು ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವುದಿಲ್ಲವೇ? ವಿರೋಧಿಸುವವರು ಏನೇನೋ ಹೇಳುತ್ತಾರೆ ಎಂದು ಅವರು ಹೇಳಿದಂತೆ ಕುಣಿಯುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.
    ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಬಾಡಿಗೆದಾರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts