More

    ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸಿ

    ಪಿರಿಯಾಪಟ್ಟಣ : ಕಳೆದ ಹತ್ತು ವರ್ಷಗಳಿಂದ ಆಡಳಿತ ಚುಕ್ಕಾಣಿ ಹಿಡಿದು ದೇಶವನ್ನು ಯಶಸ್ವಿಯಾಗಿ ಮುನ್ನೆಡೆಸುವ ಮೂಲಕ ವಿಶ್ವದಲ್ಲಿ ಪ್ರಸಿದ್ಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.


    ಲೋಕಸಭಾ ಚುನಾವಣೆ ನಿಮಿತ್ತ ಪಟ್ಟಣದ ಶ್ರೀಮಂಜುನಾಥ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೈತ್ರಿ ಸಭೆಯಲ್ಲಿ ಅವರು ಮಾತನಾಡಿದರು.


    ಯಾವುದೇ ಸ್ವಾರ್ಥವಿಲ್ಲದೆ, ಭ್ರಷ್ಟಾಚಾರವಿಲ್ಲದೆ ಸುಲಲಿತ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಅವರು ದೇಶದ ಭದ್ರತೆ ಮತ್ತು ಸುಭದ್ರತೆ ಕಾಪಾಡುವಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ನರೇಂದ್ರ ಮೋದಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದಾರೆ ಎಂದರೆ ಅವರ ಸಾಮರ್ಥ್ಯದ ಬಗ್ಗೆ ನೀವೇ ನಿರ್ಣಯಿಸಿ ಎಂದರು.


    ಈ ಪುಣ್ಯಾತ್ಮರು ಯಾವಾಗ ಅಧಿಕಾರಕ್ಕೆ ಬಂದರೋ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಿಸುವಂತಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಯೇ ಇಲ್ಲ, ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅಭಿವೃದ್ಧಿಯೇ ಇಲ್ಲದೆ ರಾಜ್ಯವನ್ನು ಆಳುವಂತಹ ಪರಿಸ್ಥಿತಿಯಲ್ಲಿ ಇದೆ. ಅನುದಾನ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿರುವುದು ನಾಚಿಕೆಗೇಡು. ಸರ್ಕಾರದ ಬಹುತೇಕ ಸಚಿವರು ಅಧಿಕಾರಿಗಳ ವರ್ಗಾವಣೆಯ ದಂಧೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.


    ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಅವಧಿಯಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣವಾಗಿರದಿದ್ದರೆ ಇಂದು ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕುಡಿಯುವ ನೀರಿಗಾಗಿ ಆಹಾಕಾರವೇ ಉಂಟಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ನಮ್ಮ ಪಕ್ಷಕ್ಕೆ ಹಾನಿಯಾಗಿರುವುದು ನಿಜ. ಆದರೆ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸುತ್ತಿರುವ ಸಿದ್ದರಾಮಯ್ಯ ಅವರಿಗೆ 2018 ರಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಸೋಲುಣಿಸಿದ್ದು ಎಂಬುದು ನೆನಪಿಲ್ಲವೇ ಎಂದು ಪ್ರಶ್ನಿಸಿದರು.
    ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ಈ ಬಾರಿ ನಾವೆಲ್ಲರೂ ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.


    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆ ಮತ್ತು ಆಶೀರ್ವಾದದಿಂದ ನಾನು ಈ ಕ್ಷೇತ್ರದ ಅಭ್ಯರ್ಥಿಯಾಗಿ ಬಂದಿದ್ದೇನೆ. ಮೈಸೂರಿನ ಜನರಿಗೆ ಅರಮನೆಯ ಜನರೊಂದಿಗೆ ಭಾವನಾತ್ಮಕ ಸಂಬಂಧವಿದ್ದು, ಭಾರತೀಯ ಪರಂಪರೆಯ ರಕ್ಷಣೆ ಮೈಸೂರು ಸಂಸ್ಥಾನದ ಆಡಳಿತದ ಉಸಿರಾಗಿತ್ತು ಎಂಬುದು ಹೆಮ್ಮೆಯ ವಿಷಯ ಎಂದರು.


    ಸಭೆಯಲ್ಲಿ ಮಾಜಿ ಶಾಸಕ ಎಚ್.ಸಿ.ಬಸವರಾಜ್, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿದರು. ಮಾಜಿ ಶಾಸಕ ಎಸ್.ರಾಮದಾಸ್, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ, ಮೈತ್ರಿ ಪಕ್ಷಗಳ ಮುಖಂಡರಾದ ಆರ್.ಟಿ.ಸತೀಶ್, ಪಿ.ಪ್ರಶಾಂತ್ ಗೌಡ, ಕೆ.ಎನ್.ಸೋಮಶೇಖರ್, ಎಂ.ಎಂ.ರಾಜೇಗೌಡ, ಎಸ್.ರಾಮು, ಡಿ.ಎ.ನಾಗೇಂದ್ರ, ಗೋವಿಂದೇಗೌಡ, ಚಂದ್ರಶೇಖರಯ್ಯ, ಸಿ.ಎನ್.ರವಿ, ವಿದ್ಯಾಶಂಕರ, ಎಚ್.ಡಿ.ರಾಜೇಂದ್ರ, ಕಿರಣ್ ಜಯರಾಮ್ ಗೌಡ, ಗಗನ್, ಲೋಕಪಾಲಯ್ಯ, ಲೋಕೇಶ್ ರಾಜೇ ಅರಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts