More

    ಉಪವಿಭಾಗಾಧಿಕಾರಿ ಆದೇಶ ಗಾಳಿಗೆ

    ಜೊಯಿಡಾ: ಕರೊನಾ 3ನೇ ಅಲೆಯ ಹಿನ್ನೆಲೆಯಲ್ಲಿ ನಿಯಮ ಬಿಗುಗೊಳಿಸಲಾಗಿದೆ. ತಾಲೂಕಿನ ಹೋಂಸ್ಟೇ ಮತ್ತು ರೆಸಾರ್ಟ್ ಗಳಿಗೆ ಬೇರೆಡೆ ಕಡೆಯಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ಪ್ರತಿದಿನ ತಾಲೂಕು ಆಡಳಿತಕ್ಕೆ ನೀಡಬೇಕು ಎಂದು ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಆದೇಶ ನೀಡಿದ್ದಾರೆ. ಆದರೆ, ಬಹುಪಾಲು ಮಾಲೀಕರು ಮಾಹಿತಿ ನೀಡುತ್ತಿಲ್ಲ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೂ ಕೈಕಟ್ಟಿ ಕುಳಿತಿದ್ದಾರೆ.

    ರೆಸಾರ್ಟ್​ಗಳಲ್ಲಿ ಹೊರ ರಾಜ್ಯದ ಪ್ರವಾಸಿಗರು ವಾಸ್ತವ್ಯ ಮಾಡುತ್ತಿದ್ದಾರೆ. ಇಲ್ಲಿನ ಪ್ರವಾಸಿ ಗೃಹದ ಬಳಿ ನಿಲ್ಲುವ ವಾಹನಗಳು ಸಹ ಬೇರೆ ರಾಜ್ಯದ ನೋಂದಣಿ ಸಂಖ್ಯೆ ಹೊಂದಿವೆ. ಜೊಯಿಡಾ ತಾಲೂಕಿನ ರೆಸಾರ್ಟ್ ಮತ್ತು ಹೋಂ ಸ್ಟೇಗೆ ಹೊರ ರಾಜ್ಯದಿಂದ ಬಂದಿರುವ ಪ್ರವಾಸಿಗರ ಮಾಹಿತಿ ಪಡೆಯಲು ನೋಡಲ್ ಅಧಿಕಾರಿಯನ್ನಾಗಿ ಜಿ.ವಿ. ಭಟ್ಟ ಅವರನ್ನು ನೇಮಿಸಲಾಗಿದೆ. ಅವರಿಗೂ ಎರಡು ಮೂರು ರೆಸಾರ್ಟ್/ಹೋಂ ಸ್ಟೇಗಳಿಂದ ಮಾಹಿತಿ ಬಂದಿದ್ದು ಬಿಟ್ಟರೆ, ಉಳಿದವರು ಮಾಹಿತಿ ನೀಡುತ್ತಿಲ್ಲವಂತೆ.

    ಬೇರೆ ರಾಜ್ಯದ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ: ಶನಿವಾರದಂದು ಗಣೇಶಗುಡಿ ಕಾಳಿನದಿ ಸೇತುವೆ ಬಳಿ ಆಂಧ್ರಪ್ರದೇಶದ ನೋಂದಣಿ ಹೊಂದಿರುವ ಮೂರು ವಾಹನದಲ್ಲಿ ಪ್ರವಾಸಿಗರು ಬಂದ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ದಾಖಲೆ ಕೇಳಿದ ವೇಳೆ ಅವರಲ್ಲಿ ಕೆಲವರನ್ನು ಬಿಟ್ಟರೆ ಉಳಿದವರಲ್ಲಿ ಯಾವುದೇ ದಾಖಲೆ ಇರಲಿಲ್ಲ. ರೆಸಾರ್ಟ್ ನಲ್ಲಿ ಉಳಿಯಲು ಬಂದ ಇವರಿಗೆ ಕೋವಿಡ್ ಪರೀಕ್ಷೆ ಮಾಡಿಸಿ ನಂತರ ಕಳುಹಿಸಲಾಯಿತು. ಇದೇ ತರನಾಗಿ ಅನೇಕರು ಇಲ್ಲಿಗೆ ನುಸುಳಿ ಕಾಯಿಲೆ ಉಲ್ಬಣಿಸಬಹುದು ಎನ್ನುವ ಭೀತಿ ಎದುರಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮ ಜಾರಿಗೆ ಮುಂದಾಗಬೇಕಿದೆ.

    ಸಭೆಯಲ್ಲಿ ಸೂಚಿಸಲಾಗಿತ್ತು: ಗಣೇಶಗುಡಿಯ ಕೆಪಿಸಿ ಸಭಾಭವನದಲ್ಲಿ ಜುಲೈ 7 ರಂದು ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಅವರು ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಭೆ ಕರೆದು ಗೋವಾ, ಮಹಾರಾಷ್ಟ್ರ, ಕೇರಳದಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ಪ್ರತಿದಿನ ತಹಸೀಲ್ದಾರ್ ಕಚೇರಿಗೆ ಮಾಹಿತಿ ಕೊಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು.

    ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಹೊರ ರಾಜ್ಯದಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ಸಂಗ್ರಹಿಸಲು ನೋಡಲ್ ಅಧಿಕಾರಿಯನ್ನ ನೇಮಿಸಲಾಗಿದೆ. ಅವರಿಗೆ ರೆಸಾರ್ಟ್ ಮಾಲೀಕರು ಮಾಹಿತಿ ಕೊಡುತ್ತಿಲ್ಲ ಎಂಬ ವಿಷಯ ಗೊತ್ತಿಲ್ಲ. ರೆಸಾರ್ಟ್/ಹೋಂ ಸ್ಟೇ ಮಾಲೀಕರಿಗೆ ಮತ್ತೊಂದು ನೋಟಿಸ್ ಕೊಡುತ್ತೇನೆ.

    | ಸಂಜಯ ಕಾಂಬಳೆ, ತಹಸೀಲ್ದಾರ್ ಜೊಯಿಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts