More

    ದಲಿತ ಸಿಎಂ ಹೋರಾಟ ಬೆಂಬಲಿಸುವೆ ; ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿಕೆ

    ತುಮಕೂರು: ಎಲ್ಲ ಸಮುದಾಯಗಳಿಗೆ ರಾಜಕೀಯ ಅಧಿಕಾರ ಲಭ್ಯವಾಗಬೇಕೆಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ರಾಜ್ಯದಲ್ಲಿ ದಲಿತರೊಬ್ಬರು ಸಿಎಂ ಆಗಬೇಕು, ಡಾ.ಜಿ.ಪರಮೇಶ್ವರ್ ಸೇರಿ ದಲಿತರೊಬ್ಬರು ಮುಖ್ಯಮಂತ್ರಿಯಾಗಲು ನಡೆಸುವ ಎಲ್ಲ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

    ನಗರದ ಕನ್ನಡ ಭವನದಲ್ಲಿ ಮಂಗಳವಾರ ಛಲವಾದಿ, ಆದಿಜಾಂಭವ ವಸತಿಹೀನ ಹಾಗೂ ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅವಕಾಶವಂಚಿತ ಪರಿಶಿಷ್ಟ ಸಮುದಾಯ ಹಕ್ಕುಗಳಿಗಾಗಿ ಹೋರಾಟ ನಡೆಸಲು ಒಂದೇ ವೇದಿಕೆಯಲ್ಲಿ ಭಾಗವಹಿಸುವುದು ಇತರ ಸಣ್ಣಪಟ್ಟ ಸಮುದಾಯಗಳಿಗೆ ಮಾದರಿಯಾಗಿದೆ ಎಂದರು. ಉಪಪಂಗಡದ ಹೆಸರಿನಲ್ಲಿ ಹರಿದು ಹಂಚಿದ್ದವರನ್ನು ಒಂದು ಮಾಡುವುದೇ ಸವಾಲಾಗಿದೆ ಎಂದರು.

    ಇಂತಹ ಸಂದರ್ಭದಲ್ಲಿ ಶತವಾನಗಳಿಂದ ಶೋಷಣೆಗೆ ಒಳಗಾಗಿದ್ದರೂ ಕೆಲವರು ಉರುಳಿಸಿದ ದಾಳಕ್ಕೆ ಬಲಿಯಾಗಿ, ಹಂತ ಹಂತವಾಗಿ ಎಲ್ಲ ಅಧಿಕಾರಗಳಿಂದ ವಂಚಿತವಾಗುತ್ತಿದ್ದ ಎಡ, ಬಲ ಸಮುದಾಯಗಳು ಒಂದಾಗಿರುವುದು ಒಂದು ಸ್ಪಷ್ಟ ಸಂದೇಶ ನೀಡಿದೆ ಎಂದರು. ಆನ್‌ಲೈನ್ ಮೂಲಕ ಮಾತನಾಡಿದ ಶಾಸಕ ಡಾ.ಜಿ.ಪರಮೇಶ್ವರ್, ಎಡ, ಬಲಗಳು ಒಂದು ವೇದಿಕೆಯಡಿ ಬರುವುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಯುವಜನರು ಹೆಜ್ಜೆ ಇರಿಸಿರುವುದು ಸ್ವಾಗತಾರ್ಹ. ಶೋಷಿತರ ನಡುವೆಯೇ ಈ ರೀತಿಯ ವಿಭಾಗಗಳು ಏಕೆ ಆದವು ಎಂಬುದು ನಿಜಕ್ಕೂ ಯಕ್ಷಪ್ರಶ್ನೆಯಾಗಿದೆ ಎಂದರು.

    ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ವಸತಿಹೀನ, ಕೃಷಿ ಭೂಮಿರಹಿತ ಛಲವಾದಿ, ಆದಿಜಾಂಭವ ಸಮುದಾಯದ ಜನರಿಗೆ ನ್ಯಾಯ ಕೊಡಿಸಬೇಕು, ಸಂಘಟನೆ ಉದ್ದೇಶಕ್ಕೆ ನನ್ನ ಬೆಂಬಲವಿದೆ. ನಗರದಲ್ಲಿ ವಸತಿಹೀನರಿಗೆ ಮನೆ ನಿರ್ಮಿಸಿ ಕೊಡಲು 17ಎಕರೆ ಜಾಗ ಗುರುತಿಸಿದ್ದು, ಡಿಮಾಂಡ್ ಸರ್ವೇಗೆ ಅರ್ಜಿ ಆಹ್ವಾನಿಸಲಾಗುವುದು ಎಂದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಪುತ್ಥಳಿ ಅನಾವರಣಕ್ಕೆ ಅಗತ್ಯ ಕ್ರಮ ಕೈಗೊಂಡು, ಮುಖ್ಯಮಂತ್ರಿಗಳಿಂದಲೇ ಶಂಕುಸ್ಥಾಪನೆ ನೆರವೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಾಲಿಕೆ ಆಯುಕ್ತ ರೇಣುಕಾ, ಛಲವಾದಿ, ಆದಿಜಾಂಭವ ವಸತಿಹೀನ ಮತ್ತು ಕೃಷಿಭೂಮಿ ರಹಿತ ಕ್ಷೇವಾಭಿವೃದ್ಧಿ ಸಂದ ಅಧ್ಯಕ್ಷ ರಂಗಯ್ಯ, ಉಪಾಧ್ಯಕ್ಷ ಪಿ.ಎನ್.ರಾಮಯ್ಯ, ಭಾನುಪ್ರಕಾಶ್, ಎಂ.ವಿ.ರಾವೇಂದ್ರ ಸ್ವಾಮಿ, ಮಹದೇವ, ನಾಗರಾಜು, ಯೋಗೀಶ್, ನರಸಿಂಹಮೂರ್ತಿ, ಶಿವರಾಜು, ಜಗದೀಶ್ ಮತ್ತಿತರರು ಇದ್ದರು.

    ಡಾ.ಬಿ.ಆರ್.ಅಂಬೇಡ್ಕರ್ ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪರಿಹಾರದ ಕೀಲಿ ಕೈ ಶಿಕ್ಷಣ ಎಂದಿದ್ದರು, ಜತೆಗೆ ಶಿಕ್ಷಣ ರಾಜಕೀಯ ಅಧಿಕಾರ ಪಡೆಯಲು ಅನುಕೂಲವಾಗಬೇಕು ಎಂಬ ಕನಸು ಹೊಂದಿದ್ದರು. ಸಾಕಷ್ಟು ಮುಖಂಡರ ಹೋರಾಟ ನಮಗೆ ಮಾದರಿಯಾಗಬೇಕು.
    ಡಿ.ಸಿ.ಗೌರಿಶಂಕರ್, ಗ್ರಾಮಾಂತರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts