More

    ಪುತ್ರಿಯ ನಡೆಗೆ ನೊಂದ ದಂಪತಿ ಆತ್ಮಹತ್ಯೆ : ಮನೆಬಿಟ್ಟು ಹೋಗಿ ಪ್ರಿಯಕರನೊಂದಿಗೆ ವಿವಾಹ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಪಾಲಕರು

    ಚನ್ನಪಟ್ಟಣ : ಮುದ್ದಾಗಿ ಸಾಕಿದ್ದ ಮಗಳು ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾದಳು ಎಂದು ಮನನೊಂದ ತಂದೆ-ತಾಯಿ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಾಲೂಕಿನ ತೆಂಕನಹಳ್ಳಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
    ಎಚ್. ಬ್ಯಾಡರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್(50) ಹಾಗೂ ಪತ್ನಿ ಶೈಲಜಾ(42) ಮೃತ ದಂಪತಿ. ಇವರ ಪುತ್ರಿ ಶಿಲ್ಪಾ ಇದೇ ಗ್ರಾಮದ ಪುನೀತ್ ಎಂಬ ಯುವಕನನ್ನು ಪ್ರೀತಿಸಿದ್ದಳು. ಇಬ್ಬರು ಒಂದೇ ಜಾತಿಯವರಾದರೂ ಯುವತಿಯ ಪಾಲಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಮೇ 30ರಂದು ಶಿಲ್ಪಾ ಪ್ರಿಯಕರನ ಜತೆ ದೇವಾಲಯದಲ್ಲಿ ಮದುವೆಯಾಗಿದ್ದಳು. ಇದರಿಂದ ನೊಂದ ಯುವತಿಯ ಪಾಲಕರು ತಮ್ಮ ತೋಟದ ಮಾವಿನ ಮರಕ್ಕೆ ನೇಣುಹಾಕಿಕೊಂಡಿದ್ದಾರೆ.

    ಎಂ.ಕೆ.ದೊಡ್ಡಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ದಂಪತಿಗಳ ಆತ್ಮಹತ್ಯೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಿಣವಾಗಿದೆ. ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

    ಮರ್ಯಾದೆಗಾಗಿ ಸಾವಿಗೆ ಶರಣು : ಎಚ್. ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ರಮೇಶ್, ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಹೆಸರುಗಳಿಸಿದ್ದರು. ಪಟೇಲ್ ಮನೆತನದವರಾದ ಇವರು, ಈ ಭಾಗದ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ವಿವಾದಗಳಿಗೆ ನ್ಯಾಯ ಒದಗಿಸುತ್ತಿದ್ದರು. ಪತ್ನಿ , ಪುತ್ರಿ ಹಾಗೂ ಪುತ್ರನ ಪುಟ್ಟ ಸಂಸಾರ ಇವರದ್ದಾಗಿತ್ತು. ಮಗಳು ಪ್ರೀತಿಸುತ್ತಿರುವ ವಿಚಾರ ತಿಳಿದಿದ್ದ ರಮೇಶ್, ಸಾಕಷ್ಟು ಬುದ್ದಿವಾದ ಸಹ ಹೇಳಿದ್ದರು.

    ಮನಸ್ಸು ಬದಲಾಯಿಸಿಕೊಳ್ಳುವ ಮಾತು ನೀಡಿದ್ದ ಮಗಳು ಏಕಾಏಕಿ ಓಡಿಹೋಗಿ ಮದುವೆಯಾಗಿದ್ದು ಇವರ ನೋವಿಗೆ ಕಾರಣವಾಗಿತ್ತು. ಈ ಹಿಂದಿನಿಂದಲೂ ಗ್ರಾಮದಲ್ಲಿ ಕಾಪಾಡಿಕೊಂಡ ನನ್ನ ಮಾನ ಮಾರ್ಯಾದೆ ಹಾಳಾಯಿತು ಎಂದು ನೋವಿನಲ್ಲಿದ್ದರು. ಈ ನೋವು ತಾಳಲಾರದೆ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತ ತಂದೆ ತಾಯಿಯ ಆತ್ಮಹತ್ಯೆ ನವವಿವಾಹಿತೆಗೆ ಬರಸಿಡಿಲು ಬಡಿದಿದ್ದರೆ, ಇತ್ತ ದಂಪತಿಗಳ ಪುತ್ರ ತನ್ನ ಪಾಲಕರನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts