More

    ನ್ಯಾಯಮಾರ್ಗದಲ್ಲಿ ಹೆಜ್ಜೆ; ಮನೋಲ್ಲಾಸ ಅಂಕಣ

    ನ್ಯಾಯಮಾರ್ಗದಲ್ಲಿ ಹೆಜ್ಜೆ; ಮನೋಲ್ಲಾಸ ಅಂಕಣ| ಕಡೆಂಗೋಡ್ಲು ಗೋಪಾಲಕೃಷ್ಣ ಭಟ್

    ಒಬ್ಬ ರಾಜನಿದ್ದ. ಅವನು ಶೂರ, ಸಮರ್ಥ. ಪ್ರಜೆಗಳ ಹಿತ, ದೇಶದ ರಕ್ಷಣೆಗಾಗಿ ಅಹರ್ನಿಶಿ ದುಡಿಯುತ್ತಿದ್ದ. ಆದರೆ ಅವನು ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಎಲ್ಲ ಸಮಸ್ಯೆಗಳನ್ನೂ ಬಹಳ ಬುದ್ಧಿವಂತಿಕೆಯಿಂದ ನಿವಾರಿಸಿಕೊಳ್ಳುತ್ತಿದ್ದ. ಜ್ಞಾನಿಗಳು/ದೇಶಭಕ್ತರ ಮಾರ್ಗದರ್ಶನವನ್ನು ಪಡೆದು, ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದ. ಹೀಗಿದ್ದರೂ, ಪದೇಪದೆ ಎದುರಾಗುವ ಸಮಸ್ಯೆಗಳು, ಸ್ವಕೀಯರಂದಲೇ ಬರುವ ವಿರೋಧಗಳು, ವಿರೋಧಿಗಳ ಅಡ್ಡಗಾಲು, ವಿಘ್ನಸಂತೋಷಿಗಳ ಕುತಂತ್ರಗಳು, ಶತ್ರುದೇಶಗಳನ್ನು /ದೇಶದ್ರೋಹಿಗಳನ್ನು ಬೆಂಬಲಿಸುವವರ ಗೊಡ್ಡುಬೆದರಿಕೆಗಳು- ಮುಂತಾದವುಗಳಿಂದ ರಾಜನ ಮನಸ್ಸು ಪ್ರಕ್ಷುಬ್ಧಗೊಂಡಿತು. ನೆಮ್ಮದಿ ಹಾಳಾಯಿತು. ತಾಳ್ಮೆ ಕಳೆದುಕೊಂಡ ರಾಜ ನೆಮ್ಮದಿಯನ್ನರಸುತ್ತ ಓರ್ವ ಸಂತನ ಬಳಿ ತೆರಳಿ ದಾರಿತೋರಿಸುವಂತೆ ಬಿನ್ನವಿಸಿಕೊಂಡ. ಸಂತನಾದರೋ ರಾಜನ ಚಿಂತೆಯನ್ನು ನಿವಾರಿಸುವುದಕ್ಕಾಗಿ ರಾಜಕೀಯ ಸನ್ಯಾಸ ಸ್ವೀಕರಿಸುವಂತೆ ಸಲಹೆ ನೀಡಿದ. ಆದರೆ ರಾಜನಿಗೆ ಈ ಸಲಹೆ ಒಪ್ಪಿಗೆಯಾಗಲಿಲ್ಲ. ತಾನು ರಾಜ್ಯಾಡಳಿತವನ್ನು ಬೇರೆಯವರಿಗೆ ಹಸ್ತಾಂತರಿಸಿದರೆ, ದೇಶದ ಭವಿಷ್ಯ ಏನಾಗಬಹುದು, ದೇಶದ ಪ್ರಗತಿ, ಹಿತ, ಜನಸಾಮಾನ್ಯರ ರಕ್ಷಣೆ ಮುಂತಾದವುಗಳನ್ನು ಯಾರು ಸಮರ್ಥವಾಗಿ ನೋಡಿಕೊಂಡಾರು- ಮುಂತಾದ ಯೋಚನೆಗಳು ಬರಲಾರಂಭಿಸಿದವು.

    ಇದನ್ನು ಗಮನಿಸಿದ ಸಂತ, ‘ಮಹಾರಾಜ, ರಾಜ್ಯದ ಆಡಳಿತವನ್ನು ನನಗೆ ವಹಿಸಿಕೊಡು. ನಾನು ನೋಡಿಕೊಳ್ಳುವೆನು. ನೀನು ನನ್ನ ಸೇವಕನಾಗಿರು. ಕೆಲಸಕ್ಕೆ ತಕ್ಕ ವೇತನವನ್ನು ನಿನಗೆ ನೀಡುವೆ. ಉತ್ತಮ ಕೆಲಸಕ್ಕೆ ಉತ್ತಮ ಪ್ರತಿಫಲ’ ಎಂದು ಹೇಳಿದ. ಈ ಸಲಹೆ ರಾಜನಿಗೆ ಹಿಡಿಸಿತು. ರಾಜಧಾನಿಗೆ ಹಿಂತಿರುಗಿ, ಸಮಾಧಾನದಿಂದ ತನ್ನ ಕರ್ತವ್ಯಗಳನ್ನು ಮಾಡಲು ತೊಡಗಿದ. ಸಂತನ ಅಧಿಕಾರ ಮತ್ತು ಮಾರ್ಗದರ್ಶನ, ತನ್ನದು ಎಂಬುದು ಏನೂ ಇಲ್ಲ. ಮನಸ್ಸು ನಿರಾಳವಾಯಿತು. ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ’. ಇದು ರಾಜನ ಧ್ಯೇಯವಾಕ್ಯವಾಯಿತು. ದೇಶ ಪ್ರಗತಿಪಥದಲ್ಲಿ ಮುನ್ನಡೆಯತೊಡಗಿತು.

    ಸುಭಾಷಿತವೊಂದು ನೆನಪಿಗೆ ಬರುತ್ತದೆ – ‘ನಿಂದಂತು ನೀತಿ ನಿಪುಣಾ; ಯದಿ ವಾ ಸ್ತುವಂತು. ಲಕ್ಷ್ಮೀ; ಸಮಾವಿಶತು ಗಚ್ಛತು ವಾ ಯಥೇಷ್ಟಮ್ ಅದ್ಯೆವ ಮರಣಮಸ್ತು ಯುಗಾಂತರೇವಾ. ನ್ಯಾಯಾತ್ ಪಥಾತ್ ವಿಚಲಂತಿ ಪದಂ ನ ಧೀರಾ’- ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಹಾಗೂ ಅದನ್ನು ಮಾಡಲೇಬೇಕೆಂಬ ದೃಢಸಂಕಲ್ಪವನ್ನು ಹೊಂದಿರುವ ಮಹಾತ್ಮರು ಎಂಥ ಸಂಕಷ್ಟಗಳನ್ನೂ ಲೆಕ್ಕಿಸದೆ, ಆ ಗುರಿಯನ್ನು ಈಡೇರಿಸುವತ್ತ ಮುನ್ನುಗ್ಗುತ್ತಾರೆ. ಅನವರತ ಪ್ರಯತ್ನಶೀಲರಾಗಿರುತ್ತಾರೆ. ನ್ಯಾಯ, ನೀತಿ, ಧರ್ಮ-ಎಂಬುದಾಗಿ ಬರೀ ಬುರುಡೆ ಬಿಡುವುದರಲ್ಲೇ ಕಾಲಕಳೆಯುವಂತಹ ತಮ್ಮನ್ನು ತಾವೇ ಹೊಗಳಿ ಕೊಳ್ಳುವವರು ಸತತವಾಗಿ ನಿಂದಿಸುತ್ತಿರಲಿ ಅಥವಾ ಭಟ್ಟಂಗಿಗಳು ಹೊಗಳುತ್ತಿರಲಿ, ಹೇರಳವಾಗಿ ಸಂಪತ್ತು ಬರಲಿ ಅಥವಾ ತನ್ನ ಸರ್ವಸ್ವವೂ ನಾಶವಾಗಲಿ, ಇಂದೇ ತನಗೆ ಮರಣವುಂಟಾಗುತ್ತದೆ ಎಂದು ಗೊತ್ತಾಗಲಿ ಅಥವಾ ತಾನು ಚಿರಂಜೀವಿ ಎಂದು ತಿಳಿದುಬರಲಿ, ಧೀರರು ನ್ಯಾಯಮಾರ್ಗದಿಂದ ತಾವಿಟ್ಟ ಹೆಜ್ಜೆಯನ್ನು ಹಿಂತೆಗೆಯುವುದಿಲ್ಲ. ಅಂಥ ಮನಸ್ಥಿತಿ ನಮ್ಮದಾದರೆ ಜೀವನ ಸಾರ್ಥಕ.

    (ಲೇಖಕರು ನಿವೃತ್ತ ಸಂಸ್ಕೃತ ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts