More

    ಮೂರು ವರ್ಷಗಳ ನೆಡುತೋಪು ವಿವರ ಸಲ್ಲಿಸಿ

    ಸವಣೂರ: ನೆಡುತೋಪು ಯೋಜನೆಯಡಿ ಕಳೆದ ಮೂರು ವರ್ಷಗಳಿಂದ ನೆಟ್ಟಿರುವ ಸಸಿಗಳ ಹೆಸರಲ್ಲೇ ಬಿಲ್ ತೆಗೆಯಲಾಗುತ್ತಿದೆ ಎಂದು ದುಂಡಸಿ ವಲಯ ಅರಣ್ಯ ಇಲಾಖೆ ಆರ್​ಎಫ್​ಒ ವೈ.ಆರ್. ನದಾಫ್ ಅವರನ್ನು ಪಟ್ಟಣದ ತಾ.ಪಂ. ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ತರಾಟೆಗೆ ತೆಗೆದುಕೊಂಡರು.

    ಕ್ರಿಯಾ ಯೋಜನೆಯಂತೆ ಪ್ರತಿ ವರ್ಷ ಸಸಿಗಳನ್ನು ನೆಟ್ಟು, ಪೋಷಣೆ ಕೈಗೊಳ್ಳಲಾಗುತ್ತಿದೆ ಎಂದು ಆರ್​ಎಫ್​ಒ ವೈ.ಆರ್. ನದಾಫ್ ಸಮಜಾಯಿಸಿ ನೀಡಲು ಮುಂದಾದರು. ಇದರಿಂದ ಆಕ್ರೋಶಗೊಂಡ ಸದಸ್ಯರು ಸಸಿಗಳನ್ನು ನೆಟ್ಟಿರುವ ಕುರಿತು ಮುಂದಿನ ಒಂದು ವಾರದಲ್ಲಿ ಪ್ರತ್ಯಕ್ಷ ವರದಿ ನೀಡಬೇಕು ಎಂದು ಒತ್ತಾಯಿಸಿದರು.

    ಬಿಇಒ ಐ.ಬಿ. ಬೆನಕೊಪ್ಪ ಮಾತನಾಡಿ, ‘ಸೆ. 21ರಿಂದ ಸೆ. 28ರವರೆಗೆ ಪೂರಕ ಪರೀಕ್ಷೆ ಜರುಗಲಿವೆ. ಪಟ್ಟಣದ ವಿದ್ಯಾಭಾರತಿ ಪ್ರೌಢ ಶಾಲೆ ಹಾಗೂ ಎಸ್​ಎಫ್​ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 599 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಈಗಾಗಲೇ ಪರೀಕ್ಷಾ ಕಾರ್ಯಕ್ಕೆ ಎಲ್ಲ ಅಧಿಕಾರಿಗಳ ನೇಮಕ ಮಾಡಲಾಗಿದೆ. ಒಂದು ಕಾಯ್ದಿರಿಸಿದ ಪರೀಕ್ಷಾ ಕೇಂದ್ರವನ್ನು ಗುರುತಿಸಲಾಗಿದೆ ಎಂದರು.

    ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಕಳಪೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ ಆಕ್ರೋಶ ವ್ಯಕ್ತಪಡಿಸಿದರು.

    ಸಿಡಿಪಿಒ ಅಣ್ಣಪ್ಪ ಹೆಗಡೆ ಸಭೆಗೆ ಗೈರಾಗಿದ್ದರಿಂದ, ಈ ಕುರಿತು ತನಿಖೆ ಕೈಗೊಂಡು ವರದಿ ನೀಡಲು ತಾ.ಪಂ. ಇಒಗೆ ಸೂಚಿಸಲಾಯಿತು.

    ಪ್ರತಿದಿನ ನೂರಾರು ಜನರು ಆಗಮಿಸುವ ಪಟ್ಟಣದ ಕಂದಾಯ ಇಲಾಖೆ ಕಚೇರಿಯಲ್ಲಿ ಕೋವಿಡ್-19 ಪರೀಕ್ಷೆ ಕೇಂದ್ರವನ್ನು ತೆರೆಯಬೇಕು ಎಂದು ಟಿಎಚ್​ಒ ಚಂದ್ರಕಲಾ ಜೆ. ಅವರಿಗೆ ಸೂಚಿಸಲಾಯಿತು.

    ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಇಒ ಮುನಿಯಪ್ಪ ಪಿ., ಎಡಿ ಎಸ್.ಎಚ್. ಅಮರಾಪೂರ, ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ವಗ್ಗನವರ, ಸದಸ್ಯರಾದ ಫಕೀರಗೌಡ ಕುಂದೂರ, ದುರಗಪ್ಪ ಕಾಳೆ, ಭಾರತಿ ಕುಂಬಾರ, ಸವಿತಾ ಬಿಜ್ಜೂರ, ಸಂಗೀತಾ ಪೂಜಾರ, ಇತರರು ಇದ್ದರು.

    ಬೆಳೆ ಪರಿಹಾರ ಮಾಹಿತಿ ನೀಡಿ: ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ನೀಡುವಲ್ಲಿ ಕೃಷಿ ಇಲಾಖೆ ಗೊಂದಲ ಮೂಡಿಸಿದೆ ಎಂಬ ಆರೋಪಕ್ಕೆ ಉತ್ತರಿಸಿದ ಕೃಷಿ ಸಹಾಯಕ ನಿರ್ದೇಶಕ ಬಸವನಗೌಡ ಪಾಟೀಲ, ಸರ್ಕಾರದ ನಿರ್ದೇಶನದ ಮೇರೆಗೆ ಅರ್ಜಿ ಸಲ್ಲಿಸಿ 29 ಸಾವಿರ ಹೆಕ್ಟೇರ್ ಕೃಷಿಭೂಮಿ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು ಎಂದರು. ಎಷ್ಟು ಪರಿಹಾರ ನೀಡಿದ್ದೀರಿ ಎಂಬುದನ್ನು ಸಹ ತಿಳಿಸಿ ಎಂದು ಬಸವರಾಜ ಕೋಳಿವಾಡ ಆಗ್ರಹಿಸಿದರು. ಸ್ಪಷ್ಟ ಮಾಹಿತಿ ನೀಡಲು ಕೃಷಿ ಅಧಿಕಾರಿ ತಡಕಾಡಿದ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ಮಾಹಿತಿ ಪಡೆದು ರೈತರಿಗೆ ಪರಿಹಾರ ನೀಡಿ ವರದಿ ಸಲ್ಲಿಸಲು ಸೂಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts