More

    ವಿದ್ಯಾರ್ಥಿಗಳು ಸಾಧಕರಾಗಲು ಶ್ರಮಿಸಿ: ಶಿಕ್ಷಕರಿಗೆ ತಹಸೀಲ್ದಾರ್ ಡಾ.ಅಶ್ವತ್ಥ್ ಸಲಹೆ

    ಹರಿಹರ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ನೈತಿಕ ಮೌಲ್ಯ ಬಿತ್ತುವ ಜತೆಗೆ ಉತ್ತಮ ಸಾಧಕರನ್ನಾಗಿಸಿ ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತರುವ ರೀತಿ ಶಿಕ್ಷಕರು ರೂಪಿಸಬೇಕು ಎಂದು ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್ ಕಿವಿಮಾತು ಹೇಳಿದರು.

    ಇಲ್ಲಿನ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಚೆಕ್ ವಿತರಿಸಿ ಮಾತನಾಡಿದರು.

    ಧರ್ಮಸ್ಥಳ ಸಂಸ್ಥೆ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರಕ್ಕೆ ಸೀಮಿತವಾಗದೆ ಸಮಾಜದ ಪ್ರತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪರಿವರ್ತನೆಗೆ ದಾರಿಯಾಗಿದೆ. ಇಂತಹ ಸಂಸ್ಥೆಯ ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇನ್ನೊಬ್ಬರಿಗೆ ಸಹಾಯ ಮಟ್ಟಕ್ಕೆ ಬೆಳೆದಾಗ ಮಾತ್ರ ಶಿಷ್ಯವೇತನಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

    ಶಿಕ್ಷಣ, ಪರಿಸರ ಸಂರಕ್ಷಣೆ, ಕೆರೆ ಕಟ್ಟೆಗಳ ಅಭಿವೃದ್ಧಿ ಪಡಿಸುವುದರ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಕೋಟ್ಯಂತರ ಹಣವನ್ನು ಶಿಷ್ಯವೇತನದ ಮೂಲಕ ನೀಡುತ್ತಿರುವುದು ಶ್ಲಾಘನೀಯ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಮಾತನಾಡಿ, ಸಣ್ಣ, ಸಣ್ಣ ಸಹಾಯಗಳು ದೊಡ್ಡ ಸಾಧನೆಗೆ ದಾರಿ ದೀಪವಾಗುತ್ತವೆ. ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳ ಯೋಜನೆಯ ಕೊಡುಗೆ ಅಪಾರ ಎಂದು ತಿಳಿಸಿದರು.

    ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮಾತನಾಡಿ, ಈ ವರ್ಷ ರಾಜ್ಯಾದ್ಯಂತ ಆಯ್ದ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ 750 ಜ್ಞಾನದೀಪ ಶಿಕ್ಷಕರನ್ನು ಒದಗಿಸಲಾಗಿದೆ. ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದಡಿ ವೃತ್ತಿಪರ ಮತ್ತು ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ಇದುವರೆಗೆ 52,924 ವಿದ್ಯಾರ್ಥಿಗಳಿಗೆ 64 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.

    ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ನಮ್ಮ ಸಂಸ್ಥೆ ಬಡವರಿಗೆ ಆಸರೆಯಾಗಿ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತಿದೆ ಎಂದರು.

    ಎಲ್‌ಐಸಿ ಪ್ರಬಂಧಕ ಕೃಷ್ಣಮೂರ್ತಿ, ಸಿಎಸ್‌ಸಿ ನಿರ್ದೇಶಕ ಎಸ್.ಪದ್ಮಯ್ಯ, ವಲಯ ಮೇಲ್ವಿಚಾರಕರಾದ ಕೃಷ್ಣ ಭಟ್, ಶಿಲ್ಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts