More

    ದಶಕಗಳ ಬಳಿಕ ಬೇಸಿಗೆ ಮಳೆ

    ಗೋಪಾಲಕೃಷ್ಣ ಪಾದೂರು, ಉಡುಪಿ

    ರಾಜ್ಯದಲ್ಲಿ ಈ ಬಾರಿ ಜೂನ್ 6ರಿಂದ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಏಪ್ರಿಲ್ ಅಂತ್ಯದಲ್ಲಿ ಕಾಣಿಸಿಕೊಂಡಿರುವ ಬೇಸಿಗೆ ಮಳೆ ನೀರಿನ ಬವಣೆ ನೀಗಿಸಲಿದೆ. ಕೃಷಿಗೂ ಅನುಕೂಲವಾಗಿದೆ.

    ಎರಡು, ಮೂರು ದಶಕಗಳ ಹಿಂದೆ ಏಪ್ರಿಲ್‌ನಲ್ಲಿ ಪೂರ್ವ ಮಾನ್ಸೂನ್ ಸಾಮಾನ್ಯವಾಗಿತ್ತು. ಆದರೆ ಕಳೆದ 10-15 ವರ್ಷಗಳಿಂದ ಇಂಥ ಮಳೆ ಕಡಿಮೆ. ಈ ವರ್ಷ ಪೂರ್ವ ಮುಂಗಾರು ಮಳೆ ಕಡು ಬೇಸಿಗೆಯಲ್ಲಿ ಸುರಿಯುತ್ತಿರುವುದು ಆಶಾದಾಯಕ ಬೆಳವಣಿಗೆ. ತೋಟಗಾರಿಕಾ ಬೆಳೆ, ಗದ್ದೆ ಹದ ಮಾಡುವವರಿಗೆ, ಉಳುಮೆ ಪೂರ್ವ ತಯಾರಿಗೆ ಅನುಕೂಲ ಎಂಬುದು ತಜ್ಞರ ಅಭಿಪ್ರಾಯ.
    ಬೇಸಿಗೆ ಮಳೆಯಿಂದಾಗಿ ಈ ಬಾರಿ ನೀರಿನ ಬವಣೆ ದೂರವಾಗಿದೆ. ಕಳೆದ ವರ್ಷ ಈ ಸಮಸ್ಯೆ ಎದುರಾಗಿತ್ತು. ಆದರೆ ಈ ವರ್ಷ ರಾಜ್ಯದ ವಿವಿಧೆಡೆ ಸುಮಾರು 20 ಮಿ.ಮೀ.ನಿಂದ 25 ಮಿ.ಮೀ.ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ಭಾಗದಲ್ಲೂ ಉತ್ತಮ ಮಳೆ ಸುರಿದ ಪರಿಣಾಮ ಪ್ರಮುಖ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಲಿದ್ದು, ಕರಾವಳಿ ಭಾಗಗಳಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಬರದ ಪರಿಸ್ಥಿತಿ ಇರಲಾರದು. ವಾತಾವರಣ ತಂಪಾಗಿ ವಿಪರೀತ ಸೆಕೆಯಿಂದ ಬಳಲುವುದು ತಪ್ಪಲಿದೆ. ಮೊದಲ ಮಳೆಗೆ ಸಿಡಿಲು ಹೆಚ್ಚಿರುವುದರಿಂದ ವಾತಾವರಣದ ಸಾರಜನಕ ಅಂಶ ಮಳೆ ನೀರಿನೊಂದಿಗೆ ಭೂಮಿಯನ್ನು ಸೇರುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ ಎಂಬುದು ತಜ್ಞರ ಅಭಿಮತ.

    ಅತಿವೃಷ್ಟಿ ಒಳ್ಳೆಯದಲ್ಲ
    ಬೇಸಿಗೆಯಲ್ಲಿ ಮಳೆ ಸ್ವಲ್ಪ ದಿನ ಬಂದು ಹೋದರೆ ಚಿಂತೆಯಿಲ್ಲ. ಸತತ ಮಳೆ ಸುರಿದರ ಮುಂಗಾರು ಮಳೆಯ ಪ್ರಮಾಣದಲ್ಲಿ ವ್ಯತ್ಯಯವಾಗುವ ಸಂಭವ ಇರುತ್ತದೆ. ಮೋಡ ಸೃಷ್ಟಿಗೆ ಭೂಮಿ ತಾಪಮಾನ ಹೆಚ್ಚಿರಬೇಕು. ಭೂಮಿ ಕಾದಷ್ಟು ಮಳೆಯ ಪ್ರಮಾಣವೂ ಹೆಚ್ಚು ಎನ್ನುತ್ತಾರೆ ಹವಾಮಾನ ತಜ್ಞರು.

    ಸಿಡಿಲಿನ ಮಾಹಿತಿಗೆ ದಾಮಿನಿ ಆ್ಯಪ್
    ಪೂರ್ವ ಮುಂಗಾರು ಮಳೆ ಸಂದರ್ಭದ ಸಿಡಿಲು-ಮಿಂಚು ಅಪಾಯಕಾರಿ. ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ. ಸಿಡಿಲಿನ ಮಾಹಿತಿ ನೀಡಲು ಕೇಂದ್ರ ಭೂವಿಜ್ಞಾನ ಸಚಿವಾಲಯದ ಸಹಯೋಗದಲ್ಲಿ ಪುಣೆಯ ಐಐಟಿಎಂ ದಾಮಿನಿ ಆ್ಯಪ್ ಅಭಿವೃದ್ಧಿಪಡಿಸಿದೆ. ಮೊಬೈಲ್ ರೇಡಿಯೇಶನ್ ಅಧಾರದಲ್ಲಿ 20 ಕಿ.ಮೀ.ವ್ಯಾಪ್ತಿಯಲ್ಲಿ ಸಂಭವಿಸಲಿರುವ ಮಿಂಚಿನ ಮಾಹಿತಿ ಈ ಆ್ಯಪ್ ಮೂಲಕ 3 ಗಂಟೆ ಮೊದಲೇ ಬಳಕೆದಾರರಿಗೆ ಲಭ್ಯವಾಗುತ್ತದೆ. ಈ ಅವಧಿಯಲ್ಲಿ ಜನರು ಸುರಕ್ಷಾ ಕ್ರಮ ಕೈಗೊಳ್ಳಬಹುದು. ಮೊಬೈಲ್ ಲೊಕೇಶನ್ ಸುತ್ತಮುತ್ತ 20 ಕಿ.ಮೀ.ವ್ಯಾಪ್ತಿಯಲ್ಲಿ ಅಪಾಯವಿದ್ದರೆ ರೆಡ್ ಅಲರ್ಟನ್ನೂ ಇದು ತೋರಿಸುತ್ತದೆ. 40 ಕಿ.ಮೀ. ವ್ಯಾಪ್ತಿಯಲ್ಲಿ ಸಿಡಿಲು ಹೆಚ್ಚಿದ್ದರೆ ಆರೆಂಜ್, ತೊಂದರೆ ಇಲ್ಲದಿದ್ದರೆ ಗ್ರೀನ್ ಅಲರ್ಟ್ ನೀಡುತ್ತದೆ.

    2-3 ದಶಕದ ಹಿಂದೆ ಬೇಸಿಗೆ ಮಳೆ ಬರುತ್ತಿತ್ತು. ನಂತರ ದಿನಕ್ಕೆ ಸೀಮಿತವಾಗಿತ್ತು. ಅದರೆ ಈ ವರ್ಷ ಸತತ ಒಂದು ವಾರ ಮಳೆ ಸುರಿದಿದೆ. ಜಿಲ್ಲೆಯಲ್ಲಿ 20ರಿಂದ 25 ಮಿ.ಮೀ.ಮಳೆ ಸುರಿದಿದ್ದು, ನೀರಿನ ಬವಣೆ ನಿವಾರಣೆಯಾಗಿದೆ. ಪ್ರತೀ ವರ್ಷ 20 ಮಿ.ಮೀ. ತನಕವಾದರೂ ಪೂರ್ವ ಮುಂಗಾರು ಮಳೆ ಬರಬೇಕು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಸಾಮಾನ್ಯ ಮುಂಗಾರು ಇರಲಿದೆ.
    – ಡಾ.ಕೆ.ಎಸ್.ಕಾಮತ್, ಪ್ರಾಂಶುಪಾಲರು, ಕೃಷಿ ಡಿಪ್ಲೊಮಾ ಕಾಲೇಜು, ಬ್ರಹ್ಮಾವರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts