More

    ಇನ್ನೂ ‘ಬುಡಾ’ ಸೇರದ ಹಳ್ಳಿಗಳು

    ಬೆಳಗಾವಿ: ಸ್ಮಾರ್ಟ್ ಸಿಟಿಗೆ ಹೊಂದಿಕೊಂಡಿರುವ ಹಳ್ಳಿಗಳು ಮತ್ತು ಬಡಾವಣೆಗಳನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ಕ್ಕೆ ಸೇರ್ಪಡೆಗೆ ಸರ್ಕಾರದಿಂದ ಒಪ್ಪಿಗೆ ಸಿಗುತ್ತಿಲ್ಲ.

    ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರ ವರ್ಷದಿಂದ ವರ್ಷಕ್ಕೆ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ವಾಹನ ಸಂಚಾರ, ವ್ಯಾಪಾರ-ವಹಿವಾಟಿನಲ್ಲಿ ಬೆಳೆಯುತ್ತಿದೆ. ಅಕ್ರಮ ಬಡಾವಣೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ನಿತ್ಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಹೊಂದಿಕೊಂಡಿರುವ 22 ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಪಡೆದುಕೊಳ್ಳಲು 2020 ಜನವರಿಯಲ್ಲಿ ಬುಡಾ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೋವಿಡ್-19, ಆರ್ಥಿಕ ಸಮಸ್ಯೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಸರ್ಕಾರವು ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗಿದೆ.

    ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನಗರ ಪ್ರದೇಶಗಳ ಯೋಜನಾ ವ್ಯಾಪ್ತಿ ಹಂತ ಹಂತವಾಗಿ ವಿಸ್ತರಣೆಯಾಗುತ್ತಿದೆ. 2030ರ ವೇಳೆಗೆ ಬೆಳಗಾವಿ ನಗರದ ಭೌಗೋಳಿಕ ವಿಸ್ತೀರ್ಣ ಸುಮಾರು 120 ಕಿ.ಮೀ. ಆಗಲಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣ, ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ಧಾರಿಯಾಗಿ ಮೇಲ್ದರ್ಜೆಗೇರಲಿದೆ. ಜತೆಗೆ ಐಟಿ, ಬಿಟಿ ಕಂಪನಿಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಬುಡಾ ವ್ಯಾಪ್ತಿಯ ಪ್ರದೇಶ ವಿಸ್ತರಣೆಗೆ ಹೊಸದಾಗಿ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

    2011ರ ಜನಸಂಖ್ಯೆಯ ವರದಿ ಪ್ರಕಾರ ಮಹಾನಗರ 4,88,157 ಜನಸಂಖ್ಯೆ ಹೊಂದಿದೆ. ಆದರೆ, ಸರ್ಕಾರದ ವಿವಿಧ ಇಲಾಖೆಗಳ ಯೋಜನಾ ವರದಿಗಳ ಪ್ರಕಾರ ನಗರ ಜನಸಂಖ್ಯೆ 10 ಲಕ್ಷ ಗಡಿ ದಾಟಿದೆ. ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ವಸತಿ ಬಡಾವಣೆಗಳು, ವಾಣಿಜ್ಯ ಪ್ರದೇಶಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಜನರ ಬೇಡಿಕೆಗೆ ಅನುಗುಣವಾಗಿ ಕನಿಷ್ಠ 2 ರಿಂದ 3 ಹೊಸ ಬಡಾವಣೆ ನಿರ್ಮಾಣ ಅವಶ್ಯಕವಾಗಿದೆ. ಜತೆಗೆ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡರೆ ಭೌಗೋಳಿಕ ಪ್ರದೇಶ ವಿಸ್ತರಣೆ ಮಾಡಬೇಕಾಗಿದೆ. ಈಗಾಗಲೇ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿರುವ
    ವಿಮಾನ ನಿಲ್ದಾಣವನ್ನು ನಗರ ಯೋಜನಾ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಬಡಾವಣೆಗಳ ಹಸ್ತಾಂತರ ಇಲ್ಲ

    ಬುಡಾ ವತಿಯಿಂದ 1997ರಲ್ಲಿ 333.11ಎಕರೆ ಪ್ರದೇಶದಲ್ಲಿ ರಾಮತೀರ್ಥ ನಗರ ಮತ್ತು 2005-06ರಲ್ಲಿ 60.15 ಎಕರೆ ಪ್ರದೇಶದಲ್ಲಿ ಕುಮಾರಸ್ವಾಮಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಆದರೆ, ದಶಕಗಳು ಕಳೆದರೂ ಸಮಗ್ರವಾಗಿ ಅಭಿವೃದ್ಧಿಪಡಿಸಿ ಪಾಲಿಕೆಗೆ ಹಸ್ತಾಂತರಿಸುವ ಕೆಲಸ ನಡೆದಿಲ್ಲ. ಪರಿಣಾಮ ಎರಡೂ ಬಡಾವಣೆಗಳು ಸರ್ಕಾರಿ ಯೋಜನೆಗಳಿಂದ ವಂಚಿತಗೊಂಡಿದ್ದು, ಸೌಲಭ್ಯಗಳಿಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ಮತ್ತೆ ಬುಡಾ 22 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮೊದಲ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ ಬಳಿಕ ಹೊಸ ಬಡಾವಣೆ ನಿರ್ಮಾಣದ ಜತೆಗೆ ಹಳ್ಳಿಗಳನ್ನು ತನ್ನ ವ್ಯಾಪ್ತಿಗೆ ಪಡೆದುಕೊಳ್ಳಲಿ ಎಂದು ರಾಮತೀರ್ಥ ನಗರದ ನಿವಾಸಿ ರಮೇಶ ಎಸ್.ನಾಯಕರ್, ಕುಮಾರಸ್ವಾಮಿ ಬಡಾವಣೆ ನಿವಾಸಿ ಶ್ರೀನಿವಾಸ ಎಸ್.ಮಂಗಳೇಕರ್ ವಿನಂತಿಸಿದ್ದಾರೆ.

    ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಸುಮಾರು 22 ಹಳ್ಳಿಗಳನ್ನು ಬುಡಾ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಒಪ್ಪಿಗೆ ಸಿಕ್ಕಿಲ್ಲ. ಈಗಾಗಲೇ ಈ ಭಾಗದಲ್ಲಿ ಅಕ್ರಮ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಹಾಕಲು ಗ್ರಾಪಂ, ಜಿಪಂ ಹಾಗೂ ಆಯಾ ತಾಲೂಕು ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ.
    | ಪ್ರೀತಂ ನಸ್ಲಾಪುರ ಬುಡಾ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts