More

    ಜಲಜೀವನ್ ಮಿಷನ್ ಯಶಸ್ವಿ ಅನುಷ್ಠಾನ

    ಗೋಣಿಕೊಪ್ಪ: ಸರ್ಕಾರದ ಯೋಜನೆಗಳಲ್ಲಿ ಪ್ರಮುಖವಾದ ‘ಉದ್ಯೋಗ ಖಾತ್ರಿ’, ‘ಜಲಜೀವನ್ ಮಿಷನ್’ ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಮೂಲಕ ಹುದಿಕೇರಿ ಗ್ರಾಮ ಜಿಲ್ಲೆಗೆ ಮಾದರಿಯಾಗಿದೆ.

    ಪೊನ್ನಂಪೇಟೆ ತಾಲೂಕಿಗೆ ಈ ಗ್ರಾಮ ಸೇರಿದ್ದು, ಗೋಣಿಕೊಪ್ಪ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಗೋಣಿಕೊಪ್ಪ-ಕುಟ್ಟ ರಸ್ತೆಯ ಬದಿಯಲ್ಲಿ ಈ ಗ್ರಾಮವಿದ್ದು, ಕೃಷಿ ಪ್ರಧಾನವಾದ ಗ್ರಾಮ ಇದಾಗಿದೆ. ಕಾಫಿ, ಕಾಳುಮೆಣಸು, ಭತ್ತ ಇಲ್ಲಿನ ಮುಖ್ಯ ಬೆಳೆ.

    ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದ್ದು, ಶೇ.95ರಷ್ಟು ಸಾಧನೆ ಮಾಡಿದೆ. ಆ ಮೂಲಕ ಜಿಲ್ಲೆಯಲ್ಲಿ ಶೇಕಡವಾರು ಹೆಚ್ಚು ಪ್ರಗತಿ ಸಾಧಿಸಿದ ಹೆಮ್ಮೆಗೆ ಗ್ರಾಮ ಪಾತ್ರವಾಗಿದೆ.

    ಕೃಷಿಕರೇ ಹೆಚ್ಚಾಗಿರುವ ಗ್ರಾಮದಲ್ಲಿ ಕಾಫಿ, ಕಾಳುಮೆಣಸು, ಭತ್ತ ಬೆಳೆಯಲಾಗುತ್ತದೆ. ಕೆರೆ-ಕಟ್ಟೆಗಳು ಇದ್ದು, ಕೃಷಿಗೆ ನೀರನ್ನು ಪೂರೈಸುತ್ತಿವೆ. ಮಹದೇಶ್ವರ ದೇವಾಲಯ ಆವರಣದಲ್ಲಿ ಕೆರೆಯಿದ್ದು, ಅದನ್ನು ಪುನಶ್ಚೇತನಗೊಳಿಸಬೇಕಿದೆ. ಪ್ರತಿ ವರ್ಷ ಹಬ್ಬದ ದಿನದಂದು ಈ ಕೆರೆಯಲ್ಲಿ ದೇವರ ಜಳಕ ಮಾಡಿಸಲಾಗುತ್ತದೆ. ಇದು 99 ಸೆಂಟ್ ವಿಸ್ತಾರ ಹೊಂದಿದೆ. ಮೊದಲು ಕುಡಿಯಲೂ ಈ ಕೆರೆಯ ನೀರನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಕಲುಷಿತಗೊಂಡಿದೆ. ಈಗಾಗಲೇ ಈ ಹಿಂದಿನ ಶಾಸಕರು, ಈಗಿನ ಶಾಸಕರಿಗೂ ಮನವಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಿದರೆ ಗ್ರಾಮಕ್ಕೆ ನೀರಿನ ಮತ್ತೊಂದು ಮೂಲ ಸಿಕ್ಕಂತಾಗುತ್ತದೆ.

    ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಇದೇ ಗ್ರಾಮದ ಬೆಳ್ಳೂರಿನವರು. ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತೀರ ರೋಷನ್ ಕೂಡ ಇದೇ ಗ್ರಾಮದವರು ಎಂಬುದು ವಿಶೇಷ.

    ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬುದು ಯೋಜನೆಯ ಉದ್ದೇಶ. ಅದರಂತೆ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ತ್ವರಿತವಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಅಂತೆಯೆ, ಹುದಿಕೇರಿ ಗ್ರಾಪಂ 85 ಲಕ್ಷ ರೂ. ಸದ್ಬಳಕೆ ಮಾಡಿಕೊಂಡಿದ್ದು, ಆ ಮೂಲಕ ಶೇ.95 ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಗೆ ಮಾದರಿ ಗ್ರಾಮ ಎನಿಸಿಕೊಂಡಿದೆ.

    ಈ ನಡುವೆ, ಕಸದ ಸಮಸ್ಯೆ ಗ್ರಾಮದಲ್ಲಿ ತಲೆದೋರಿದೆ. ಗ್ರಾಪಂ ವತಿಯಿಂದ ಕಸ ವಿಲೇವಾರಿ ಘಟಕ ನಿರ್ಮಿಸಿದ್ದರೂ ಅಲ್ಲಲ್ಲಿ ಕಸ ಹಾಕುವುದು ನಿಂತಿಲ್ಲ. ಪ್ರವಾಸಿಗರು ಮದ್ಯದ ಬಾಟಲಿಗಳನ್ನು ದಾರಿ ಬದಿಯಲ್ಲಿ ಬಿಸಾಕಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಗ್ರಾ.ಪಂ ವತಿಯಿಂದ ದಂಡ ವಿಧಿಸುವ ಪ್ರಯತ್ನ ಮಾಡಿದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಗ್ರಾಪಂ ಸದಸ್ಯ ಮಿಲನ್. ತಾಲೂಕಿನ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ. ಜನರು ತ್ರಾಸದಾಯಕವಾಗಿ ಪ್ರಯಾಣ ಮಾಡುವಂತಾಗಿದೆ. ಕೂಡಲೇ ಗ್ರಾಮದ ರಸ್ತೆಗಳನ್ನು ದುರಸ್ತಿಪಡಿಸಿದರೆ ಅನುಕೂಲ ಎಂಬುದು ಸ್ಥಳೀಯರ ವಾದ.

    ದೇವಾಲಯ, ಸರ್ಕಾರಿ ಶಾಲೆ: ಗ್ರಾಮದಲ್ಲಿ ಪ್ರಧಾನವಾಗಿ ಮಹದೇವರ ದೇವಾಲಯವಿದೆ. ಮುತ್ತಪ್ಪ ದೇವಸ್ಥಾನ, ರಾಮಮಂದಿರ, ಅಯ್ಯಪ್ಪ ದೇವಾಲಯವಿದ್ದು, ನಿತ್ಯ ಇಲ್ಲಿ ಪೂಜಾಕೈಂಕರ್ಯ ನೆರವೇರುತ್ತದೆ. ಇಲ್ಲಿಗೆ ಭಕ್ತರು ವಿವಿಧೆಡೆಯಿಂದ ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಅಂತೆಯೆ, ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅನುದಾನಿತ ಜನತಾ ಹೈಸ್ಕೂಲ್, ಲಿಟಲ್ ಫ್ಲವರ್ ಶಾಲೆಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆ ಮೂಲಕ ಮಾದರಿ ಶಾಲೆಗಳಾಗಿವೆ.

    ವೈದ್ಯಕೀಯ ಸೇವೆ: ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇಲ್ಲಿ ವೈದ್ಯರ ಕೊರತೆ ಇದೆ. ಇದನ್ನು ಮೇಲ್ದರ್ಜೆಗೆ ಏರಿಸಿದರೆ ಗ್ರಾಮದ ಜನರು ದೂರದ ಗೋಣಿಕೊಪ್ಪಕ್ಕೆ ಹೋಗುವುದು ತಪ್ಪುತ್ತದೆ. ಹಾಗೆಯೆ, ಇಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಇದ್ದು, ಕಾಯಂ ವೈದ್ಯರ ಕೊರತೆಯಿದೆ. ಈ ಸಮಸ್ಯೆಯನ್ನು ಪರಿಹರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಒತ್ತಾಯ.
    ಇನ್ನು ಗ್ರಾಮ ವ್ಯಾಪ್ತಿಯಲ್ಲಿ ಮೇದಂಗೆರೆ ಗಿರಿಜನರ ಕಾಲನಿ ಇದೆ. ಕಾವೇರಿ ಮಂಡಳಿಯಿಂದ ಕಾಲನಿಗೆ ಮೂಲ ಸೌಕರ್ಯ ಒದಗಿಸಲಾಗಿದೆ.

    ಗ್ರಾಮದಲ್ಲಿ ಮುಖ್ಯವಾಗಿ ರಸ್ತೆಗಳು ಅಭಿವೃದ್ಧಿ ಆಗಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ತಕ್ಕ ಮಟ್ಟಿಗೆ ಪರಿಹಾರವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ. ಇದರಿಂದ ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕಿದ್ದು., ಈ ಸಂಬಂಧ ಈಗಾಗಲೇ ಶಾಸಕರು ಭರವಸೆ ನೀಡಿದ್ದಾರೆ.
    ಚಂಗುಲಂಡ ಸೂರಜ್ ಗ್ರಾಪಂ ಮಾಜಿ ಅಧ್ಯಕ್ಷ, ಹುದಿಕೇರಿ

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಹುದಿಕೇರಿ ಗ್ರಾಮ ಜಿಲ್ಲೆಗೆ ಮಾದರಿಯಾಗಿದೆ. ಗ್ರಾಪಂ ವತಿಯಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ನೀಗಿಸಿ ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ.
    ಕಿರಿಯಮಾಡ ಮಿಲನ್ ಗಣಪತಿ ಗ್ರಾಪಂ ಸದಸ್ಯ, ಹುದಿಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts