More

  ಭಿಕ್ಷುಗಳನ್ನು ಆಶ್ರಯಿಸಿರುವ ಬಾಡದ ಭಕ್ತಿಕುಸುಮ

  ಬಿಚ್ಚಾಲೆಯಲ್ಲಿ ಏಕಶಿಲಾಬೃಂದಾವನದಲ್ಲಿ ನೆಲೆಸಿರುವ ಗುರುರಾಯರು ಇಂದಿಗೂ ಅದೃಶ್ಯರೂಪದ ಅಪ್ಪಣಾಚಾರ್ಯರಿಂದಲೇ ನಿತ್ಯದಲ್ಲೂ ಪರಿಸೇವಿತರಾಗಿದ್ದಾರೆಂಬುದು ಭಕ್ತರ ನಂಬುಗೆ. ಗುರುರಾಯರ ಈ ಸುಕ್ಷೇತ್ರವನ್ನು ಕುರುಡಿ ರಾಘವೇಂದ್ರಾಚಾರ್ಯರು ಮನಮೋಹಕವಾಗಿ ವರ್ಣಿಸಿದ್ದಾರೆ. ಇಲ್ಲಿ ಭಕ್ತಿಪುರಸ್ಸರವಾಗಿ ಸೇವಿಸುವ ಜನರಿಗೆ ರಾಯರ ಹೃದಯಾಂತರಾಳದಲ್ಲಿರುವ ಶ್ರೀ ನಾರಾಯಣನು ಒಲಿವನೆಂದು ಲಕುಮೀಶದಾಸರು ಕೊಂಡಾಡಿದ್ದಾರೆ. ಇಲ್ಲಿ ಪ್ರತಿನಿತ್ಯವೂ ರಾಯರನ್ನು ಬಾಡದಮನೆತನದವರು ಅರ್ಚಿಸುತ್ತಿದ್ದಾರೆ. ಹಿಂದೆ ಪ್ರಹ್ಲಾದನ ಅನುಜನಾಗಿದ್ದ ಆಹ್ಲಾದನೇ ಈಗ ಪ್ರಹ್ಲಾದಾವತಾರಿಯಾದ ರಾಯರ ಮರುಸೇವೆಗಾಗಿ ಅಪ್ಪಣಾಚಾರ್ಯರಾಗಿ ಅವತರಿಸಿದ್ದಾರೆ ಎಂದು ಅನೇಕ ಅಪರೋಕ್ಷಜ್ಞಾನಿಗಳು ನುಡಿದಿದ್ದಾರೆ.

  ಶ್ರೀ ಶ್ಯಾಮಸುಂದರದಾಸರು ‘ಯಾತಕೆ ಅನುಮಾನ ಈತನೇ ಜಾತರೂಪಶಯನಜಾತ ದಾತ ಯತಿನಾಥ ಶ್ರೀರಾಯರ ಪ್ರೀತಿಪಡೆದ ಪಿತಭ್ರಾತಾಚಾರ್ಯರು ನಿಜ’ ಎಂದು ಅರುಹಿದ್ದಾರೆ. ಅಂತೆಯೇ ಕೌತಾಳದ ಹನುಮಂತರಾಯರು, ಗುರು ಜಗನ್ನಾಥದಾಸರ ಶಿಷ್ಯರಾಗಿದ್ದ ಲಿಂಗಸೂಗೂರಿನ ಕೇಲೂರು ಸ್ವಾಮಿರಾಯರು, ವೆಂಕಟೇಶ ಹಳ್ಳೇರಾವ್ ಮುಂತಾದವರೂ ಅಪ್ಪಣಾಚಾರ್ಯರನ್ನು ಪ್ರಹ್ಲಾದನ ಅನುಜನ ಅವತಾರವೆಂದೇ ಬಗೆದಿದ್ದಾರೆ. ಶ್ಯಾಮಸುಂದರವಿಟ್ಠಲದಾಸರು ತಮ್ಮ ‘ಗುರುಜಗನ್ನಾಥಾರ್ಯ ಕರುಣಿಸಯ್ಯ’ ಎಂಬ ಕೃತಿಯಲ್ಲಿ ‘ಪ್ರಹ್ಲಾದನ ಅನುಜನಾದ ಹೇ ಆಹ್ಲಾದ! ನೀನು ನಿನ್ನ ಅಣ್ಣನ ಪೂರ್ಣಾನುಗ್ರಹಕ್ಕೆ ಪಾತ್ರನಾದಂತೆ ನಮ್ಮನ್ನೂ ಆ ಪ್ರಹ್ಲಾದಾವತಾರಿಯ ಕರುಣಾದೃಷ್ಟಿಗೆ ಪಾತ್ರರನ್ನಾಗಿಸು’ ಎಂದು ಅಂಗಲಾಚುವರು.

  ಸದಾ ಗುರುಶುಶ್ರೂಷಾಪರರಾಗಿದ್ದ ಅಪ್ಪಣಾಚಾರ್ಯರನ್ನು ರಾಯರು ತಮ್ಮ ಪೀಠದಲ್ಲಿ ಕುಳ್ಳಿರಿಸಲು ಮನಸ್ಸು ಮಾಡಿದ್ದರೆಂದೂ, ಆದರೆ ಅಪ್ಪಣಾಚಾರ್ಯರು ವಿನೀತರಾಗಿಯೇ ತಮಗೆ ಅಂಥ ವೈರಾಗ್ಯವಿನ್ನೂ ಬಂದಿಲ್ಲವೆಂದು ಅಲ್ಲಗಳೆದು ತೀರ್ಥಯಾತ್ರೆಗೆ ಹೊರಟಿದ್ದರೆಂದೂ ಶ್ರೀವರದವಿಟ್ಠಲರ ‘ದಾಸರ ನೋಡಿರೈ…’ ಎಂಬ ಕೃತಿಯೊಂದರಿಂದ ತಿಳಿದುಬರುತ್ತದೆ. ಆದರೆ ಅದಾದ ಆರೇ ದಿನಗಳಲ್ಲಿ ಶ್ರೀಯೋಗೀಂದ್ರತೀರ್ಥರಿಗೆ ಗುರುರಾಯರು ತಮ್ಮ ಸಂಸ್ಥಾನವನ್ನು ಹಸ್ತಾಂತರಿಸಿ ಬೃಂದಾವನವನ್ನು ಪ್ರವೇಶಿಸಿದ್ದರು. ಆಗ ವಿಷಯ ತಿಳಿದ ಅಪ್ಪಣಾಚಾರ್ಯರು ಭೋರ್ಗರೆವ ತುಂಗಭದ್ರೆಯನ್ನು ಈಜಲೂ ಆಗದೆ ರಾಯರನ್ನೇ ಸ್ತುತಿಸುತ್ತ ಸರಸರನೆ ದಾಟಿಬರಲು, ಗುರುರಾಯರು ಅದಾಗಲೇ ಬೃಂದಾವನವನ್ನು ಪ್ರವೇಶಿಸಿಬಿಟ್ಟಿದ್ದರು. ಆದರೆ ಅಪ್ಪಣಾಚಾರ್ಯರ ಭಕ್ತಿಗೆ ಒಲಿದ ರಾಯರು ಮತ್ತೊಂದು ರೂಪದಿಂದ ತುಂಗೆಯ ತೀರದಲ್ಲೇ ಅಪ್ಪಣಾಚಾರ್ಯರ ಮನೆಯ ಬಳಿಯಲ್ಲೇ ಏಕಶಿಲೆಯ ಬೃಂದಾವನದಿ ಮನೆಮಾಡಿ ನಿಂತಿರುವರು.

  ವಸ್ತುತಃ ಗುರುರಾಯರನ್ನು ನಾವು ಹೇಗೆ ಸೇವಿಸಬೇಕು ಎಂಬುದನ್ನು ಅಪ್ಪಣಾಚಾರ್ಯರೇ ಕೃಷ್ಣಾವಧೂತರೆಂಬ ಭಗವದ್ಭಕ್ತರ ಕನಸಿನಲ್ಲಿ ಬಂದು ಉಪದೇಶಿಸಿರುವರು. ತತ್ಪಲವಾಗಿಯೇ ನಮಗೆ ದೊರಕಿದ್ದು ‘ಶ್ರೀರಾಘವೇಂದ್ರತಂತ್ರ’ ಎಂಬ ಅಪೂರ್ವ ಹಾಗೂ ರಹಸ್ಯ ಗ್ರಂಥ. ಇವೆಲ್ಲದಕ್ಕೂ ಕಾರಣ ಭಿಕ್ಷಾಲಯದಲ್ಲಿ ನೆಲೆನಿಂತ ಗುರುರಾಘವೇಂದ್ರರು. ಕೃಷ್ಣಾವಧೂತರು ರಾಯರ ಕರುಣೆ ಪಡೆಯಲು ಸುಲಭ ಮಾರ್ಗವೊಂದನ್ನು ಸೂಚಿಸುತ್ತ ‘ಶ್ರೀರಾಘವೇಂದ್ರಗುರ್ವಂಘ್ರಿ ಸಂಸಕ್ತಧಿಷಣಾಗ್ರಣೀಃ | ಅಪ್ಪಣಾರ್ಯಗುರುಃ ಭೂಯಾತ್ ಅಸ್ಮದಿಷ್ಟಾರ್ಥಸಿದ್ಧಯೇ ||’ ಎನ್ನುತ್ತ ಗುರುರಾಯರ ಅನುಗ್ರಹವಾಗಬೇಕಾದರೆ ಅವರ ಕರಕಮಲಪೋಷಿತರಾದ ಅಪ್ಪಣಾಚಾರ್ಯರ ಕಾರುಣ್ಯವಿದ್ದರೆ ಸಾಕು ಎನ್ನುವರು. ಅಪ್ಪಣಾಚಾರ್ಯರು ಕೇವಲ ಉತ್ತರ ಕರ್ಣಾಟಕದ ಬಾಡದ ಎಂಬ ಮನೆತನಕ್ಕೆ ಸೇರಿದ ಮಾತ್ರಕ್ಕೆ ಬಾಡದ ಅಪ್ಪಣಾಚಾರ್ಯರೆನಿಸಲಿಲ್ಲ ಹೊರತು, ಸದಾ ಗುರುರಾಯರ ಪಾದಪದ್ಮಗಳನ್ನಾಶ್ರಯಿಸಿದ ಬಾಡದ ಭಕ್ತಿಕುಸುಮವೇ ಆಗಿದ್ದಾರೆ ಎಂಬುದು ಕೃಷ್ಣಾವಧೂತರ ಇಂಗಿತ ಹಾಗೂ ಅನುಭವ. ಭಿಕ್ಷಾಲಯದಲ್ಲಿ ರಾಯರು ಅಪ್ಪಣಾಚಾರ್ಯರಿಗೆ ಒಲಿದುಬರಲು ಮತ್ತೊಂದು ಕಾರಣವೂ ಇದೆ. ಅಪ್ಪಣಾಚಾರ್ಯರ ಪೂರ್ವಜರಾಗಿದ್ದ ಶ್ರೀಚಂದ್ರಭಟ್ಟರೆಂಬುವರು ಕಳೆದುಹೋಗಿದ್ದ ಚತುರ್ಯುಗಮೂರ್ತಿ ಶ್ರೀರಾಮಚಂದ್ರನನ್ನು ಮರಳಿ ಪಡೆದುಕೊಳ್ಳುವಲ್ಲಿ ಶ್ರೀಮನ್ಮಧ್ವಾಚಾರ್ಯರ ಪೀಠದಲ್ಲಿ ಬಂದ ಶ್ರೀರಘುನಂದನತೀರ್ಥರಿಗೆ ಅಂದರೆ, ಗುರುರಾಯರ ಪೂರ್ವಗುರುಗಳಿಗೆ ನೆರವಾಗಿದ್ದರು. ಇದರಿಂದಲೂ ರಾಯರಿಗೆ ಬಾಡದ ಮನೆತನದವರಲ್ಲಿ ವಿಶೇಷ ಪ್ರೀತಿಯುಂಟಾಗಿತ್ತು.

  ಗುರುರಾಯರು ಸುಮಾರು ಹನ್ನೆರಡು ವರ್ಷಗಳ ಕಾಲ ಬಿಚ್ಚಾಲೆಯ ಜಪದಕಟ್ಟೆಯಲ್ಲಿ ಕುಳಿತು ಅಪ್ಪಣಾಚಾರ್ಯರಿಗೆ ನ್ಯಾಯ-ವ್ಯಾಕರಣ-ವೇದಾಂತದ ಪ್ರೌಢಗ್ರಂಥಗಳನ್ನು ಪಾಠ ಹೇಳಿರುವರು. ಅಪ್ಪಣಾಚಾರ್ಯರು ತಮ್ಮ ಸತಿ ರತ್ನಾಬಾಯಿಯೊಂದಿಗೆ ಗುರುರಾಯರನ್ನು ವಿಶೇಷವಾಗಿ ಶುಶ್ರೂಷೆಗೈದ ಕಾರಣ ಮುಂದೆ ಸುಬ್ಬಣ್ಣ ಎಂಬ ಸತ್ಪುತ್ರನು ಜನಿಸಿದನು. ಗುರುರಾಯರು ವೃಂದಾವನ ಪ್ರವೇಶಿಸಿದ ನಂತರವೂ ಅವರ ಒತ್ತಾಸೆಯಂತೆ ಅಪ್ಪಣಾಚಾರ್ಯರು ತಮ್ಮ ಮನೆಯಲ್ಲೇ ಶ್ರೀರಾಘವೇಂದ್ರವಿದ್ಯಾಪೀಠವನ್ನು ಸ್ಥಾಪಿಸಿ ಸುತ್ತಮುತ್ತಲಿನ ಅನೇಕ ಗ್ರಾಮನಗರಗಳಿಂದ ಬರುತ್ತಿದ್ದ ವಿವಿಧ ಜಿಜ್ಞಾಸುಗಳಿಗೆ ವೇದವೇದಾಂತಗಳ ಪಾಠವನ್ನು ಹೇಳುತ್ತಿದ್ದರು. ಹೀಗೆ ಆಚಾರ್ಯರು ರಾಯರ ಪೂರ್ಣಾನುಗ್ರಹದಿಂದ ಭಿಕ್ಷಾಲಯವನ್ನು ಜ್ಞಾನದೇವಾಲಯವನ್ನಾಗಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts