More

    ಸುಭಿಕ್ಷ ಕೇರಳಂ ಮೀನು ಕೃಷಿ, ಮನೆ ಹಿತ್ತಲಲ್ಲೇ ಬೆಳೆಯುವ ಯೋಜನೆ

    ಉಪ್ಪಳ: ಕಾಸರಗೋಡು ಜಿಲ್ಲೆಯ ಮೀನುಪ್ರಿಯರಿಗೆ ಆರೋಗ್ಯಕರ ಮೀನು ಸಿಗಲಿದೆ. ಸ್ಥಳೀಯಾಡಳಿತ, ಮೀನುಗಾರಿಕೆ ಇಲಾಖೆ ಸಹಯೋಗದಡಿ ಶೇ.40 ಸಬ್ಸಿಡಿಯೊಂದಿಗೆ ಕಾಸರಗೋಡಿನಲ್ಲಿ ಸುಭಿಕ್ಷ ಕೇರಳಂ ಮೀನು ಕೃಷಿ ಯೋಜನೆ ಬಂದಿದೆ. ಈ ಯೋಜನೆಯನ್ವಯ ಜಿಲ್ಲೆಯಲ್ಲಿ 420 ಕೃಷಿಕರು ಮೀನು ಸಾಕುತ್ತಿದ್ದು, ಇವರಲ್ಲಿ ಅಧಾರ್ಂಶ ಜನ ತಮ್ಮ ಮನೆಯ ಹಿತ್ತಲಲ್ಲೇ ಮೀನು ಕೃಷಿ ನಡೆಸುತ್ತಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ ಒಂದು ಕೆಜಿ ತೂಗುವ ಆಸಾಂ ಬಾಳೆ ಮೀನು ಬೆಳೆಯಲಾಗುತ್ತಿದೆ.

    ದೊಡ್ಡ ವೆಚ್ಚದ ಮೀನಿನ ತಿನಿಸನ್ನು ಬಯೋಫ್ಲೆಕ್ಸ್ ತಂತ್ರಜ್ಞಾನ ಮೂಲಕ ಶೇ.30ಕ್ಕೆ ಕಡಿತಗೊಳಿಸಲು ಸಾಧ್ಯವಾಗಿರುವುದು ಇಲ್ಲಿನ ವಿಶೇಷ. ಮೀನು ಕೃಷಿಯಲ್ಲಿ ಬಹುತೇಕ ತಿನಿಸಿನ ಮೂಲಕ ನೀರಿಗೆ ಸೇರುವ ಅಮೋನಿಯಂ, ಬ್ಯಾಕ್ಟೀರಿಯಾ ಕಾರ್ಬೋಹೈಡ್ರೇಟ್(ಮರಗೆಣಸಿನ ಪುಡಿ, ಸಕ್ಕರೆ) ಬಳಸಿ ಮೈಕ್ರೋಬಿಯನ್ ಪ್ರೊಟೀನ್ ಆಗಿ ಪರಿವರ್ತಿಸಲಾಗುತ್ತದೆ. ಈ ಮೂಲಕ ಮೀನಿಗೆ ಬೇಕಾಗಿರುವ ತಿನಿಸು ಟ್ಯಾಂಕ್‌ನಲ್ಲೇ ಲಭ್ಯವಾಗಲಿದೆ. 21 ಘನ ಮೀಟರ್ ವಿಸ್ತೀರ್ಣದ ಟ್ಯಾಂಕ್‌ನಲ್ಲಿ 1250 ನೈಲ್ ತಿಲಾಪ್ಪಿಯ (ಗಿಫ್ಟ್/ ಚಿತ್ರಲಾಡ) ಮರಿಗಳನ್ನು ಸಾಕಲಾಗುತ್ತದೆ. 6 ತಿಂಗಳ ಅವಧಿಯಲ್ಲಿ 400ರಿಂದ 500 ಗ್ರಾಂ ತೂಕದ ಮೀನು ಬೆಳೆ ನಿರೀಕ್ಷಿಸಲಾಗಿದೆ.

    ಮನೆಯಂಗಳದಲ್ಲೇ ಕೆರೆ: ಮನೆಯಂಗಳದಲ್ಲೇ ಬಯೋಫ್ಲೆಕ್ಸ್ ಜಲಾಶಯ ನಿರ್ಮಿಸಿ ಮೀನು ಕೃಷಿ ಮಾಡಬಹುದು. 2 ಸೆಂಟ್ಸ್ ಜಾಗ ಸಾಕು. ಕರಿ ಮೀನು ಕೃಷಿಗೆ 50 ಸೆಂಟ್ಸ್ ಜಾಗದ ಕೆರೆ ಸಾಕಾಗುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ 136 ಬಯೋಫ್ಲೆಕ್ಸ್ ಯೂನಿಟ್‌ಗಳಿಂದ ಒಂದು ವರ್ಷದಲ್ಲಿ 80ರಿಂದ 100 ಟನ್ ಮೀನುಗಳ ಉತ್ಪಾದನೆ ಸಾಧ್ಯ. ಮಾರುಕಟ್ಟೆಯಲ್ಲಿ ಕೆಜಿಗೆ 120ರಿಂದ 300 ರೂ. ಬೆಲೆ ಇದೆ. ಹಿತ್ತಿಲ ಕೆರೆಗಾಗಿ 2 ಸೆಂಟ್ಸ್ ವಿಸ್ತೀರ್ಣದಲ್ಲಿ ಕೆರೆ ನಿರ್ಮಿಸಬೇಕು. ಇದಕ್ಕಾಗಿ 271 ಕೃಷಿಕರು ಜಿಲ್ಲೆಯಲ್ಲಿ ಒಟ್ಟು 2.19 ಹೆಕ್ಟೇರ್ ಜಾಗದಲ್ಲಿ ಕೆರೆ ನಿರ್ಮಿಸುತ್ತಿದ್ದಾರೆ.

    ಕರಿಮೀನು, ಕಾಳಂಜಿ: ಯೋಜನೆಯ ಅನ್ವಯ 50 ಸೆಂಟ್ಸ್ ವಿಸ್ತೀರ್ಣದ ಕೆರೆಯಲ್ಲಿ ಕರಿಮೀನು ಕೃಷಿ ಮಾಡಲಾಗುತ್ತದೆ. 1500 ಮೀನು ಮರಿಗಳ ಜತೆ 6 ಕೆಜಿ ತೂಕದ ಮೀನುಗಳ ಹೂಡಿಕೆ ಮೂಲಕ ಉತ್ತಮ ತಳಿಯ ಮೀನುಗಳ ಜನನ ಸಾಧ್ಯವಾಗುತ್ತದೆ. ಹಿನ್ನೀರಿನ ಗೂಡು ಕೃಷಿ ಕೂಡ ಸುಭಿಕ್ಷ ಕೇರಳಂನ ಮತ್ತೊಂದು ಗಮನ ಸೆಳೆಯುವ ಯೋಜನೆ. ಮಾರುಕಟ್ಟೆಯಲ್ಲಿ ಧಾರಾಳ ಬೇಡಿಕೆಯಿರುವ ಕಾಳಂಜಿ(ಕೋಳನ್), ಚೆನ್ನಲ್ಲಿ, ಕರಿಮೀನುಗಳನ್ನು ಈ ಯೋಜನೆಯಡಿ ಬೆಳೆಯಲಾಗುತ್ತದೆ.

    300 ಟನ್ ಮೀನು ಉತ್ಪಾದನೆ: ಸುಭಿಕ್ಷ ಕೇರಳಂ ಯೋಜನೆಯನ್ವಯ ಜಿಲ್ಲೆಯಲ್ಲಿ 300 ಟನ್ ಮೀನು ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ಕೋವಿಡ್ ಮಹಾಮಾರಿ ಅವಧಿಯಲ್ಲಿ ನೌಕರಿ ಕಳೆದುಕೊಂಡಿರುವ ಅನಿವಾಸಿ ಭಾರತೀಯರು ಮತ್ತು ಯುವಜನತೆ ಸುಭಿಕ್ಷ ಕೇರಳಂ ಯೋಜನೆ ಮೂಲಕ ನೂತನ ಸಾಧ್ಯತೆ ಕಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮೀನು ಕೃಷಿಯಲ್ಲಿ ಗೃಹಿಣಿಯರು ಹೆಚ್ಚುವರಿ ಆಸಕ್ತಿ ತೋರುತ್ತಿದ್ದಾರೆ.

    ಲಾಕ್‌ಡೌನ್ ಸಂದರ್ಭ ಖಾಸಗಿ ಭೂಮಿಯಲ್ಲಿ ಮೀನು ಕೃಷಿ ಮಾಡುವ ಯೋಚನೆ ಮೂಡಿತು. ಜಿಲ್ಲೆಯ ದಕ್ಷಿಣ ವ್ಯಾಪ್ತಿಯಲ್ಲಿ ಮೀನು ಕೃಷಿ ಬಹಳಷ್ಟಿದ್ದು, ಮಂಜೇಶ್ವರ ವ್ಯಾಪ್ತಿಯಲ್ಲಿ ಇರಲಿಲ್ಲ. ಆರಂಭದಲ್ಲಿ ಮಾಹಿತಿಗೆ ಕಷ್ಟವಾದರೂ ಬಳಿಕ ಕಲಿತುಕೊಳ್ಳಲಾಯಿತು. ಆ ಬಳಿಕ ತಾಲೂಕು ವ್ಯಾಪ್ತಿಯ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಈಗ ಇತರರು ನಮ್ಮಿಂದ ಪ್ರೇರಣೆಗೊಂಡು ಮೀನು ಕೃಷಿ ಆರಂಭಿಸಿದ್ದಾರೆ.
    – ಅಶ್ವಥ್ ಪೂಜಾರಿ ಲಾಲ್‌ಭಾಗ್, ಪೈವಳಿಕೆ ಮೀನು ಘಟಕದ ರೂವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts