More

    ವಿದ್ಯಾರ್ಥಿನಿ ಕರೆಗೆ ಸ್ಪಂದಿಸಿದ ಮುಖ್ಯ ಮಂತ್ರಿ

    ಬೆಳಗಾವಿ: ‘ಸರ್… ನಮ್ಮ ತಾಯಿಗೆ ಮೂತ್ರಕೋಶದ ಮರುಜೋಡಣೆ (ಕಸಿ) ಶಸ್ತ್ರಚಿಕಿತ್ಸೆಯಾಗಿದೆ. ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆಗಳು ಖಾಲಿಯಾಗಿವೆ. ದಯವಿಟ್ಟು ಮಾತ್ರೆಗಳನ್ನು ಪೂರೈಸಿರಿ..’

    ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ವಿದ್ಯಾರ್ಥಿನಿ ಪವಿತ್ರಾ ಅರಭಾಂವಿ, ಸಿಎಂ ಬಿ.ಎಸ್, ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಪರಿ. ನನ್ನ ತಂದೆ-ತಾಯಿ ಇಬ್ಬರಿಗೂ ಕಿಡ್ನಿ ಕಸಿ ಶಸಚಿಕಿತ್ಸೆ ಆಗಿದೆ. ಲಾಕ್‌ಡೌನ್‌ನಿಂದಾಗಿ ಮಾತ್ರೆಗಳು ಸಿಗುತ್ತಿಲ್ಲ. ದಯಮಾಡಿ ಮಾತ್ರೆಗಳನ್ನು ಪೂರೈಸಿ ಎಂದು ಕಣ್ಣೀರಿಟ್ಟಳು. ಕೂಡಲೇ ಮುಖ್ಯಮಂತ್ರಿ ಬಿಎಸ್‌ವೈ ಸ್ಪಂದಿಸಿ, ಜಿಲ್ಲಾಡಳಿತದಿಂದ ಮಾತ್ರೆಗಳನ್ನು ಪೂರೈಸುವುದಾಗಿ ಖಚಿತ ಭರವಸೆ ನೀಡಿದರು.

    ಜಿಲ್ಲಾಧಿಕಾರಿಗೆ ದೂರವಾಣಿ ಕರೆ: ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಫೋನ್ ಕರೆ ಮಾಡಿ, ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದಲ್ಲಿರುವ ಸೇಕವ್ವ ಅರಭಾಂವಿ ಅವರಿಗೆ ಅಗತ್ಯವಿರುವ ಮಾತ್ರೆಗಳನ್ನು ಪೂರೈಸಿ ಎಂದು ಸೂಚನೆ ನೀಡಿದ್ದರು. ಸಿಎಂ ಕರೆಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು, ತಹಸೀಲ್ದಾರ್ ಮೂಲಕ ಒಂದು ತಿಂಗಳಿಗೆ ಅಗತ್ಯವಿರುವ ಮಾತ್ರೆಗಳನ್ನು ಕಳುಹಿಸಿಕೊಟ್ಟರು.

    ಸಿಎಂ ಕಚೇರಿಗೆ ಫೋನ್ ಮಾಡಿದ್ದೇಕೆ?: ಮೂತ್ರಕೋಶದ ಕಾಯಿಲೆಯಿಂದ 14-15 ತಿಂಗಳಿನಿಂದ ಬಳಲುತ್ತಿದ್ದ ನರಸಾಪುರ ಗ್ರಾಮದ 45 ವರ್ಷದ ಸೇಕವ್ವ ಅರಂಭಾವಿ (ಜನವರಿ 17,2020) ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಳು. ಆದರೂ ಮೂತ್ರಕೋಶದ ನೋವು ಕಡಿಮೆಯಾದ ಕಾರಣ, ವೈದ್ಯರ ಸಲಹೆ ಮೇರೆಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಪತ್ನಿಗೆ ಪತಿ ಹನುಮಂತ ಅವರು ಒಂದು ಕಿಡ್ನಿ ನೀಡಿ ಜೀವ ಉಳಿಸಿಕೊಂಡಿದ್ದರು. ತೀವ್ರ ಬಡತನದಿಂದ ಬಳಲುತ್ತಿರುವ ಈ ಕುಟುಂಬ ಸೇಕವ್ವಳ ಶಸ್ತ್ರಚಿಕಿತ್ಸೆಗಾಗಿ 10 ಲಕ್ಷ ರೂ. ಗೆ ಇದ್ದ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಮಾರಾಟ ಮಾಡಿದ್ದರು. ಇಬ್ಬರು ಪುತ್ರರು, ಪುತ್ರಿ ಇದ್ದಾಳೆ.

    ಶುಕ್ರವಾರ ಸಂಜೆ ನಮಗಾಗಿದ್ದ ಸಮಸ್ಯೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ದೂರವಾಣಿ ಮೂಲಕ ಹೇಳಿಕೊಂಡಿದ್ದೆ. ನಾವು ರಾಮದುರ್ಗ ತಾಲೂಕಿನಿಂದ 8 ಕಿ.ಮೀ. ದೂರದಲ್ಲಿದ್ದೇವೆ. ಲಾಕ್‌ಡೌನ್‌ನಿಂದಾಗಿ ಮಾತ್ರೆ ತರುವುದಕ್ಕೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಿಎಂಗೆ ಕರೆ ಮಾಡಿ ಮನವಿ ಮಾಡಿದ್ದೆ. ಇದರಿಂದಾಗಿ ಜಿಲ್ಲಾಡಳಿತ ಶುಕ್ರವಾರ ರಾತ್ರಿ 10 ಗಂಟೆಗೆ ಮಾತ್ರೆ ತಲುಪಿಸಿದೆ. ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನಮ್ಮ ಕುಟುಂಬ ಎಂದಿಗೂ ಆಭಾರಿಯಾಗಿರುತ್ತದೆ.
    | ಪವಿತ್ರಾ ಅರಭಾಂವಿ, ಸಿಎಂಗೆ ಕರೆ ಮಾಡಿದ್ದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts