More

    ಆರೂವರೆ ವರ್ಷದ ಮಗುವಿಗೆ ಯಶಸ್ವಿ ಚಿಕಿತ್ಸೆ

    ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಗುಲಿಯನ್ ಬಾರೀ ಸಿಂಡ್ರೋಮ್‌ನಿಂದ ಎರಡೂ ಕಾಲುಗಳ ಮತ್ತು ಕೈಗಳ ಅಶಕ್ತತೆಯಿಂದ ಬಳಲುತ್ತಿದ್ದ ಆರೂವರೆ ವರ್ಷದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

    ಎರಡೂ ಕಾಲು ಮತ್ತು ಕೈಗಳ ಅಶಕ್ತತೆ ಹಾಗೂ ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದರಿಂದ ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಯಾಸೀನ್ ಎಂಬ ಮಗುವನ್ನು ಕಳೆದ ಮೇ 19ರಂದು ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ದಾಖಲಿಸಲಾಗಿತ್ತು.

    ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ವೈದ್ಯರು ಮಗುವನ್ನು ಎಂಆರ್‌ಐ, ನರಪರೀಕ್ಷೆ ಮತ್ತು ಬೆನ್ನಿನ ನೀರು ಪರೀಕ್ಷೆಗೆ ಒಳಪಡಿಸಿ, ಅಪರೂಪದ ಗುಲಿಯನ್ ಬಾರ‌್ರಿ ಸಿಂಡ್ರೋಮ್‌ನಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚಿ, ಎರಡು ತಿಂಗಳವರೆಗೆ ಚಿಕಿತ್ಸೆ ನೀಡಿದರಲ್ಲದೇ, 20 ದಿನಗಳವರೆಗೆ ವೆಂಟಿಲೇಟರ್ ಅಳವಡಿಸಿ ತೀವ್ರ ಉಸಿರಾಟದ ತೊಂದರೆಗೂ ಚಿಕಿತ್ಸೆ ನೀಡಿದರು. ಒಂದು ತಿಂಗಳವರೆಗೆ ಸಿಪ್ಯಾಪ್ ಯಂತ್ರದಿಂದ, ಕೊನೆ ಒಂದುವಾರ ಎಚ್‌ಎಫ್‌ಎನ್‌ಸಿ ಯಂತ್ರದಿಂದ ಆಕ್ಸಿಜನ್ ಕೊಡಲಾಯಿತು. ಚಿಕಿತ್ಸೆ ವೇಳೆ ಮಗುವಿನಲ್ಲಿ ನ್ಯುಮೋನಿಯಾ ಕಾಣಿಸಿಕೊಂಡಿದ್ದು, ಸೂಕ್ತ ಔಷಧಿಯೊಂದಿಗೆ ನೆಬ್ಯೂಲೈಜೇಷನ್, ಎದೆಯ ಫಿಜಿಯೋಥೆರಪಿ ಮೂಲಕ ಗುಣಪಡಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದಿಂದ ಮಗು ಯಾಸಿನ್ ಸಂಪೂರ್ಣ ಗುಣಮುಖನಾಗಿ, ಮನೆಗೆ ಮರಳಿದ್ದಾನೆ.

    ಡಾ. ಅಶೋಕ ಬಡಕಲಿ, ಚಿಕ್ಕಮಕ್ಕಳ ತೀವ್ರನಿಗಾ ಘಟಕದ ಡಾ. ರಮೇಶ ನೀಲಣ್ಣವರ್, ನರರೋಗ ತಜ್ಞ ಡಾ. ಕೆ.ಬಿ. ತಳವಾರ, ಚಿಕ್ಕಮಕ್ಕಳ ಎಲ್ಲ ವೈದ್ಯರು ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

    ವೈದ್ಯರ ತಂಡಕ್ಕೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts