More

    ಗುತ್ತಿಗೆ ಭೂಮಿಯಲ್ಲಿ ಕಬ್ಬು ಕೃಷಿ: ಮಂಗಳೂರು ಹೊರವಲಯದ ಮಂಜಲ್ಪಾದೆಯಲ್ಲಿ ರೈತನ ಸಾಧನೆ

    ಮಂಗಳೂರು: ನಗರದ ಹೊರವಲಯದಲ್ಲಿ ಗುತ್ತಿಗೆ ಪಡೆದ ಭೂಮಿಯಲ್ಲಿ ನಿರಂತರ 20 ವರ್ಷಗಳಿಂದ ಕಬ್ಬು ಬೆಳೆಯುವ ಮೂಲಕ ಕೃಷಿಕರೊಬ್ಬರು ಯುವಜನತೆಗೆ ಮಾದರಿಯಾಗಿದ್ದಾರೆ.
    ಪಂಜಿಮೊಗರಿನ ಯುವ ಕೃಷಿಕ ಅಶೋಕ್ ಅವರು ಮಂಜಲ್ಪಾದೆ ಸಮೀಪ ವ್ಯಕ್ತಿಯೊಬ್ಬರಿಂದ 1.5 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಕಬ್ಬು ಕೃಷಿ ಮಾಡುತ್ತಿದ್ದಾರೆ. ಊರಿನ ಬೊಂಡ ಲೈನ್ ಸೇಲ್ ಮಾಡುವ ಅಶೋಕ್ ಕೃಷಿ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದು, ಕೆಲ ವರ್ಷ ಕೂಳೂರಿನಲ್ಲಿ ಕಬ್ಬು ಬೆಳೆ ಮಾಡುತ್ತಿದ್ದರು. ಎರಡು ವರ್ಷಗಳಿಂದ ಮಂಜಲ್ಪಾದೆಗೆ ಸ್ಥಳಾಂತರಗೊಂಡಿದ್ದಾರೆ.

    ಕಬ್ಬು 8 ತಿಂಗಳ ಬೆಳೆ. ಸ್ಥಳೀಯ ತಳಿ ಬೆಳೆಯುತ್ತಿದ್ದು, ಟ್ರಾೃಕ್ಟರ್ ಮೂಲಕ ಭೂಮಿ ಹದಗೊಳಿಸಿ, ನಾಟಿ ನಂತರ ಮಣ್ಣು ಮುಚ್ಚಿ ಕಬ್ಬಿನ ಬೆಳವಣಿಗೆ ಮೇಲೆ ನಿರಂತರ ನಿಗಾ ಇರಿಸುತ್ತಾರೆ. ಸ್ಥಳೀಯ, ಉತ್ತರ ಕರ್ನಾಟಕ, ಸ್ಥಳೀಯ ಕಾರ್ಮಿಕರ ಬಳಕೆ ಮಾಡುತ್ತಿದ್ದು, 1.5 ಎಕರೆ ಭೂಮಿಯಲ್ಲಿ ಕಬ್ಬು ಕೃಷಿ ಮಾಡಲು 1.70 ಲಕ್ಷ ರೂ.ವರೆಗೆ ವೆಚ್ಚ ಮಾಡಿದ್ದಾರೆ. 4 ಲಕ್ಷ ರೂ.ಗಳ ಆದಾಯ ನಿರೀಕ್ಷೆಯಲ್ಲಿದ್ದಾರೆ. ಹಾಸನ, ಮಂಡ್ಯ ಭಾಗದ ಕಬ್ಬಿಗಿಂತ ಅಶೋಕ್ ಬೆಳೆಸಿರುವ ಸ್ಥಳೀಯ ಕಬ್ಬಿಗೆ ಬೇಡಿಕೆ ಹೆಚ್ಚಿದೆ.

    ಇಲಿ ಹಾವಳಿ: ಇವರ ಕೃಷಿ ಕ್ಷೇತ್ರದಲ್ಲಿ ಕಾಡುಪ್ರಾಣಿ ಹಾವಳಿ ಹೆಚ್ಚಿಲ್ಲ. ಆದರೆ ಈ ಸಾಲಿನಲ್ಲಿ ಇಲಿಗಳು ಕಬ್ಬಿನ ರಸ ಹೀರಿ ಹಾಳು ಮಾಡುತ್ತಿರುವುದು ಚಿಂತೆಗೆ ಕಾರಣವಾಗಿದೆ.

    ಬೆಂಡೆ ಬೆಳೆ: ಕಬ್ಬಿನ ಬಳಿಕ ಅಶೋಕ್ ಅದೇ ಭೂಮಿಯಲ್ಲಿ ಸ್ಥಳೀಯ ಬಿಳಿ ಬೆಂಡೆ ಕೃಷಿ ಮಾಡುತ್ತಾರೆ. ವಾರದಲ್ಲಿ 2-3 ಬಾರಿ ಕೊಯ್ಲು ಮಾಡಿ ಬೈಕಂಪಾಡಿ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ನೀಡುತ್ತಾರೆ. ಒಂದು ಸೀಸನ್‌ನಲ್ಲಿ 2 ಕ್ವಿಂಟಾಲ್‌ವರೆಗೂ ಬೆಳೆ ತೆಗೆದಿದ್ದಾರೆ.

    ಧಾರ್ಮಿಕ ಆಚರಣೆ ಸಮಯ ಡಿಮಾಂಡ್: ಚೌತಿ, ತುಳಸಿ ಪೂಜೆ, ಕ್ರೈಸ್ತರ ಮೋಂತಿಫೆಸ್ಟ್ ಸಮಯದಲ್ಲಿ ಕಬ್ಬಿಗೆ ಬೇಡಿಕೆಯಿರುತ್ತದೆ. ಇದೇ ಸಮಯಕ್ಕೆ ಕಬ್ಬು ಕಟಾವಿಗೆ ಬರುವಂತೆ ನೋಡಿಕೊಳ್ಳುತ್ತಾರೆ. ಖರೀದಿದಾರರು ಸ್ಥಳಕ್ಕೆ ಬಂದು ದರ ನಿಗದಿಗೊಳಿಸಿ ವ್ಯಾಪಾರ ಮಾಡುತ್ತಾರೆ. ಮೋಂತಿ ಫೆಸ್ಟ್ ಸಮಯದಲ್ಲಿ ಸ್ಥಳೀಯ ಒಂದೇ ಗಾತ್ರದ ಕಬ್ಬಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಅಶೋಕ್ ಅವರನ್ನೇ ನೆಚ್ಚಿಕೊಂಡಿದ್ದಾರೆ.

    ಕಬ್ಬು ಕೃಷಿ ಮಾಡಲು ಆಸಕ್ತಿಯಿರುವ ಯುವಕರಿಗೆ ಸಲಹೆ ನೀಡಲು ಸಿದ್ಧನಿದ್ದೇನೆ. ಯುವಜನತೆ ಮಣ್ಣಿನ ನಂಟು ಬೆಳೆಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಲಾಭ ಪಡೆಯಲು ಸಾಧ್ಯ.
    ಅಶೋಕ್ ಪಂಜಿಮೊಗರು, ಕಬ್ಬು ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts