More

    ಐರಿ ಸಮಾಜದ ಕ್ರೀಡಾಕೂಟ ಸಂಪನ್ನ

    ಮಡಿಕೇರಿ:
    ಮೂರ್ನಾಡುವಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಐರಿ ಜನಾಂಗದ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಕ್ರೀಡಾ ಕೂಟಕ್ಕೆ ಬುಧವಾರ ವಿದ್ಯುಕ್ತ ತೆರೆ ಬಿದ್ದಿದೆ.

    ಕ್ರಿಕೆಟ್‌ನಲ್ಲಿ ತಟ್ಟಂಡ ಬೊಮ್ಮಂಜಿಕೇರಿ ತಂಡ ಗೆಜ್ಜೆತಂಡ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ತಟ್ಟಂಡ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆಲಚಂಡ ತಂಡವನ್ನ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

    ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ತಟ್ಟಂಡ ತಂಡ ಏಳು ಬಾರಿಯ ಚಾಂಪಿಯನ್ ಬಲ್ಲಮಾವಟಿ ಐರೀರ ತಂಡವನ್ನು ೧೨ ರನ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಲಚಂಡ ತಂಡ ಮುಲ್ಲೈರಿರ ತಂಡವನ್ನು ೩೫ ರನ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಪ್ರಶಸ್ತಿ ವಿಜೇತ ತಂಡಕ್ಕೆ ೨೫ ಸಾವಿರ ರೂ ಮೌಲ್ಯದ ಗೆಜ್ಜೆ ತಂಡ್ ಮತ್ತು ೧೫ ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು. ಕ್ರಿಕೆಟ್ ಹಣಾಹಣಿಯಲ್ಲಿ ಒಟ್ಟು ೨೦ ತಂಡಗಳು ಪಾಲ್ಗೊಂಡಿದ್ದವು.

    ಮಹಿಳೆಯರಿಗಾಗಿ ನಡೆದ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಹುದಿಕೇರಿಯ ಮಂಜನೈರಿರ ಕುಟುಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಈ ತಂಡ ಬಬ್ಬೀರ ಬೇಂಗ್ ನಾಡ್ ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಸೆಮಿಫೈನಲ್ ಪಂದ್ಯದಲ್ಲಿ ಮಂಜನೈರಿರ ತಂಡ ಹಾಲೇರಿ ಕೇತೋರಿ ಒಕ್ಕವನ್ನ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರೆ ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ಬಬ್ಬಿರ ತಂಡ ಐಮಂಡ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

    ಇದಕ್ಕೂ ಮೊದಲು ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಕಾವೇರಿ ಹುಟ್ಟಿದಾಗಿನಿಂದಲೇ ಕೊಡಗಿನಲ್ಲಿ

    ಐರಿ ಜನಾಂಗ ನೆಲೆಸಿದ್ದು, ಜಿಲ್ಲೆಯ ಆಭರಣ ಮತ್ತು ಆಯುಧ ಸಂಸ್ಕೃತಿಗೆ ಈ ಜನಾಂಗದ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಜನಾಂಗದ ಹಲವು ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ಮಟ್ಟದಲ್ಲಿ ಅಗತ್ಯ ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಐರಿ ಸಮಾಜ ಈಗಾಗಲೇ ಅರಮೇರಿ ಬಳಿ ೧.೨೦ ಎಕರೆ ಜಾಗ ಖರೀದಿಸಿದ್ದು ಸಮಾಜ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸಮಾಜ ನಿರ್ಮಾಣ ಸಂಪೂರ್ಣಗೊಳಿಸುವ
    ವಿಶ್ವಾಸವಿದ್ದು ಇದಕ್ಕೆ ಜನಾಂಗ ಬಾಂಧವರು ಸಹಾಯ ಮಾಡುವಂತೆ ಕರೆ ನೀಡಿದರು. ಸರ್ಕಾರದಿಂದಲೂ ಅಗತ್ಯ ಅನುದಾನ ಒದಗಿಸಿಕೊಡುವಂತೆ ಶಾಸಕ ಪೊನ್ನಣ್ಣ ಅವರನ್ನು ಮನವಿ ಮಾಡಿದರು.

    ಇದೇ ಸಂದರ್ಭ ಎಂಬಿಬಿಎಸ್ ಪ್ರವೇಶ ಪಡೆದ ವಿದ್ಯಾರ್ಥಿ ಅಯ್ಯಣಿರ ಲಿಶಾನ್ ಅವರಿಗೆ ಸೋಮವಾರಪೇಟೆ ವಿಭಾಗದ ಎಸಿಎಫ್ ಎಎ ಗೋಪಾಲ ೨೫ ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಿದರು.
    ಬಳಿಕ ಮಾತನಾಡಿದ ಅವರು ಪ್ರತಿ ವರ್ಷ ಎಂಬಿಬಿಎಸ್ ಪ್ರವೇಶ ಪಡೆಯುವ ಒಬ್ಬ ಐರಿ ಜನಾಂಗದ ವಿದ್ಯಾರ್ಥಿಗೆ ೨೫ ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು.

    ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿರಾಜಪೇಟೆ ಶಿರಸ್ತೇದಾರ್ ಅಂಜಪಂಡ ಪ್ರಕಾಶ್, ಜನಾಂಗದ ಒಗ್ಗೂಡುವಿಕೆಗೆ ಈ ತರಹದ ಕ್ರೀಡಾಕೂಟಗಳು ಬಹಳ ಸಹಕಾರಿ ಎಂದರು.
    ಕಾರ್ಯಕ್ರಮದಲ್ಲಿ ಉದ್ಯಮಿ ಬೋಳೈರಿರ ದಿನೇಶ್, ಆರ್‌ಎಫ್‌ಒ ಮಾಲೆರ ಚರಣ್, ಐರಿ ಸಮಾಜ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ವಕೀಲ ಐಮಂಡ ನಾಚಪ್ಪ, ನಿವೃತ್ತ ಸೈನಿಕ ಮುಲ್ಲೈರಿರ ಸುಬ್ಬಯ್ಯ, ಐನಂಗಡ ಕಾರ್ಯಪ್ಪ, ಐರೀರ ಪ್ರೇಮಾ ಕಾರ್ಯುಪ್ಪ, ಮಾಲೆರ ಕಾವೇರಮ್ಮ ಉಮೇಶ್, ಐನಂಗಡ ಚಿತ್ರಾ, ಐನಂಗಡ ಡಾ. ದಿಲನ್ ಮುತ್ತಣ್ಣ, ಐಮಂಡ ರೂಪೇಶ್ ನಾಣಯ್ಯ, ಮುಲ್ಲೈರಿರ ರೋಷನ್ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಪುಟ್ಟ ಮಕ್ಕಳಿಗೆ ೭೫ ಮೀಟರ್ ಓಟ, ಮಹಿಳೆಯರಿಗೆ ಪಾಸಿಂಗ್ ದಿ ಬಾಲ್, ೫೦ ವರ್ಷ ಮೇಲ್ಪಟ್ಟ ಪುರುಷರಿಗೆ ೧೦೦ ಮೀಟರ್ ಓಟ ಸ್ಪರ್ಧೆ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts