More

    ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ (ಸಿ) ಸ್ಪರ್ಧೆ; ಸುನೀತಕುಮಾರ್ ಟಿ.ಎಸ್

    ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳ 151 ಕ್ಷೇತ್ರಗಳಲ್ಲಿ ಎಸ್‌ಯುಸಿಐ (ಸಿ) ಸ್ಪರ್ಧಿಸುತ್ತಿದ್ದು, ರಾಜ್ಯದ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ಪಕ್ಷದ ರಾಜ್ಯ ಸೆಕ್ರೆಟರಿಯಟ್ ಸದಸ್ಯ ಸುನೀತಕುಮಾರ್ ಟಿ. ಎಸ್ ಹೇಳಿದರು.

    ಬಂಡವಾಳ ಶಾಹಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಎಸ್‌ಯುಸಿಐ (ಸಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಇದು ಪಕ್ಷದ ತತ್ವ-ಸಿದ್ಧಾಂತಕ್ಕೆ ಇರುವ ಬದ್ಧತೆಯ ಕೈಗನ್ನಡಿಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಂಡವಾಳ ಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ ಜನರ ಬಳಿ ಬರುತ್ತಿವೆ. ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಕರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧ ಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಕಪ್ಪುಹಣ, ಸ್ವಿಸ್‌ಬ್ಯಾಂಕ್ ಹಣ ವಶಪಡಿಸಿಕೊಳ್ಳುವ ಬಗ್ಗೆ ಇರಲಿ, ಎಸ್‌ಬಿಐಯಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ನೀಡದಂತೆ ತಡೆಯಲು ಬಿಜೆಪಿ ಸರ್ವ ಪ್ರಯತ್ನ ಮಾಡಿದೆ. ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ರಾಜ್ಯದಲ್ಲಿ ಭೀಕರ ಬರ ಬಂದಿದ್ದು, ನೀರಿಗಾಗಿ ಹಾಹಾಕಾರ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕ್ಷುಲ್ಲಕ ರಾಜಕೀಯದಲ್ಲಿ ಮುಳುಗಿವೆಯೇ ಹೊರತು ಜನರ ಸಂಕಷ್ಟಗಳಿಗೆ ಕಿವಿಗೊಡುತ್ತಿಲ್ಲ ಎಂದರು.

    ಮೋದಿಯವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅಂಬಾನಿ, ಅದಾನಿಗಳು ವಿಕಸಿತಗೊಂಡು ಜಗತ್ತಿನ ಅತೀ ಶ್ರೀಮಂತ ಬಂಡವಾಳಶಾಹಿಗಳಾಗಿದ್ದಾರೆ. ಅಂತಹ ಆಧುನಿಕ ಬಿಲಿಯಾಧಿಪತಿಗಳ ಐಷಾರಾಮಿ ಕಾರುಗಳಿಗಾಗಿ ದುಬಾರಿ ಸುಂಕದ ಎಕ್ಸ್‌ಪ್ರೆಸ್ ಹೈವೇಗಳನ್ನು ಜನರ ತೆರಿಗೆಯಲ್ಲಿ ನಿರ್ಮಿಸಿ, ಬೇಕಾಬಿಟ್ಟಿ ಟೋಲ್ ವಸೂಲಿ ಮಾಡುತ್ತಾ, ಇದೇ ಅಭಿವೃದ್ಧಿ ಎಂದು ಒಪ್ಪಿಸಲಾಗಿದೆ ಎಂದು ಕಿಡಿಕಾರಿದರು.

    ಇಂತಹ ಕೋಮುವಾದಿ, ಫ್ಯಾಸೀವಾದಿ, ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಆದರೆ ಕಾಂಗ್ರೆಸ್ ನೇತೃತ್ವದ ವಿವಿಧ ಅವಕಾಶವಾದಿ ಪ್ರಾದೇಶಿಕ ಪಕ್ಷಗಳ ಕೂಟವಾದ ಇಂಡಿಯಾ ನೈಜ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯವನ್ನು ನೀಡಲು ಖಂಡಿತ ಅಸಾಧ್ಯ. ಬಿಜೆಪಿ ಬೆಳೆದು ಅಧಿಕಾರಕ್ಕೆ ಬರುವವರೆಗೆ ದೇಶದ ಬಂಡವಾಳಶಾಹಿಗಳ ಸೇವೆಗೈದಿರುವುದು ಇದೇ ಕಾಂಗ್ರೆಸ್ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಎನ್‌ಡಿಎ ಮತ್ತು ಇಂಡಿಯಾ ಎರಡು ಮೈತ್ರಿಕೂಟಗಳು ಕೂಡ ಬಂಡವಾಳಶಾಹಿ ವರ್ಗದ ಎರಡು ಪರ್ಯಾಯಗಳಾಗಿವೆ ಎಂದರು.
    ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ್‌ರೆಡ್ಡಿ ಮಾತನಾಡಿ, ರೈತರ ಹೋರಾಟಗಳಿಗೆ ಬಲ ನೀಡಲು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು, ಎನ್‌ಇಪಿ ವಿರುದ್ಧ ಹೋರಾಡಿ, ಸಾರ್ವಜನಿಕ ಶಿಕ್ಷಣ ಉಳಿಸಲು, ಯುವಜನರ, ಮಹಿಳೆಯರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದರು.

    ಅಭ್ಯರ್ಥಿ ನಾಗಜ್ಯೋತಿ ಮಾತನಾಡಿ, ಶುಲ್ಕ ಏರಿಕೆ ವಿರುದ್ಧ, ಸ್ಕಾಲರ್ಶಿಪ್‌ಗಾಗಿ, ಹಾಸ್ಟೇಲ್ ಸೌಲಭ್ಯಗಳಿಗಾಗಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯಕ್ಕಾಗಿ ನಡೆದ ಹೋರಾಟಗಳಿಗೆ ನಾಯಕತ್ವವನ್ನು ನೀಡಿದ್ದು, ಪ್ರಸ್ತುತ ಮಹಿಳಾ ಸಂಘಟನೆಯ ನಾಯಕಿಯಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ದ, ಮಹಿಳಾ ಶಿಕ್ಷಣ ಹಾಗೂ ರಕ್ಷಣೆಗಾಗಿ ಹಲವಾರು ಹೋರಾಟಗಳಲಿ ್ಲಸಕ್ರಿಯವಾಗಿರುವ ನನ್ನ ಆಯ್ಕೆಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

    ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ, ಭರತ್‌ಕುಮಾರ, ಸಿದ್ದಲಿಂಗ ಬಾಗೇವಾಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts