More

    ಶ್ರದ್ಧೆಯಿಂದ ಕಲೆ ಕಲಿತರೆ ಯಶಸ್ಸು ಖಾತ್ರಿ

    ಶಿಗ್ಗಾಂವಿ: ಹಿಂದಿನ ಕಾಲದಲ್ಲಿ ಗುರುದಕ್ಷಿಣೆ ಕೊಟ್ಟು ಕಲಿಯಬೇಕಿತ್ತು. ಇಂದು ಸರ್ಕಾರ ಶಿಷ್ಯ ದಕ್ಷಿಣೆ ಕೊಟ್ಟು ಕಲಿಸುವ ಮೂಲಕ ಎಲ್ಲ ತರಹದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹೇಳಿದರು.

    ತಾಲೂಕಿನ ಬಾಡ ಗ್ರಾಮದ ಕನಕದಾಸ ಅರಮನೆ ಆವರಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಚರ್ಮವಾದ್ಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಬಿರಾರ್ಥಿಗಳಲ್ಲಿ ಭಕ್ತಿ ಮತ್ತು ಶ್ರದ್ಧೆ ಇರಬೇಕು. ನೀವು ಶ್ರದ್ಧೆಯಿಂದ ಕಲೆ ಕಲಿತರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಜೋಗತಿ ನೃತ್ಯ ಮೊದಲು ಕೆಲವರಿಗೆ ಮಾತ್ರ ಸಿಮೀತವಾಗಿತ್ತು. ಆದರೆ, ಈಗ ಜೋಗತಿ ನೃತ್ಯ ಜಾನಪದ ಕಲೆಯಾಗಿ ಪರಿವರ್ತನೆಗೊಂಡಿದೆ ಎಂದರು.

    ಸರ್ಕಾರ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಲು ತರಬೇತಿದಾರರಿಗೆ ಹಾಗೂ ಶಿಬಿರಾರ್ಥಿಗಳಿಗೆ ಐದು ದಿನ ಉಚಿತ ಊಟ, ವಸತಿ ಸಹಿತ ಗೌರವ ಧನ ನೀಡುತ್ತಿದೆ. ಕಲೆ ಕಲಿಯಬೇಕೆನ್ನುವ ಆಸಕ್ತರು ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಲೆಗೆ ಇರುವಷ್ಟು ಬೆಲೆ ಯಾವುದಕ್ಕೂ ಇಲ್ಲ. ಪ್ರಸ್ತುತವಾದ ಬದುಕಿನಲ್ಲಿ ನಾವು ಯಾವ ರೀತಿಯಾಗಿ ಬದುಕಬೇಕು ಎನ್ನುವುದಕ್ಕೆ ಬಿ.ಮಂಜಮ್ಮ ಜೋಗತಿ ಮಾದರಿಯಾಗಿದ್ದಾರೆ. ಮನೆಯವರಿಂದ ಹೊರಹಾಕಲ್ಪಟ್ಟ ಮಂಜಮ್ಮ, ಜೋಗತಿ ನೃತ್ಯವನ್ನೇ ಕಲೆಯನ್ನಾಗಿಸಿಕೊಂಡು ಬದುಕಿನಲ್ಲಿ ಯಶಸ್ಸು ಕಂಡಿದ್ದಾರೆ ಎಂದರು.

    ಗ್ರಾಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಮಾನೋಜಿ, ಶಂಕರ ಅರ್ಕಸಾಲಿ ಮಾತನಾಡಿದರು. ತಾಪಂ ಅಧ್ಯಕ್ಷೆ ಪಾರವ್ವ ಆರೇರ, ಪಿಡಿಒ ರಾಮಕೃಷ್ಣ ಗುಡಗೇರಿ ಶಿವಪ್ಪ ರ್ಬಾ, ಚನ್ನವ್ವ ಕಾಕೋಳ, ಸುರೇಶ ಚಿನ್ನಪ್ಪನವರ, ಬಂಕಣ್ಣ ಬಾರಿಗಿಡದ, ನಾಗರಾಜ ವೆಂಕೋಜಿ, ಗಣಿಸಾಬ ಮುಲ್ಲಾನವರ, ರಮೇಶ ಸಾತಣ್ಣವರ, ಪಕ್ಕಿರೇಶ ಕೊಂಡಾಯಿ, ಬಸವರಾಜ ಶಿಗ್ಗಾಂವಿ, ಸಿದ್ದು ಮೂಟೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts