More

    ಅರ್ಬಿಗುಡ್ಡೆ ಹಾಸ್ಟೆಲ್‌ಗೆ ಬಾರದ ವಿದ್ಯಾರ್ಥಿನಿಯರು

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಬಂಟ್ವಾಳದ ಸರ್ಕಾರಿ ಪಾಲಿಟೆಕ್ನಿಕ್‌ಗೆ ನಿರ್ಮಾಣಗೊಂಡ ವಿದ್ಯಾರ್ಥಿನಿ ನಿಲಯದ ಉದ್ದೇಶ ಸಾಕಾರಗೊಂಡಿಲ್ಲ. ಈ ಕಟ್ಟಡದಲ್ಲಿ ವಿದ್ಯಾರ್ಥಿನಿಯರು ಉಳಿದುಕೊಳ್ಳಲು ನಿರಾಸಕ್ತಿ ತೋರುತ್ತಿರುವುದರಿಂದ ಒಂದು ವರ್ಷದಿಂದ ಕಂಪ್ಯೂಟರ್ ಲ್ಯಾಬ್ ಆಗಿ ಪರಿವರ್ತಿಸಲಾಗಿದೆ.

    ಬಂಟ್ವಾಳದ ಅರ್ಬಿಗುಡ್ಡೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗೆ ಸ್ವಂತ ಕಟ್ಟಡ ನಿರ್ಮಾಣಗೊಂಡ ಬಳಿಕ ಇಲ್ಲಿಗೆ ಬರುವ ವಿದ್ಯಾರ್ಥಿನಿಯರ ಅನುಕೂಲದ ದೃಷ್ಟಿಯಿಂದ ವಿದ್ಯಾರ್ಥಿನಿ ನಿಲಯ ಸ್ಥಾಪಿಸಲಾಯಿತು. 2011ರ ಏಪ್ರಿಲ್ 23ರಂದು ಅಂದಿನ ಬಂಟ್ವಾಳ ಶಾಸಕರಾಗಿದ್ದ ಬಿ.ರಮಾನಾಥ ರೈ ಅಧ್ಯಕ್ಷತೆ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. 2015ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಮಾ.22ರಂದು ಉದ್ಘಾಟನೆಗೊಂಡಿತ್ತು.

    ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿ ನಿಲಯ ಉದ್ಘಾಟನೆಗೊಂಡು 6 ವರ್ಷ ಸಮೀಪಿಸಿದರೂ ವಿದ್ಯಾರ್ಥಿನಿಯರು ಮಾತ್ರ ಇಲ್ಲಿಗೆ ಬರಲು ಕೇಳುತ್ತಿಲ್ಲ.

    ಏನು ಕಾರಣ?: ಬಂಟ್ವಾಳದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪಸ್ತುತ 580 ಮಂದಿ ವಿದ್ಯಾರ್ಥಿಗಳು ಹಾಗೂ 93 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿಗೆ ಬರುವ ಬಹುತೇಕ ಮಂದಿ ವಿದ್ಯಾರ್ಥಿನಿಯರು ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದಾರೆ. ಪ್ರತಿ ವರ್ಷ ಸಂಸ್ಥೆ ವಿದ್ಯಾರ್ಥಿನಿ ನಿಲಯದ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದರೂ ಯಾರೊಬ್ಬ ವಿದ್ಯಾರ್ಥಿನಿಯೂ ಅರ್ಜಿ ಸಲ್ಲಿಸುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಉಪನ್ಯಾಸಕರು. ಯಾಕೆಂದರೆ ಇಲ್ಲಿ ಉಳಿದುಕೊಳ್ಳಲು ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು. ಆದರೆ ಪಾಣೆಮಂಗಳೂರಿನ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿ ನಿಲಯದಲ್ಲಿ ಉಚಿತ ಸೌಲಭ್ಯಗಳು ಇರುವುದರಿಂದ ವಿದ್ಯಾರ್ಥಿನಿಯರು ಅದರತ್ತ ಆಸಕ್ತಿ ತೋರಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ಮಾತ್ರ ಕೆಲವು ವಿದ್ಯಾರ್ಥಿನಿಯರು ಹೊಸ ಕಟ್ಟಡದಲ್ಲಿ ಉಳಿದುಕೊಳ್ಳುತ್ತಾರೆ. ಕಾಂಪೌಂಡ್ ಸೇರಿದಂತೆ ಸುರಕ್ಷತೆ ಇಲ್ಲದಿರುವುದು ವಿದ್ಯಾರ್ಥಿನಿಯರು ಬರದಿರಲು ಮತ್ತೊಂದು ಕಾರಣ.

    ವಿದ್ಯಾರ್ಥಿ ನಿಲಯ ನಿರ್ಮಾಣ: ಪ್ರಸ್ತುತ ಅದರ ಪಕ್ಕವೇ ಬಾಲಕರಿಗಾಗಿ ಮತ್ತೊಂದು ವಿದ್ಯಾರ್ಥಿ ನಿಲಯ ನಿರ್ಮಾಣಗೊಳ್ಳುತ್ತಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಡಿ ಸುಮಾರು 1.60 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಅಂತಸ್ತಿನ ಕಾಮಗಾರಿಗೆ ಉಳಿಕೆ ಅನುದಾನ ಬಿಡುಗಡೆಗೊಳ್ಳಬೇಕಿದೆ.

    ವಿದ್ಯಾರ್ಥಿನಿ ನಿಲಯದ ಪ್ರವೇಶಾತಿಗಾಗಿ ಪ್ರತಿವರ್ಷ ಅರ್ಜಿ ಆಹ್ವಾನಿಸುತ್ತೇವೆ. ಆದರೆ ಯಾರೂ ಅರ್ಜಿ ಸಲ್ಲಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಈ ಕಟ್ಟಡದಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಿ ಕಟ್ಟಡವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇವೆ.
    ಸಿ.ಜೆ. ಪ್ರಕಾಶ್ ಪ್ರಾಂಶುಪಾಲರು ಸರ್ಕಾರಿ ಪಾಲಿಟೆಕ್ನಿಕ್, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts