More

    ಖಾಸಗಿ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ ಬೆಡ್​ಗಳ ಪರಿಶೀಲಿಸಿ ವರದಿ ಸಲ್ಲಿಸಿ

    ಹಾವೇರಿ: ಕೋವಿಡ್ ಚಿಕಿತ್ಸೆಗೆಗಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರ ಪ್ರಮಾಣದಲ್ಲಿ ಕಾಯ್ದಿರಿಸಿದ ಬೆಡ್​ಗಳ ಭೌತಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ಕೋವಿಡ್ ಸ್ಥಿತಿಗತಿ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯ ಕೋವಿಡ್ ಬೆಡ್​ಗಳ ಪರಿಶೀಲನೆಗೆ ವೈದ್ಯಾಧಿಕಾರಿ, ಪರಿಸರ ಅಧಿಕಾರಿ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಗುರುವಾರದಿಂದಲೇ ತಪಾಸಣೆ ಆರಂಭಿಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದರು.

    ಜಿಲ್ಲಾ ಆಸ್ಪತ್ರೆಯಲ್ಲಿರುವ 172 ಹಾಸಿಗೆ ಸಾಮರ್ಥ್ಯವನ್ನು 198ಕ್ಕೆ ಹೆಚ್ಚಿಸುವ ಕೆಲಸನ್ನು ಶುಕ್ರವಾರದೊಳಗೆ ಪೂರ್ಣಗೊಳಿಸಿ. ಗುತ್ತಲ, ಬಂಕಾಪುರ, ಅಕ್ಕಿಆಲೂರು, ಮಾಸೂರು, ರಟ್ಟಿಹಳ್ಳಿ ಆಸ್ಪತ್ರೆಗಳಲ್ಲಿ ಕಳೆದ ಸಾಲಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ ಬೆಡ್​ಗಳ ವ್ಯವಸ್ಥೆ ಹಾಗೂ ಆಕ್ಸಿಜನ್ ಸಂಪರ್ಕ ಕಲ್ಪಿಸಲು ಮ್ಯಾನಿಫೋಲ್ಡ್ ಹಾಗೂ ಪೈಪ್​ಲೈನ್ ವ್ಯವಸ್ಥೆ ಸಹ ಮಾಡಲಾಗಿದೆ. ಅಗತ್ಯಕ್ಕನುಸಾರವಾಗಿ ಆಕ್ಸಿಜನ್ ಸಿಲಿಂಡರ್​ಗಳನ್ನು ಅಳವಡಿಸಿ ಬೆಡ್​ಗಳ ಬಳಕೆಗೆ ಸಿದ್ಧವಾಗಿರಿಸಬೇಕು ಎಂದರು.

    ಆಕ್ಸಿಜನ್ ವ್ಯರ್ಥವಾಗದಿರಲಿ: ಆಸ್ಪತ್ರೆವಾರು ರೋಗಿಗಳಿಗೆ ಆಕ್ಸಿಜನ್ ಬಳಕೆ ಪ್ರಮಾಣದ ಮಾಹಿತಿ ಪಡೆದುಕೊಂಡ ಅವರು, ದಿನವೊಂದಕ್ಕೆ ಜಿಲ್ಲೆಯಲ್ಲಿ ರೋಗಿಗಳಿಗಾಗಿ ಅಂದಾಜು 3.5 ಎಂಎಲ್ ಬಳಕೆ ಮಾಡಲಾಗುತ್ತಿದೆ. ಹೊಸದಾಗಿ 290 ಜಂಬೋ ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿದೆ. 390 ಹಳೆಯ ಸಿಲಿಂಡರ್ ಸೇರಿದಂತೆ 620 ಜಂಬೋ ಸಿಲಿಂಡರ್​ಗಳು ಬಳಕೆಗೆ ಲಭ್ಯವಿದೆ. ಆಕ್ಸಿಜನ್ ಸಿಲೆಂಡರ್ ಖಾಲಿಯಾದ ದಿನವೇ ಧಾರವಾಡಕ್ಕೆ ತೆರಳಿ ರಾತ್ರಿಯೊಳಗಾಗಿ ಭರ್ತಿ ಮಾಡಿ ತರಲು ತಾಲೂಕು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.

    ಜಿಲ್ಲಾಸ್ಪತ್ರೆಯಲ್ಲಿ 6ಕೆಎಲ್ ಹಾಗೂ ಗ್ರಾಸಿಂ ಕೈಗಾರಿಕಾ ಘಟಕದಲ್ಲಿ 30ಕೆಎಲ್ ಸಾಮರ್ಥ್ಯದ ಟ್ಯಾಂಕ್ ಬಳಕೆ ಜತೆಗೆ ಬಳ್ಳಾರಿ, ಹರಿಹರ, ಗದಗ ಹಾಗೂ ಧಾರವಾಡ ಏಜೆನ್ಸಿಗಳಿಂದಲೂ ಅಗತ್ಯ ಆಕ್ಸಿಜನ್​ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ 1ಸಾವಿರ ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದೆ. ಈ ಘಟಕವನ್ನು ತ್ವರಿತವಾಗಿ ಸ್ಥಾಪಿಸಲು ಕ್ರಮವಹಿಸುವಂತೆ ಸೂಚಿಸಿದರು. ಲಾಕ್​ಡೌನ್ ಭೀತಿಯಿಂದ ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಈವರೆಗೆ 300ಕ್ಕೂ ಅಧಿಕ ಜನರು ಬೇರೆ ಊರುಗಳಿಂದ ಬಂದಿದ್ದಾರೆ. ಪ್ರತಿದಿನ 2ಸಾವಿರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತಿದೆ ಎಂದರು. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಲಸಿಕೆ ಹಾಕಲು ಆದ್ಯತೆ ನೀಡಲಾಗಿದೆ. ನಾಲ್ಕು ಸಾವಿರ ಡೋಸ್ ದಾಸ್ತಾನು ಬಂದಿದೆ. 18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಕೆಯಾದ ತಕ್ಷಣ ಕ್ರಮವಹಿಸಲಾಗುವುದು ಎಂದರು.

    ಜಿಪಂ ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಜಿಲ್ಲಾಸ್ಪತ್ರೆ, ಸೇರಿದಂತೆ ತಾಲೂಕಾಸ್ಪತ್ರೆಗಳು ಆಕ್ಸಿಜನ್ ಬಳಕೆ ಕುರಿತು ತಕ್ಷಣ ಮೌಲ್ಯಮಾಪನ ಆರಂಭಿಸಬೇಕು. ಎರಡು ಬೆಡ್​ಗಳಿಗೆ ಒಂದು ಜಂಬೋ ಸಿಲಿಂಡರ್​ನಿಂದ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಪರಿಸರ ಅಧಿಕಾರಿ ಮಹೇಶ್ವರಪ್ಪ, ಸಹಾಯಕ ಔಷಧ ನಿಯಂತ್ರಕಿ ನೀಲಿಮಾ, ಡಾ. ದೇವರಾಜ್ ಇತರರು ಸಭೆಯಲ್ಲಿದ್ದರು.

    ಮಾಸ್ಕ್ ಹಾಕದವರಿಂದ 10 ಲಕ್ಷ ರೂ. ದಂಡ: ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಂದ ಈವರೆಗೆ 10 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸಬೇಕಾಗಿದೆ. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೆಳಗ್ಗೆ ಸಂತೆ ಸಮಯದಲ್ಲಿ ಸಾರ್ವಜನಿಕರು ಮುಕ್ತವಾಗಿ ಓಡಾಡುತ್ತಿದ್ದಾರೆ. ಇದರಿಂದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    236 ಜನರಿಗೆ ಪಾಸಿಟಿವ್, ಮೂವರ ಸಾವು: ಹಾವೇರಿ ಜಿಲ್ಲೆಯಲ್ಲಿ ಗುರುವಾರ 236 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. 114 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. ಹಾವೇರಿ ತಾಲೂಕಿನಲ್ಲಿ ಅತಿಹೆಚ್ಚು 52, ರಾಣೆಬೆನ್ನೂರ ತಾಲೂಕಿನಲ್ಲಿ 46, ಶಿಗ್ಗಾಂವಿ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ತಲಾ 45, ಬ್ಯಾಡಗಿ ತಾಲೂಕಿನಲ್ಲಿ 22, ಹಾನಗಲ್ಲ ತಾಲೂಕಿನಲ್ಲಿ 21, ಸವಣೂರ ತಾಲೂಕಿನಲ್ಲಿ 4 ಹಾಗೂ ಇತರೆ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಶಿಗ್ಗಾಂವಿ ತಾಲೂಕಿನಲ್ಲಿ 48, ಹಾವೇರಿ ತಾಲೂಕಿನಲ್ಲಿ 23, ಹಾನಗಲ್ಲ ತಾಲೂಕಿನಲ್ಲಿ 15, ಹಿರೇಕೆರೂರ ತಾಲೂಕಿನಲ್ಲಿ 13, ಸವಣೂರ ತಾಲೂಕಿನಲ್ಲಿ 11, ರಾಣೆಬೆನ್ನೂರ ತಾಲೂಕಿನಲ್ಲಿ 4 ಜನರು ಸೇರಿ 114 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಹಾವೇರಿ ತಾಲೂಕಿನ 63 ವರ್ಷದ ವೃದ್ಧ, ರಾಣೆಬೆನ್ನೂರ ತಾಲೂಕಿನ 68 ವರ್ಷದ ವೃದ್ಧ ಹಾಗೂ 45 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 1,500 ಸಕ್ರಿಯ ಪ್ರಕರಣಗಳಿದ್ದು, 717 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 783 ಜನರು ಹೋಂ ಐಸೋಲೇಷನ್​ನಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts