More

    ಕಲ್ಲು ಗಣಿಗಾರಿಕೆಗೆ ಗ್ರಾಮಸ್ಥರಿಂದ ತಡೆ

    ರಾಣೆಬೆನ್ನೂರ: ತಾಲೂಕಿನ ಕಜ್ಜರಿ ಗ್ರಾಮದ ಬುಳ್ಳಾಪುರ ರಸ್ತೆಯ ಹುಲ್ಲುಗಾವಲು ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಅಧಿಕಾರಿಗಳು ತಡೆಯದ ಹಿನ್ನೆಲೆಯಲ್ಲಿ ಸ್ವತಃ ಗ್ರಾಮಸ್ಥರೇ ಜೆಸಿಬಿ ಮೂಲಕ ಹುಲ್ಲುಗಾವಲು ಪ್ರದೇಶ ರಸ್ತೆಗಳಿಗೆ ಟ್ರಂಚ್ (ಗುಂಡಿ) ಹೊಡೆಸುವ ಮೂಲಕ ಸಂಚಾರ ಬಂದ್ ಮಾಡಿದ್ದಾರೆ.

    ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಗ್ರಾಮಸ್ಥರು ಗಣಿಗಾರಿಕೆ ಬಂದ್ ಮಾಡಿಸುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಆದ್ದರಿಂದ ಜಾನುವಾರುಗಳಿಗಾಗಿ ಹುಲ್ಲುಗಾವಲು ಪ್ರದೇಶ ಉಳಿಸಿಕೊಳ್ಳುವ ಸಲುವಾಗಿ ಗ್ರಾಮಸ್ಥರು, ಕಲ್ಲು ಗಣಿಗಾರಿಕೆಗೆ ನಿರ್ವಿುಸಿಕೊಂಡಿದ್ದ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ ಟ್ರಂಚ್ ಹೊಡೆಸಿ ಒಳಗಡೆ ಯಾವ ವಾಹನಗಳು ಹೋಗದಂತೆ ಮಾಡಿದ್ದಾರೆ.

    ಭೇಟಿ ನೀಡದ ಅಧಿಕಾರಿಗಳು

    ಹುಲ್ಲುಗಾವಲು ಪ್ರದೇಶದಲ್ಲಿ ಒಟ್ಟು 26.40 ಎಕರೆ ಪ್ರದೇಶವನ್ನು ಕಲ್ಲು ಗಣಿಗಾರಿಕೆ ನಡೆಸಲು 15 ಜನ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿ ನೀಡಲಾಗಿದೆ. ಗುತ್ತಿಗೆದಾರರು ತಮಗೆ ನೀಡಿದ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶ ಅತಿಕ್ರಮಿಸಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಈವರೆಗೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅತಿಕ್ರಮಣ ಬಗ್ಗೆ ಪರಿಶೀಲಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವೇ ಸರಿ.

    2008ರಲ್ಲಿ ಆರಂಭ, ಈಗ ಜೋರು: ಹುಲ್ಲುಗಾವಲು ಪ್ರದೇಶದಲ್ಲಿ 2008ರಿಂದಲೇ ಕಲ್ಲು ಗಣಿಗಾರಿಕೆ ಶುರುವಾಗಿದೆ. ಆಗ ಒಬ್ಬ ಗುತ್ತಿಗೆದಾರನಿಗೆ ಮಾತ್ರ ಪರವಾನಗಿ ನೀಡಲಾಗಿತ್ತು. ನಂತರ 2013ರಲ್ಲಿ ಇಬ್ಬರಿಗೆ, 2015ರಲ್ಲಿ ನಾಲ್ವರಿಗೆ ಪರವಾನಗಿ ನೀಡಲಾಗಿದೆ. ಆದರೆ, ಪ್ರಸಕ್ತ ವರ್ಷ ಫೆಬ್ರವರಿ ಒಂದೇ ತಿಂಗಳಲ್ಲಿ 8 ಜನರಿಗೆ ಪರವಾನಗಿ ನೀಡಿದ್ದರಿಂದ ಇದೀಗ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದಕ್ಕೆ ಕಾರಣವಾಗಿದೆ.

    ಇದರಿಂದಾಗಿ ಜಾನುವಾರುಗಳು ಮೇಯಲು ಮೀಸಲಿರುವ ಪ್ರದೇಶದಲ್ಲಿ ಅಧಿಕಾರಿಗಳು ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುವ ಜತೆಗೆ ಜಾನುವಾರುಗಳ ಹೊಟ್ಟೆ ಮೇಲೂ ಹೊಡೆದಂತಾಗಿದೆ. ಆದರೂ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಗ್ರಾಮಸ್ಥರ ವಿರೋಧದ ನಡುವೆಯೂ ಹುಲ್ಲುಗಾವಲು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದ ಕಾರಣ ಹುಲ್ಲುಗಾವಲು ಪ್ರದೇಶ ರಕ್ಷಿಸಿಕೊಳ್ಳುವ ಸಲುವಾಗಿ ರಸ್ತೆಗಳಿಗೆ ಟ್ರಂಚ್ ಹೊಡೆಸಿ ವಾಹನ ಓಡಾಡದಂತೆ ಮಾಡಿದ್ದೇವೆ. ಅಧಿಕಾರಿಗಳು ಇನ್ನುಮುಂದೆಯೂ ಕ್ರಮ ಜರುಗಿಸದಿದ್ದರೆ, ಅನಿವಾರ್ಯವಾಗಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ.
    | ನಾಗಪ್ಪ ಮೋಟೆಬೆನ್ನೂರ, ಕಜ್ಜರಿ ಗ್ರಾಮಸ್ಥ

    ಕಜ್ಜರಿ ಗ್ರಾಮದ ವ್ಯಾಪ್ತಿಯ ಹುಲ್ಲುಗಾವಲು ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಎನ್​ಒಸಿ ಕೊಟ್ಟಿರುವ ಬಗ್ಗೆ ನನಗೂ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸಲಾಗುವುದು.
    | ಬಸನಗೌಡ ಕೋಟೂರು, ತಹಸೀಲ್ದಾರ್ ರಾಣೆಬೆನ್ನೂರ

    ರಾಣೆಬೆನ್ನೂರ ತಹಸೀಲ್ದಾರರು ಕಜ್ಜರಿ ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಯಾವ ಆಧಾರದ ಎನ್​ಒಸಿ ಕೊಟ್ಟಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಬಗ್ಗೆ ದಾಖಲೆ ಪಡೆದು ಜಿಲ್ಲಾಧಿಕಾರಿ ಮನಕ್ಕೆ ತಂದು ಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಿಳಿಸುತ್ತೇನೆ.
    | ಏಕನಾಥ ಭಾನುವಳ್ಳಿ, ಜಿಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts