More

    ಷೇರುಪೇಟೆಯಲ್ಲಿ ತಲ್ಲಣ; ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ

    ಮುಂಬೈ: ವಿದೇಶಿ ಷೇರುಪೇಟೆಗಳ ಚಂಚಲತೆಯ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆಯೂ ಮುಗ್ಗರಿಸಿದ್ದು, ಹೂಡಿಕೆದಾರರ 6.64 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ. ಶುಕ್ರವಾರ ಮತ್ತು ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಒಟ್ಟು 9.75 ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ.

    ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕುರಿತ ನೀತಿ ಈ ವಾರ ಪ್ರಕಟವಾಗಲಿದ್ದು, ಇದರ ಪರಿಣಾಮದಿಂದ ಭಾರತ ಷೇರುಪೇಟೆಯಲ್ಲಿ ಕರಡಿ ಕುಣಿತ ಹೆಚ್ಚಾಯಿತು. ಸೆನ್ಸೆಕ್ಸ್​ನ ಪ್ರಮುಖ 30 ವಲಯದ ಷೇರಿನಲ್ಲಿ 1,456.74 ಪಾಯಿಂಟ್ (ಶೇ.2.68) ಇಳಿಕೆಯಾಗಿ 52,846.70ಕ್ಕೆ ಕುಸಿಯಿತು.

    ನಿಫ್ಟಿಯಲ್ಲಿ 427.40 ಅಂಶ (ಶೇ.26) ಕ್ಷೀಣಿಸಿ 15,800ಕ್ಕೆ ವಹಿವಾಟು ಮುಗಿಯಿತು. ಬಜಾಜ್ ಫಿನ್​ಸರ್ವ್​ಗೆ ಅತ್ಯಧಿಕ ನಷ್ಟವಾಗಿದ್ದು (ಶೇ.7), ಬಜಾಜ್ ಫೈನಾನ್ಸ್, ಇಂಡಸ್​ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಟಿಸಿಎಸ್, ಎನ್​ಟಿಪಿಸಿ, ಇನ್ಪೋಸಿಸ್, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಇನ್ಪೋಸಿಸ್, ಎಲ್ ಆಂಡ್ ಟಿಗಳ ಷೇರು ಮೌಲ್ಯ ಶೇ.3ರಿಂದ 5ರವರೆಗೆ ಇಳಿಕೆ ಆಗಿದೆ. ನೆಸ್ಲೆ ಕಂಪನಿ ಮಾತ್ರ ಲಾಭ ಕೊಂಚ ದಾಖಲಿಸಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ದರ್ಜೆಯ ತೈಲ ದರ ಅಂದಾಜು ಶೇ.1ರಷ್ಟು ಇಳಿಕೆ ಆಗಿದ್ದು, ಪ್ರತಿ ಬ್ಯಾರೆಲ್ ಬೆಲೆ 120.75 ಡಾಲರ್ ಇದೆ.

    ಹಣದುಬ್ಬರದಲ್ಲಿ ಸುಧಾರಣೆ:

    ಏರುಮುಖವಾಗಿದ್ದ ಹಣದುಬ್ಬರವು (ಗ್ರಾಹಕ ದರ ಸೂಚ್ಯಂಕ) ಮೇ ತಿಂಗಳಲ್ಲಿ ಸುಧಾರಿಸಿದ್ದು, ಶೇ.7.04ಕ್ಕೆ ಇಳಿಕೆ ಆಗಿದೆ. ಏಪ್ರಿಲ್​ನಲ್ಲಿ ಇದು 7.79ಕ್ಕೆ ಮುಟ್ಟಿತ್ತು. ಆದರೂ ಕಳೆದ ವರ್ಷದ ಮೇ ತಿಂಗಳಿಗೆ (ಶೇ.6.3) ಹೋಲಿಸಿದರೆ ಈ ಸಲದ್ದು ಸುಮಾರು ಶೇ.1ರಷ್ಟು ಅಧಿಕವಾಗಿಯೇ ಇದೆ. ಆಹಾರ ವಿಭಾಗದಲ್ಲಿ ಶೇ.7.97 (ಏಪ್ರಿಲ್ ಶೇ. 8.31), ಧಾನ್ಯ ಮತ್ತು ಉತ್ಪನ್ನದಲ್ಲಿ ಶೇ.5.33 (ಏಪ್ರಿಲ್ ಶೇ.5.96), ಎಣ್ಣೆ ಮತ್ತು ವನಸ್ಪತಿಯಲ್ಲಿ ಶೇ.13.26 (ಏಪ್ರಿಲ್ ಶೇ. 17.28) ಹಣ್ಣಿನಲ್ಲಿ ಶೇ.2.33 (ಏಪ್ರಿಲ್ ಶೇ.4.99) ಹಣದುಬ್ಬರ ಪ್ರಮಾಣ ಕೊಂಚ ಸುಧಾ ರಿಸಿದೆ. ಆದರೆ, ತರಕಾರಿಯ ಹಣದುಬ್ಬರ ಪ್ರಮಾಣ ಶೇ.18.26ಕ್ಕೆ ಏರಿದೆ. ಏಪ್ರಿಲ್​ನಲ್ಲಿ ಇದು ಶೇ. 15.41 ಇತ್ತು.

    25 ಸಾವಿರ ಡಾಲರ್​ಗಿಂತ ಕೆಳಗಿಳಿದ ಬಿಟ್​ಕಾಯಿನ್: ಅಮೆರಿಕದ ಹಣದುಬ್ಬರ ಏರಿಕೆ ಹೊಡೆತದಿಂದ ಬಿಟ್​ಕಾಯಿನ್ ಮೌಲ್ಯ 25 ಸಾವಿರ ಡಾಲರ್​ಗಿಂತ ಕೆಳಕ್ಕೆ ಇಳಿದಿದ್ದು, 18 ತಿಂಗಳಲ್ಲೇ ಅಧಿಕ ಪತನ ಇದಾಗಿದೆ. ಜಾಗತಿಕ ಬಿಟ್​ಕಾಯಿನ್ ಮಾರುಕಟ್ಟೆಯಲ್ಲಿನ ಅಸ್ಥಿರತೆ ಪರಿಣಾಮ ಕ್ರಿಪ್ಟೊ ಕರೆನ್ಸಿ ಮೇಲೂ ಆಗಿದ್ದು, ಮೌಲ್ಯ ಕ್ಷೀಣಿಸುತ್ತಿದೆ.

    ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ: ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಕುಸಿದಿದ್ದು, ಪ್ರತಿ ಡಾಲರ್ ವಿನಿಮಯ ದರ 78.04 ರೂ.ಗೆ ಮುಟ್ಟಿದೆ. ಇದು ರೂಪಾಯಿ ಮೌಲ್ಯದ ಸಾರ್ವಕಾಲಿಕ ಪತನ. ಮಧ್ಯಂತರದಲ್ಲಿ 78.29 ರೂ.ಗೆ ಮುಟ್ಟಿತ್ತು. ನಂತರ ತುಸು ಚೇತರಿಕೆ ಕಂಡಿತು. ಏಷ್ಯಾದ ಕರೆನ್ಸಿಗಳು ದುರ್ಬಲವಾಗಿದ್ದು ಮತ್ತು ವಿದೇಶಿ ಬಂಡವಾಳದ ಹರಿವಿನಲ್ಲಿನ ಅಡೆತಡೆ ಕೂಡ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಯಿತು. ಅಮೆರಿಕದಲ್ಲಿ ಹಣದುಬ್ಬರ ಭಾರಿ ಏರಿಕೆಯಾಗಿದ್ದರೂ ಜಾಗತಿಕವಾಗಿ ಕರೆನ್ಸಿ ಸಬಲತೆಯಲ್ಲಿ ಡಾಲರ್ ಪಾರಮ್ಯ ಉಳಿಸಿಕೊಂಡಿದೆ.

    ಚಿನ್ನ-ಬೆಳ್ಳಿ ದರ ಇಳಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 321 ರೂಪಾಯಿ ಇಳಿಕೆ ಆಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 51,270 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆ 874 ರೂ. ಕುಸಿತವಾಗಿದ್ದು, ಕೆ.ಜಿ. ಧಾರಣೆ 60,745 ರೂಪಾಯಿಗೆ ಇಳಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಪ್ರತಿ ಔನ್ಸ್ ಬಂಗಾರಕ್ಕೆ 1,858 ಡಾಲರ್ ಇದ್ದು, ಬೆಳ್ಳಿ ಪ್ರತಿ ಔನ್ಸ್ ಬೆಲೆ 21.54 ಡಾಲರ್ ಇದೆ.

    ವಿದೇಶದಲ್ಲೂ ಚಂಚಲತೆ: 40 ವರ್ಷಗಳಲ್ಲೇ ಅಮೆರಿಕ ಹಣದುಬ್ಬರ ಗರಿಷ್ಠ ಮಟ್ಟಕ್ಕೆ (ಶೇ.8.6) ಮುಟ್ಟಿದ್ದು, ಬಡ್ಡಿದರ ಏರಿಕೆ ಅನಿವಾರ್ಯ ಆಗಿದೆ. ಏಷ್ಯಾದ ಮಾರುಕಟ್ಟೆಯಲ್ಲಿ ಸಿಯೋಲ್, ಟೋಕಿಯೊ, ಹಾಂಕಾಂಗ್, ಶಾಂಘೈನಲ್ಲೂ ನಷ್ಟ ಉಂಟಾಗಿದೆ. ಯುರೋಪ್ ಷೇರುಪೇಟೆಯಲ್ಲಿ ಷೇರು ಮಾರಾಟ ಜೋರಾಗಿತ್ತು.

    ಎಲ್​ಐಸಿ ಷೇರು ಅಧೋಮುಖ: ಭಾರಿ ನಿರೀಕ್ಷೆಗಳನ್ನು ಹುಸಿ ಮಾಡಿದ ಭಾರತೀಯ ಜೀವವಿಮಾ ನಿಗಮದ (ಎಲ್​ಐಸಿ) ಷೇರು ಮೌಲ್ಯ, ಸೋಮವಾರ ಅಂದಾಜು ಶೇ.6ರಷ್ಟು ಕುಸಿತ ಕಂಡಿದೆ. 668.20 ರೂ.ಗೆ ಇಳಿಕೆ ಆಗುವ ಮೂಲಕ ಐಪಿಒ ಬಿಡುಗಡೆಯಾದ ದರಕ್ಕೆ (949 ರೂ.) ಹೋಲಿಸಿದರೆ 1 ತಿಂಗಳಲ್ಲಿ ಇದರ ಮೌಲ್ಯ ಶೇ.29.58 ಪತನವಾಗಿದೆ. ಕಳೆದ ಹತ್ತು ದಿನದಲ್ಲೇ ಶೇ.20.17 ಮೌಲ್ಯ ಕಳೆದುಕೊಂಡಿದೆ. ಇನ್ನು, ಎಲ್​ಐಸಿ ಮಾರುಕಟ್ಟೆ ಬಂಡವಾಳ 4,22,636 ಕೋಟಿ ರೂ.ಗೆ ಇಳಿಕೆ ಆಗಿದೆ. ಷೇರು ದರ ಇಳಿಕೆ ತಾತ್ಕಾಲಿಕವಾಗಿದ್ದರೂ ಈ ಬಗ್ಗೆ ಕಳವಳ ಇದೆ. ನಿರೀಕ್ಷೆಯಿಂದ ಷೇರು ಖರೀದಿಸಿದವರಿಗೆ ಇದು ಅರ್ಥವಾಗಲು ಸ್ವಲ್ಪ ಕಾಲ ಬೇಕು. ಷೇರುದಾರರ ಕಳವಳವನ್ನು ದೂರ ಮಾಡಲು ಎಲ್​ಐಸಿ ಆಡಳಿತ ಪ್ರಯತ್ನ ನಡೆಸಿದೆ.

    ‘777 ಚಾರ್ಲಿ’ ಚಿತ್ರ ವೀಕ್ಷಿಸಿದ ಶ್ವಾನ ಪ್ರೇಮಿ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts