More

    ಕಡತ ವಿಲೇವಾರಿ ಬಾಕಿ ಉಳಿಸಿದರೆ ಕಠಿಣ ಕ್ರಮ

    ಭಟ್ಕಳ: ಯಾವುದೇ ಸಂದರ್ಭದಲ್ಲೂ ದಿಢೀರ್ ಆಗಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಂತಹ ಸಂದರ್ಭದಲ್ಲಿ ಕಡತಗಳು ವಿಲೇವಾರಿ ಆಗದೇ ಬಾಕಿ ಇದ್ದಲ್ಲಿ, ಜನರ ಕೆಲಸ ಆಗಲಿಲ್ಲ ಎಂದು ದೂರು ಕೇಳಿಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಂಟವಾಣಿ ಅಥವಾ ಮಾರುಕೇರಿಗೆ ಸ್ಥಳಾಂತರಿಸಿದರೆ ಜನತೆಗೆ ಅನುಕೂಲವಾಗಲಿದೆ. ಸರ್ಕಾರಿ ಆಸ್ಪತ್ರೆಗೆ ಆಯುರ್ವೇದ ಔಷಧ ಬರುತ್ತಿಲ್ಲ, ಔಷಧ ಲಭ್ಯತೆಗೆ ವ್ಯವಸ್ಥೆ ಮಾಡಬೇಕು ಎಂದರು.

    ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಸ್‌ಗಳನ್ನು ಓಡಿಸಬೇಕು. 2017ರಲ್ಲಿ ಇದ್ದಂತೆ ಬಸ್‌ಗಳನ್ನೂ ಓಡಿಸಬೇಕು. ಗ್ರಾಮಾಂತರ ಭಾಗ ಸೇರಿದಂತೆ ಮುಂಡಳ್ಳಿ-ಅಳ್ವೆಕೋಡಿಗೆ ಓಡಿಸುವ ಬಸ್‌ನಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಡಿಪೋ ವ್ಯವಸ್ಥಾಪಕರಿಗೆ ಸಚಿವರು ಸೂಚಿಸಿದರು.

    ನಿಮ್ಮಿಂದಲೇ ಅಧಿಕಾರಿಗಳು ವರ್ಷದ ಮೊದಲೇ ವರ್ಗ ಮಾಡಿಕೊಂಡು ಹೋಗಿದ್ದಾರೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಎಂ. ಬಿಳಗಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಅವರು ನೀಡಿದ ಉತ್ತರದಿಂದ ತೃಪ್ತರಾಗದೆ ಸಭೆಯಿಂದ ಹೊರಕಳಿಸಿದರು.

    ಕಳೆದ ಮೂರು ವರ್ಷಗಳಿಂದ ಪಡಿತರ ಚೀಟಿ ವಿತರಿಸದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪಡಿತರ ಚೀಟಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕು. ಜನತೆಗೆ ತೊಂದರೆಯಾದರೆ ಸಹಿಸುವುದಿಲ್ಲ ಎಂದು ತಹಸೀಲ್ದಾರರಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ಭಟ್ಕಳ ಕ್ಷೇತ್ರದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು ಎಂದು ಹೆಸ್ಕಾಂ ಇಂಜಿನಿಯರ್‌ಗೆ ಸಚಿವರು ಸೂಚಿಸಿದರು.

    ಭಟ್ಕಳದಲ್ಲಿ ಗಾಂಜಾ, ಡ್ರಗ್ಸ್, ಆಫೀಮು ಸೇವನೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅವರ ಬಳಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಗಾಂಜಾ, ಡ್ರಗ್ಸ್ ಪ್ರಕರಣ ಜಾಸ್ತಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು. ಇದರ ಹಿಂದೆ ಯಾರ ಕೈವಾಡ ಇದೆ. ಇವೆಲ್ಲವೂ ಎಲ್ಲಿಂದ ಸರಬರಾಜು ಆಗುತ್ತದೆ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ಶ್ರೀಕಾಂತ ಅವರಿಗೆ ಮಂಕಳಾ ವೈದ್ಯ ಸೂಚಿಸಿದರು.

    ಸಭೆಯಲ್ಲಿ ಎಸಿ ಡಾ. ನಯನಾ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಹಾಗೂ ಭಟ್ಕಳ ತಾಪಂ ಆಡಳಿತಾಧಿಕಾರಿ ಸತೀಶ, ಡಿವೈಎಸ್ಪಿ ಶ್ರೀಕಾಂತ, ತಾಪಂ ಇಒ ಪ್ರಭಾಕರ ಚಿಕ್ಕನಮನೆ, ತಹಸೀಲ್ದಾರ್ ತಿಪ್ಪೇಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts