More

    ಮೈಸೂರು ವಿವಿ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

    ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ವಿವಿಯ ಪ್ರಭಾರ ಕುಲಪತಿ ಪ್ರೊ.ಎಚ್. ರಾಜಶೇಖರ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ರಜಾಕಾಲದ ಪೀಠ, ಈ ಮಧ್ಯಂತರ ಆದೇಶ ಮಾಡಿದೆ.

    ಜತೆಗೆ, ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿರುವ ಪೀಠ, ಮೈಸೂರು ವಿವಿ ರಿಜಿಸ್ಟ್ರಾರ್ ಹಾಗೂ ಕುಲಪತಿ ಆಯ್ಕೆಗೆ ರಚಿಸಲಾಗಿರುವ ಶೋಧನಾ ಸಮಿತಿಯ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.

    ಅರ್ಜಿದಾರರ ವಿರುದ್ಧ ಇಲಾಖಾ ತನಿಖೆ ಬಾಕಿ ಇರುವ ಕುರಿತು ನಮೂದಿಸಲಾಗಿರುವ ಷರಾ ಹಾಗೂ ಮೈಸೂರು ವಿವಿ ಕುಲಪತಿ ನೇಮಕಾತಿ ಸಂಬಂಧ ಕಳೆದ ನ.8ರಂದು ಹೊರಡಿಸಲಾಗಿರುವ ಅಧಿಸೂಚನೆಯ ಮುಂದಿನ ಪ್ರಕ್ರಿಯೆಗೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

    ಅರ್ಜಿದಾರರ ವಾದವೇನು?: ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ವಾದ ಮಂಡಿಸಿ, ಪ್ರೊ.ಎಚ್.ರಾಜಶೇಖರ್ ಪ್ರಸ್ತುತ ವಿವಿಯ ಪ್ರಭಾರ ಕುಲಪತಿಯಾಗಿದ್ದಾರೆ. ವಿಸಿ ಹುದ್ದೆಗೆ ಎಲ್ಲ ಅರ್ಹತೆ ಹೊಂದಿರುವ ಅವರು, ಕುಲಪತಿ ಆಯ್ಕೆಗೆ ರಚನೆಯಾದ ಶೋಧನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲದಿದ್ದರೂ, ಅರ್ಜಿದಾರರ ವಿರುದ್ಧ ಇಲಾಖಾ ತನಿಖೆ ಬಾಕಿ ಇದೆ ಎಂದು ತಪ್ಪಾಗಿ ಷರಾ ಬರೆಯಲಾಗಿದೆ. ಇದರಿಂದ, ಯುಜಿಸಿ ಮಾರ್ಗಸೂಚಿಗಳ ಅನ್ವಯ ಅರ್ಜಿದಾರರು ಅರ್ಹತೆ ಕಳೆದುಕೊಂಡಂತಾಗಿದೆ ಎಂದು ದೂರಿದರು.

    ಪ್ರಕರಣವೇನು?: ಮೈಸೂರು ವಿವಿ ಕುಲಪತಿ ಆಯ್ಕೆಗೆ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಿ 2022ರ ನ.2ರಂದು ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಒಟ್ಟು 71 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ಪ್ರಭಾರ ವಿಸಿ ರಾಜಶೇಖರ್ ಅವರ ಅರ್ಜಿಯೂ ಒಂದಾಗಿತ್ತು. ಡಿ.20ರಂದು ಸಭೆ ನಡೆಸಿದ್ದ ಶೋಧನಾ ಸಮಿತಿ, ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಗುರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜಿ. ವೆಂಕಟೇಶ್ ಕುಮಾರ್ ಮತ್ತು ಬೆಂಗಳೂರು ವಿವಿ ಡಾ.ಶರತ್ ಅನಂತಮೂರ್ತಿ ಅವರ ಹೆಸರುಗಳನ್ನು ವಿಸಿ ಹುದ್ದೆಗೆ ಶಿಫಾರಸು ಮಾಡಿತ್ತು.

    ರಾಜಶೇಖರ್ ಅವರ ವಿರುದ್ಧ ಕೆಲ ವಿಚಾರಣೆಗಳು ಬಾಕಿ ಇವೆ. ಆದ್ದರಿಂದ, ಯುಜಿಸಿ ನಿಯಮಗಳ ಪ್ರಕಾರ ಕುಲಪತಿ ಹುದ್ದೆಗೆ ಅವರು ಅರ್ಹರಲ್ಲ ಎಂಬ ಕಾರಣ ನೀಡಿ, ಅವರ ಅರ್ಜಿ ತಿರಸ್ಕರಿಸಲಾಗಿತ್ತು. ತಮ್ಮ ವಿರುದ್ಧ ಯಾವುದೇ ಇಲಾಖಾ ವಿಚಾರಣೆ ಬಾಕಿ ಇಲ್ಲ. ಸದ್ಯ ಕುಲಪತಿ ಹುದ್ದೆಗೆ ಶಿಫಾರಸುಗೊಂಡಿರುವ ಎಲ್ಲರಂತೆ ತಾವೂ ಅರ್ಹರಾಗಿದ್ದು, ತಮ್ಮ ಹೆಸರನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿ ರಾಜಶೇಖರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಮಾಸ್ಕ್​ ಧರಿಸಿಕೊಂಡು ದೇವರ ದರ್ಶನ ಪಡೆದ ಸಿದ್ದರಾಮಯ್ಯ; ದೇವಸ್ಥಾನದ ಅರ್ಚಕರ ಮನೆಯಲ್ಲಿ ಉಪಾಹಾರ

    ಮನೆಗಳ ಸಮೀಪದ ತೆರೆದ ಜಾಗದಲ್ಲಿ ಶವಸಂಸ್ಕಾರ; ನಿವಾಸಿಗರಿಗೆ ಕೋವಿಡ್ ಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts