More

    ರಾಜ್ಯ ಕಾರ್ಯಕಾರಿಣಿಯಿಂದ ಸಂಘಟನೆಗೆ ಸ್ಫೂರ್ತಿ, ಬಿಜೆಪಿ ದಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ವಿಶ್ವಾಸ

    ಮಂಗಳೂರು: ಎರಡು ದಶಕ ಬಳಿಕ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಮಂಗಳೂರಿನಲ್ಲಿ ನಡೆಯಲಿದ್ದು , ಈ ಮೂಲಕ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಇನ್ನಷ್ಟು ಬಲ ಬರಲಿದೆ ಎನ್ನುವುದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರ ವಿಶ್ವಾಸ.
    ಕಾರ್ಯಕಾರಿಣಿ ಸಭೆಯ ಪೂರ್ವಸಿದ್ಧತೆ ಜವಾಬ್ದಾರಿ ಹೊಂದಿರುವ ಅವರು ಸಭೆಯ ಹಾಗೂ ಜಿಲ್ಲೆಯಲ್ಲಿ ಪಕ್ಷದ ಸಂಘಟನಾ ಕಾರ್ಯ ಬಗ್ಗೆ ‘ವಿಜಯವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

    ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಪಕ್ಷದ ಬೆಳವಣಿಗೆಗೆ ಹೇಗೆ ಸಹಕಾರಿ?
    – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಜಿಲ್ಲಾ ಬಿಜೆಪಿಗೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುವ ಅಪೂರ್ವ ಅವಕಾಶ ಕಲ್ಪಿಸಿದ್ದಾರೆ. ಇದು ನಿಜಕ್ಕೂ ನಮ್ಮ ಭಾಗ್ಯ. ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದು, ಜಿಲ್ಲೆಯ ಸಂಘಟನೆ, ಸಂಸ್ಕೃತಿ ಬಗ್ಗೆ ಅವರಿಗೆ ಪರಿಚಯವಾಗುತ್ತದೆ. ನಮ್ಮ ಸಂಘಟನೆಗೆ ಇನ್ನಷ್ಟು ಸ್ಫೂರ್ತಿ ಸಿಗುತ್ತದೆ.

    ಕಾರ್ಯಕಾರಿಣಿ ಸಭೆಗೆ ಜಿಲ್ಲಾ ಬಿಜೆಪಿಯಿಂದ ಯಾವ ರೀತಿ ಸಿದ್ಧತೆ ನಡೆದಿದೆ?
    – ನಳಿನ್‌ಕುಮಾರ್ ರಾಜ್ಯಾಧ್ಯಕ್ಷರಾದ ಬಳಿಕ ತವರೂರಲ್ಲಿ ನಡೆಯಲಿರುವ ಮೊದಲ ಪ್ರಮುಖ ಸಭೆ ಇದಾಗಿರುವ ಕಾರಣ ವಿಶೇಷ ಮಹತ್ವ ಇದೆ. ಈಗಾಗಲೇ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಹಲವು ಸುತ್ತಿನ ಸಭೆ ನಡೆದಿದೆ. ಕಾರ್ಯಕಾರಿಣಿ ಯಶಸ್ಸಿಗೆ ವಸತಿ ವ್ಯವಸ್ಥೆ, ಊಟೋಪಚಾರ, ಸ್ವಾಗತ ಸಮಿತಿ ಹೀಗೆ ಒಟ್ಟು 14 ವಿಭಾಗಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿದ್ದೇವೆ. ಮಂಗಳೂರು ನಗರವನ್ನು ಪಕ್ಷದ ಧ್ವಜ, ತೋರಣದಿಂದ ಅಲಂಕರಿಸಲಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಪ್ರಮುಖ ನಾಯಕರ ವಸತಿ ವ್ಯವಸ್ಥೆ, ಸಭಾಂಗಣ ಸಹಿತ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ್ದೇವೆ.

    ನೀವು ಜಿಲ್ಲಾಧ್ಯಕ್ಷರಾದ ಬಳಿಕ ಪಕ್ಷದ ಸಂಘಟನೆಯ ಕಾರ್ಯ ಹೇಗೆ ನಡೆದಿದೆ?
    – ಪಕ್ಷದ ಎಲ್ಲ 9 ಮಂಡಲಗಳಿಗೆ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆ ಹಾಗೂ ಮಂಡಲ ಮಟ್ಟದಲ್ಲಿ ವಿವಿಧ ಮೋರ್ಚಾಗಳಿಗೂ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ. ಜಿಲ್ಲೆಯ ಎಲ್ಲ ಬೂತ್ ಸಮಿತಿಗಳನ್ನು ಸಕ್ರಿಯಗೊಳಿಸುವ ಕಾರ್ಯ ನಡೆದಿದೆ. ಬಿಜೆಪಿಯ 53 ಮಹಾ ಶಕ್ತಿಕೇಂದ್ರ ಹಾಗೂ 505 ಶಕ್ತಿ ಕೇಂದ್ರಗಳನ್ನು ಸಂಘಟಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧಿಸಿ ಮಹಾ ಶಕ್ತಿಕೇಂದ್ರದ ಮಟ್ಟದಲ್ಲಿ ಈಗಾಗಲೇ ಸಭೆಗಳು ನಡೆದಿದೆ. ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮ ನಡೆಯುತ್ತಿದೆ.

    ನಳಿನ್‌ಕುಮಾರ್ ರಾಜ್ಯಾಧ್ಯಕ್ಷರಾಗಿರುವುದು ಜಿಲ್ಲಾ ಬಿಜೆಪಿಗೆ ಏನು ಲಾಭ ತಂದಿದೆ?
    – ನಳಿನ್‌ಕುಮಾರ್ ರಾಜ್ಯಾಧ್ಯಕ್ಷರಾಗಿರುವುದು ನಿಜಕ್ಕೂ ಜಿಲ್ಲಾ ಬಿಜೆಪಿಗೆ ವರದಾನವಾಗಿದೆ. ಅವರು ಜಿಲ್ಲಾ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಮೂರನೇ ಅವಧಿಗೆ ಸಂಸದರಾಗಿದ್ದಾರೆ. ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಜತೆ ಅವರಿಗೆ ನಿಕಟ ಸಂಪರ್ಕವಿದೆ. ಅವರ ಅನುಭವ ಕೂಡ ನಮಗೆ ಪ್ಲಸ್ ಪಾಯಿಂಟ್. ಅವರ ಮಾರ್ಗದರ್ಶನದಲ್ಲೇ ಪಕ್ಷ ಸಂಘಟನೆಯ ಕಾರ್ಯ ನಡೆದಿದೆ. ದ.ಕ. ಜಿಲ್ಲೆ ಸಂಘಟನಾತ್ಮಕವಾಗಿ ಬಿಜೆಪಿಯ ಭದ್ರಕೋಟೆ. ಈಗ ಜಿಲ್ಲೆಯವರೇ ರಾಜ್ಯಾಧ್ಯಕ್ಷರಾಗಿರುವ ಕಾರಣ ನಮ್ಮ ಜವಾಬ್ದಾರಿಯೂ ಹೆಚ್ಚಿದೆ.

    ಪಕ್ಷದ ಬಲವರ್ಧನೆಗೆ ಜನಪ್ರತಿನಿಧಿಗಳ ಕೊಡುಗೆ ಏನು?
    ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿಯ ಏಳು ಶಾಸಕರು ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ದೊರೆತಿದೆ. ಜನಪ್ರತಿನಿಧಿಗಳ ಸಾಮಾಜಿಕ ಕಳಕಳಿ, ಅಭಿವೃದ್ಧಿ ಕಾರ್ಯಗಳು ಪಕ್ಷದ ಬಲವರ್ಧನೆಗೆ ಪೂರಕವಾಗಿದೆ. ಜನಪ್ರತಿನಿಧಿಗಳು ಮತ್ತು ಜಿಲ್ಲಾ ಬಿಜೆಪಿ ಒಂದು ತಂಡವಾಗಿ ಕೆಲಸ ಮಾಡುತ್ತಿದೆ. ಇದರಿಂದ ಅಭಿವೃದ್ದಿ ಹಾಗೂ ಪಕ್ಷದ ಕಾರ್ಯ ಜತೆಯಾಗಿ ಸಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts