More

    ರೈತರಿಗೆ ಸಿಗಬೇಕಾಗಿದೆ ಕಬ್ಬಿನ ಬಾಕಿ 43 ಕೋಟಿ ರೂಪಾಯಿ

    ರೇವಣಸಿದ್ದಪ್ಪ ಪಾಟೀಲ್

    ಬೀದರ್: ಕ್ರಷಿಂಗ್ ಮುಗಿದು ಮೂರು ತಿಂಗಳಾದರೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ಅನೇಕ ರೈತರ ಕೈಗೆ ಹಣ ಸೇರಿಲ್ಲ. ಕರೊನಾ ಸಂಕಷ್ಟದಲ್ಲೂ ಬಾಕಿ ಚುಕ್ತಾ ಆಗದ್ದರಿಂದ ಅನ್ನದಾತರನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿದಂತಾಗಿದೆ.

    ಪ್ರಸಕ್ತ ಹಂಗಾಮಿನಲ್ಲಿ ಸಹಕಾರ ಕ್ಷೇತ್ರದ ಎರಡು ಮತ್ತು ಖಾಸಗಿ ವಲಯದ ಎರಡು ಸಕ್ಕರೆ ಕಾರ್ಖಾನೆಗಳು ಕ್ರಷಿಂಗ್ ಮಾಡಿವೆ. ಭಾಲ್ಕಿ ತಾಲೂಕಿನ ಹುಣಜಿ ಹತ್ತಿರದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ(ಎಂಜಿಎಸ್ಸೆಸ್ಕೆ) ರೈತರ ಸಂಪೂರ್ಣ ಹಣ ಪಾವತಿಸಿದೆ. ಬೀದರ್ ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ(ಎನ್ನೆಸ್ಸೆಸ್ಕೆ), ಭಾಲ್ಕಿ ತಾಲೂಕಿನ ಬಾಜೋಳಗಾ ಹತ್ತಿರದ ಭಾಲ್ಕೇಶ್ವರ ಶುಗರ್ಸ್ ಹಾಗೂ ಮನ್ನಾಎಖೇಳ್ಳಿ ಹತ್ತಿರದ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ(ಬಿಕೆಎಸ್ಕೆ)ಗಳಿಂದ ರೈತರಿಗೆ 43.04 ಕೋಟಿ ರೂ. ಬರಬೇಕಾಗಿದೆ.

    ಕಬ್ಬು ಸಾಗಿಸಿದ ರೈತರ ಸಂಪೂರ್ಣ ಬಾಕಿಯನ್ನು ಜೂನ್ 15ರೊಳಗೆ ಪಾವತಿಸುವುದಾಗಿ ಸಕ್ಕರೆ ಕಾರ್ಖಾನೆ ಪ್ರಮುಖರು ತಿಳಿಸಿದ್ದಾರೆ. ಲಾಕ್ಡೌನ್ನಿಂದ ಕೆಲವೊಂದು ಸಮಸ್ಯೆ ಎದುರಾಗಿದ್ದರಿಂದ ಬಾಕಿ ಪಾವತಿಗೆ ಒಂದಿಷ್ಟು ವಿಳಂಬವಾಗಿದೆ ಎಂದು ಕಾರ್ಖಾನೆಯವರು ಹೇಳಿದ್ದಾರೆ. ಅದೇನಿದ್ದರೂ ಜೂ.15ರೊಳಗೆ ರೈತರ ಖಾತೆಗೆ ಪೂರ್ಣ ಹಣ ಜಮೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.
    | ಡಾ.ಮಹಾದೇವ ಜಿಲ್ಲಾಧಿಕಾರಿ

    ಕಾರ್ಖಾನೆಗೆ ಕಬ್ಬು ಸಾಗಿಸಿದ ಎರಡು ವಾರದಲ್ಲಿ ರೈತರ ಖಾತೆಗೆ ಹಣ ಜಮೆ ಮಾಡಬೇಕೆಂಬ ನಿಯಮವಿದೆ. ಆದರೆ ನಾನಾ ಕಾರಣಗಳಿಂದಾಗಿ ಈ ನಿಯಮ ಸಹಕಾರ ಹಾಗೂ ಖಾಸಗಿ ಕಾರ್ಖಾನೆಗಳಿಂದ ಯಾವತ್ತೂ ಪಾಲನೆ ಆಗುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬನ್ನು ಕಾರ್ಖಾನೆಗೆ ಕೊಡುವ ರೈತರು, ಹಣಕ್ಕಾಗಿಯೂ ಮತ್ತೆ ಕೆಲ ತಿಂಗಳು ಅಲೆದಾಡುವುದು ಪ್ರತಿವರ್ಷ ಸಾಮಾನ್ಯವಾಗಿದೆ. ಹೀಗಾಗಿ ಜಿಲ್ಲೆ ರೈತರಿಗೆ ಕಬ್ಬು ಸಿಹಿಗಿಂತ ಕಹಿ ಅನುಭವವೇ ಹೆಚ್ಚು ನೀಡುತ್ತಿದೆ.

    ಬಾಕಿ ಉಳಿಸಿಕೊಂಡ ಹಣ ಬೇಗ ಪಾವತಿ ಬಗ್ಗೆ ಜಿಲ್ಲಾಡಳಿತ ಎಲ್ಲ ಕಾರ್ಖಾನೆಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಿದೆ. ಇದಕ್ಕೆ ಕಾರ್ಖಾನೆಯವರು ಹಣ ಪಾವತಿ ವಿಳಂಬದ ವಿವರಣೆ ನೀಡಿದ್ದಾರೆ. ಸಕ್ಕರೆ ದಾಸ್ತಾನು ಸಾಕಷ್ಟಿದ್ದು, ವಹಿವಾಟಿಗೆ ಲಾಕ್ಡೌನ್ ಅಡ್ಡಿಯಾಗಿದ್ದನ್ನು ತಿಳಿಸಿದ್ದಾರೆ. ಈ ಮಧ್ಯೆ ಮೂರು ದಿನ ಹಿಂದಷ್ಟೇ ಡಿಸಿ ಡಾ.ಮಹಾದೇವ ಅವರು ಎಲ್ಲ ಕಾರ್ಖಾನೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿ ಬಾಕಿ ಹಣ ಪಾವತಿಗೆ ಸೂಚಿಸಿದ್ದಾರೆ. ಜೂ.15ರೊಳಗೆ ಎಲ್ಲರ ಬಾಕಿ ಚುಕ್ತಾ ಬಗ್ಗೆ ಕಾರ್ಖಾನೆಯವರು ಭರವಸೆ ನೀಡಿದ್ದಾರೆ.

    ಯಾರೆಷ್ಟು ಕೊಡಬೇಕಾಗಿದೆ?: ಎಂಜಿಎಸ್ಸೆಸ್ಕೆಯು 5,547 ರೈತರಿಂದ 3.30 ಲಕ್ಷ ಟನ್ ಕಬ್ಬು ನುರಿಸಿದೆ. ಟನ್ಗೆ 2250 ರೂ.ಗಳಂತೆ 74.30 ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಿದೆ. ಎನ್ನೆಸ್ಸೆಸ್ಕೆಯು 3822 ರೈತರ 2.22 ಲಕ್ಷ ಟನ್ ಕಬ್ಬು ನುರಿಸಿದ್ದು, 49.96 ಕೋಟಿ ರೂ. ಪಾವತಿ ಮಾಡಬೇಕಿದೆ. ಇದರಲ್ಲಿ 30.27 ಕೋಟಿ ರೂ. ವಿತರಿಸಿದ್ದು, 19.69 ಕೋಟಿ ರೂ. ಬಾಕಿಯಿದೆ. ಭಾಲ್ಕೇಶ್ವರ ಶುಗರ್ಸ್ 4400 ರೈತರ 3.22 ಲಕ್ಷ ಟನ್ ಕಬ್ಬು ನುರಿಸಿ 76.81 ಕೋಟಿ ರೂ. ಪಾವತಿಸಿದ್ದು, 7.33 ಕೋಟಿ ರೂ. ಕೊಡಬೇಕಿದೆ. ಬಿಕೆಎಸ್ಕೆ 5363 ರೈತರಿಂದ 3.22 ಲಕ್ಷ ಟನ್ ಕಬ್ಬು ನುರಿಸಿದೆ. 89.49 ಕೋಟಿ ರೂ.ಗಳಲ್ಲಿ 73.46 ಕೋಟಿ ರೂ. ಪಾವತಿಸಿದೆ. 16.02 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts