More

    ಕುಹಕದ ಮಾತುಗಳನ್ನು ನಿಲ್ಲಿಸಿ: ರುದ್ರೇಗೌಡ ಎದಿರೇಟು

    ಶಿವಮೊಗ್ಗ: ಬಿಜೆಪಿಯಿಂದ ಎಲ್ಲಾ ಲಾಭ ಪಡೆದು ಈಗ ಹೊರ ಹೋಗಿರುವ ಆಯನೂರು ಮಂಜುನಾಥ್ ಬದ್ಧತೆಯ ಮಾತನಾಡುತ್ತಿಲ್ಲ. ಅವರು ಅದನ್ನು ತಿದ್ದಿಕೊಳ್ಳಬೇಕು. ಅವರು ನಾಲ್ಕು ಸದನಗಳಲ್ಲಿ ಕೆಲಸ ಮಾಡಿದ್ದಾರೆ ಎಂದರೆ ಅದು ಬಿಜೆಪಿ ಅವರಿಗೆ ನೀಡಿದ ಕೊಡುಗೆ. ಯಡಿಯೂರಪ್ಪ ಪರ ಕಳಕಳಿ ಇರುವಂತೆ ಅವರು ಕುಹಕವಾಗಿ ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಟ್ಟಿದವರು ಯಡಿಯೂರಪ್ಪ ಅಂತವರ ಬಗ್ಗೆ ಆಯನೂರು ಮಾತನಾಡುತ್ತಿರುವುದು ವಿಷಾದನೀಯ. ನಿಮ್ಮ ತಂದೆಯನ್ನೇ ರಕ್ಷಣೆ ಮಾಡದವರು ದೇಶವನ್ನು ರಕ್ಷಣೆ ಮಾಡುತ್ತಿರಾ? ಎಂದು ಬಿಎಸ್‌ವೈ ಮಕ್ಕಳನ್ನು ಪ್ರಶ್ನಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
    ಆಯನೂರು ಮಂಜುನಾಥ್ ಕುಹಕದ ಮಾತುಗಳನ್ನು ನಿಲ್ಲಿಸಬೇಕು. ರಾಜಕಾರಣ ಬರುತ್ತದೆ, ಹೋಗುತ್ತದೆ. ಯಾವುದೋ ಉದ್ದೇಶದಿಂದ, ಯಾರನ್ನೋ ಟೀಕೆ ಮಾಡುವಾಗ ಎಚ್ಚರದಿಂದ ಇರಬೇಕು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಬಗ್ಗೆ ಆಯನೂರು ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ. ಸಾಧನೆಗಳ ಪಟ್ಟಿ ನೀಡಿದ್ದೇವೆ. ಅದರಲ್ಲಿ ಏನು ಸುಳ್ಳಿದೆ? ಎಂಬುದನ್ನು ಆಯನೂರು ಹೇಳಲಿ ಎಂದು ಸವಾಲು ಹಾಕಿದರು
    ನೀವು ಏನು ಮಾಡಿದ್ದೀರಿ?: ಶಾಸಕ, ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಅಧಿಕಾರ ಸಿಕ್ಕಾಗ ಮಾಡಿದ್ದೇನು? ಜಿಲ್ಲೆಗೆ ಅವರ ಕೊಡುಗೆ ಏನು? ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸವಾಲು ಹಾಕಿದರು. ಅವರ ಜಾಣ್ಮೆ, ವಾಕ್ಚಾತುರ್ಯ, ಭಾಷೆಯ ಮೇಲಿನ ಹಿಡಿತವನ್ನು ಒಪ್ಪುತ್ತೇವೆ. ಕಾಂಗ್ರೆಸ್‌ನಲ್ಲಿರುವ ಕಾರಣಕ್ಕಾಗಿ ನಮ್ಮ ನಾಯಕರನ್ನು ಟೀಕಿಸುವುದರಲ್ಲಿ ಯಾವ ಅರ್ಥವಿದೆ. ಬಿಜೆಪಿ ಬಿಟ್ಟು ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎಷ್ಟು ಮತ ಪಡೆದರು ಎಂಬುದು ಜನರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿಯಿಂದ ನಾಲ್ಕೂ ಸದನಗಳಲ್ಲಿ ಅಧಿಕಾರ ಅನುಭವಿಸಿದ ಫಲಾನುಭವಿ ಆಯನೂರು ಮಂಜುನಾಥ್. ಈಗ ಅವರು ಯಡಿಯುರಪ್ಪ ವಿರುದ್ಧ ಟೀಕೆ ಮಾಡುತ್ತಿರುವುದು ಸಮರ್ಥನೀಯವಲ್ಲ ಎಂದು ಡಾ. ಧನಂಜಯ ಸರ್ಜಿ ಬೇಸರ ವ್ಯಕ್ತಪಡಿಸಿದರು.
    ಕಾಂಗ್ರೆಸ್‌ನಲ್ಲಿರುವ ಕಾರಣಕ್ಕೆ ಯಡಿಯೂರಪ್ಪ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾರಿಗೂ ಸಿಗದ ಅವಕಾಶಗಳು ಅವರಿಗೆ ಸಿಕ್ಕಿದ್ದವು. ಮಾತನಾಡಲು ರಾಜಕಾರಣಿಯೊಬ್ಬರು ಬೇಕೆಂಬ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಅವರಿಗೆ ಮಣೆ ಹಾಕಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ದೊರೆತ ಮತಗಳೇ ಅವರ ಸಾಮರ್ಥ್ಯಕ್ಕೆ ಕನ್ನಡಿ. ಅವರ ಸಾಮರ್ಥ್ಯ ಅಳೆಯಲು ಬೇರೆ ಮಾನದಂಡಗಳು ಬೇಕಿಲ್ಲ. ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts