More

    ಸಚಿನ್ ಔಟಾಗದಿದ್ದರೂ ಔಟ್ ತೀರ್ಪು ನೀಡಿದ್ದ ಅಂಪೈರ್ ಯಾರು ಗೊತ್ತೇ?

    ನವದೆಹಲಿ: ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ವೃತ್ತಿಜೀವನದಲ್ಲಿ ಹಲವಾರು ಶ್ರೇಷ್ಠ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಉಳಿದಂತೆ ಕೆಟ್ಟ ಹೊಡೆತಗಳಿಗೆ ಔಟಾಗಿದ್ದಲ್ಲದೆ, ಕೆಲವೊಮ್ಮೆ ಬೌಲರ್‌ಗಳ ಅತ್ಯುತ್ತಮ ಎಸೆತಗಳಿಗೆ ಅವರು ವಿಕೆಟ್ ಒಪ್ಪಿಸಿದ್ದಾರೆ. ಮತ್ತೆ ಕೆಲವೊಮ್ಮೆ ಅಂಪೈರ್‌ಗಳ ಕೆಟ್ಟ ತೀರ್ಪುಗಳಿಂದಾಗಿ ಸಚಿನ್ ತೆಂಡುಲ್ಕರ್ ನಿರಾಸೆ ಅನುಭವಿಸಿದ್ದಾರೆ. ಅಂಥ ಎರಡು ಪ್ರಮುಖ ಪಂದ್ಯಗಳಲ್ಲಿ ಅವರು ಔಟಾಗದೆ ಇದ್ದರೂ ಔಟ್​ ಎಂದು ಕೆಟ್ಟ ತೀರ್ಪು ನೀಡಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಅವರೀಗ ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: PHOTOS | ಕ್ರೀಡಾತಾರೆಯರಿಂದ ಯೋಗ ದಿನಾಚರಣೆ

    2000ದ ದಶಕದಲ್ಲಿ ಸ್ಟೀವ್ ಬಕ್ನರ್ ಐಸಿಸಿ ಎಲೈಟ್ ಪ್ಯಾನೆಲ್‌ನ ಪ್ರಮುಖ ಅಂಪೈರ್ ಆಗಿದ್ದರು. ಆದರೆ ಕೆಲ ಕೆಟ್ಟ ತೀರ್ಪುಗಳಿಂದಲೂ ಸುದ್ದಿಯಲ್ಲಿದ್ದರು. ವಿಪರ‌್ಯಾಸವೆಂದರೆ ಅವರ ಹೆಚ್ಚಿನ ಕೆಟ್ಟ ತೀರ್ಪುಗಳು ಭಾರತದ ವಿರುದ್ಧ, ಅದರಲ್ಲೂ ಸಚಿನ್ ವಿರುದ್ಧವೇ ಬಂದಿತ್ತು. 2009ರಲ್ಲೇ ಅಂತಾರಾಷ್ಟ್ರೀಯ ಅಂಪೈರಿಂಗ್‌ನಿಂದ ನಿವೃತ್ತಿ ಪಡೆದಿರುವ 74 ವರ್ಷದ ಬಕ್ನರ್, 2003ರ ಗಾಬಾ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು 2005ರ ಈಡನ್ ಗಾರ್ಡನ್ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೆಟ್ಟ ತೀರ್ಪು ನೀಡಿದ್ದೆ ಎಂದು ವಿಷಾದಿಸಿದ್ದಾರೆ.

    ಇದನ್ನೂ ಓದಿ: PHOTOS | ಅಪ್ಪನಿಗೆ ಥ್ಯಾಂಕ್ಸ್ ಹೇಳಿದ ಕ್ರೀಡಾತಾರೆಯರು

    ಗಾಬಾ ಟೆಸ್ಟ್‌ನಲ್ಲಿ ಆಸೀಸ್ ವೇಗಿ ಜೇಸನ್ ಗಿಲೆಸ್ಪಿ ಎಸೆತದಲ್ಲಿ ಚೆಂಡು ವಿಕೆಟ್‌ನಿಂದ ಮೇಲೆ ಹೋಗುವಂತಿದ್ದರೂ ಸಚಿನ್ ವಿರುದ್ಧ ಬಕ್ನರ್ ಎಲ್‌ಬಿಡಬ್ಲ್ಯು ತೀರ್ಪು ನೀಡಿದ್ದರು. ಕೋಲ್ಕತ ಟೆಸ್ಟ್‌ನಲ್ಲಿ ಪಾಕ್ ವೇಗಿ ಅಬ್ದುಲ್ ರಜಾಕ್ ಎಸೆತದಲ್ಲಿ ಸಚಿನ್ ಬ್ಯಾಟ್‌ಗೆ ಚೆಂಡು ಸ್ಪರ್ಶಿಸದೇ ಇದ್ದರೂ ಕೀಪರ್ ಚೆಂಡನ್ನು ಹಿಡಿದಾಗ ಔಟ್ ತೀರ್ಪು ನೀಡಿದ್ದರು. ‘ಸಚಿನ್ ವಿರುದ್ಧ 2 ಪಂದ್ಯಗಳಲ್ಲಿ ಔಟ್ ತೀರ್ಪು ನೀಡಿದಾಗ ನಾನು ತಪ್ಪು ಮಾಡಿದ್ದೆ. ಯಾವುದೇ ಅಂಪೈರ್ ಕೂಡ ಕೆಟ್ಟ ತೀರ್ಪು ನೀಡುವುದನ್ನು ಬಯಸುವುದಿಲ್ಲ. ಆದರೆ ಮಾನವ ತಪ್ಪು ಮಾಡುವುದು ಸಹಜ’ ಎಂದು ಬಕ್ನರ್ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಮಕ್ಕಳೊಂದಿಗೆ ಯೋಗ-ಅಪ್ಪನ ದಿನ ಆಚರಿಸಿದ ಸಚಿನ್

    ‘ಕೋಲ್ಕತ ಟೆಸ್ಟ್ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ಮಾಡುವಾಗ ಒಂದು ಲಕ್ಷದಷ್ಟು ಪ್ರೇಕ್ಷಕರು ಸೇರಿದ್ದರು. ಆ ಹರ್ಷೋದ್ಗಾರಗಳ ನಡುವೆ ನನ್ನಿಂದ ತಪ್ಪಾಯಿತು. ನನಗೆ ಆ ತೀರ್ಪಿನಿಂದ ಬೇಸರವಾಗಿತ್ತು. ಆದರೆ ತಪ್ಪು ಮಾಡುವುದು ಮತ್ತು ಅದನ್ನು ಒಪ್ಪಿಕೊಳ್ಳುವುದು ಜೀವನದ ಭಾಗ’ ಎಂದು ಬಕ್ನರ್ ಹೇಳಿದ್ದಾರೆ. ಅವರು 128 ಟೆಸ್ಟ್ ಮತ್ತು 181 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    VIDEO| ಹಾರ್ದಿಕ್ ಪಾಂಡ್ಯ ವರ್ಕೌಟ್‌ಗೆ ಬಾಲಿವುಡ್ ನಟಿಯರು ಬೌಲ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts