More

    ಬಿಜೆಪಿಗೆ ವಾಪಸ್ ಕರೆತರಲು ಕಾರ್ಯತಂತ್ರ

    ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಫಿ ನಾಡಿನ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿರುವ ಬಿಜೆಪಿ ಮುಂಬರುವ ಎಲ್ಲ ಚುನಾವಣೆಯಲ್ಲೂ ಗೆಲುವು ಸಾಧಿಸಲು ಯೋಜನೆ ರೂಪಿಸಿದೆ. ಮೊದಲ ಹಂತವಾಗಿ ಕಳೆದ ಚುನಾವಣೆ ವೇಳೆ ಬಿಜೆಪಿ ತೊರೆದವರನ್ನು ಮತ್ತೆ ವಾಪಸ್ ಕರೆತರಲು ಸಿದ್ಧತೆ ನಡೆಸಲಾಗಿದೆ. ಜತೆಗೆ ಬೇರೆ ಪಕ್ಷದ ಪ್ರಮುಖರನ್ನೂ ತನ್ನತ್ತ ಸೆಳೆಯಲು ಬಿಜೆಪಿ ಮುಂದಾಗಿದೆ.

    ವಿಧಾನಸಭಾ ಚುನಾವಣೆ ಸೋಲಿನಿಂದ ಬಿಜೆಪಿ ಕಾರ್ಯಕರ್ತರು ಕುಗ್ಗಿಹೋದಂತಿದೆ. ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗುಡಿಸಲು ಮುಂಬರುವ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳಲ್ಲೂ ಗೆಲುವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ ಈಗಾಗಲೇ ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾರಂಭಿಸಿದೆ. ಇದರೊಂದಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಶೀಘ್ರ ಆರಂಭವಾಗುವ ಸಾಧ್ಯತೆಯಿದೆ.
    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಬಿಜೆಪಿ ಕರೆತರುವ ಮೂಲಕ ಘರ್ ವಾಪಸಿಗೆ ಮುನ್ನುಡಿ ಬರೆಯಲಾಗಿದೆ. ಇದೇ ರೀತಿ ಕಾಫಿ ನಾಡಿನಲ್ಲಿಯೂ ಮಾಜಿ ಶಾಸಕರೊಬ್ಬರು ಬಿಜೆಪಿಗೆ ಮರಳುವ ಸಾಧ್ಯತೆಯಿದೆ. ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಅಸಮಾಧಾನಿತರು ಬಿಜೆಪಿ ಸೇರುವ ಸಾಧ್ಯತೆಯಿದೆ. ಆದರೆ ಈ ಎಲ್ಲ ಪ್ರಕ್ರಿಯೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಯೋಜನೆ ಯಶಸ್ವಿಯಾದ ಬಳಿಕ ಘೋಷಣೆ ಮಾಡುವ ಸಾಧ್ಯತೆ ಇದೆ.
    ಕಮಲ ಪಾಳಯಕ್ಕೆ ಎಂ.ಪಿ.ಕುಮಾರಸ್ವಾಮಿ: ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ತೊರೆದು ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಚರ್ಚೆ ಮೂಡಿಗೆರೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಮಗೆ ಸಿಗುತ್ತದೆ ಎಂಬ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಅವರಿಗೆ ನಿರಾಸೆ ಉಂಟಾಗಿತ್ತು. ಹೀಗಾಗಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದೀಗ ತಮ್ಮ ಮಾತೃ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರಲಾರಂಭಿಸಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಜೆಡಿಎಸ್‌ನ ಯಾವುದೇ ವೇದಿಕೆಯಲ್ಲೂ ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
    ಮೊದಲ ಗುರಿ: ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಯ ಮೊದಲ ಗುರಿ ಲೋಕಸಭಾ ಚುನಾವಣೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಂಡಲ್ಲಿ ಕಾರ್ಯಕರ್ತರ ಮನೋಬಲ ಇನ್ನಷ್ಟು ಹೆಚ್ಚಾಗುತ್ತದೆ. ಆಗ ಲೋಕಸಭಾ ಚುನಾವಣೆ ಬಳಿಕ ಬರಲಿರುವ ಜಿಪಂ ಮತ್ತು ತಾಪಂ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಚಾರ.
    ಮೂಡಿಗೆರೆಯಲ್ಲಿ ಇಬ್ಭಾಗ: ಮೂಡಿಗೆರೆ ತಾಲೂಕಿನಲ್ಲಿ ಬಿಜೆಪಿ ಇಬ್ಭಾಗವಾಗಿದೆ. ಒಂದು ಗುಂಪನ್ನು ಕಂಡರೆ ಇನ್ನೊಂದು ಗುಂಪಿಗೆ ಆಗುವುದಿಲ್ಲ ಎನ್ನುವುದು ತಾಲೂಕು ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಗಲಾಟೆಯಲ್ಲೇ ಸ್ಪಷ್ಟವಾಗಿದೆ. ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ಸದ್ಯಕ್ಕೆ ಬಗೆಹರಿಯುವ ಸಾಧ್ಯತೆಯಿಲ್ಲ. ಮೂಡಿಗೆರೆ ಬಿಜೆಪಿಯ ಎರಡು ಬಣಗಳಲ್ಲೂ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಬಗ್ಗೆ ಅಸಹನೆ, ಅಸಮಾಧಾನವಿದೆ. ಹೀಗಾಗಿ ಕುಮಾರಸ್ವಾಮಿ ಒಂದು ವೇಳೆ ಬಿಜೆಪಿಗೆ ಸೇರ್ಪಡೆಗೊಂಡರು ಮೂಡಿಗೆರೆಯಲ್ಲಿ ಬಿಜೆಪಿಯ ಮೂರನೇ ಬಣ ತಲೆಎತ್ತಿದಂತಾಗಲಿದೆ.
    ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಹಾಗೂ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ. ಆದರೆ ಯಾರನ್ನೇ ಆಗಲಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಮುನ್ನ ಆಯಾ ಭಾಗದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕಾರ್ಯಕರ್ತರ ಮನೋಸ್ಥೈರ್ಯ ಬಲಪಡಿಸುತ್ತೇವೆ ಎನ್ನುತ್ತಾರೆ ಮಾಜಿ ಶಾಸಕ ಸಿ.ಟಿ.ರವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts