More

    ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

    ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾದಲ್ಲಿ ಮಿನಿ ಬಸ್ ನಿಲ್ದಾಣ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತುಕೊಳ್ಳಲು ಜಾಗವಿಲ್ಲದೇ ಪರದಾಡುವಂತಾಗಿದೆ.

    ಇದನ್ನೂ ಓದಿ: ಬೀದರ್ ವಿಮಾನ ನಿಲ್ದಾಣಕ್ಕೆ ಪಟ್ಟದ್ದೇವರ ಹೆಸರಿಡಿ

    ಗ್ರಾಮವು ತಾಲೂಕು ಕೇಂದ್ರದಿಂದ 32 ಕಿ.ಮೀ. ದೂರದಲ್ಲಿದ್ದು, ತಾಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿದೆ. ಇದರ ವ್ಯಾಪ್ತಿಗೆ 38ಕ್ಕೂ ಅಧಿಕ ಗ್ರಾಮಗಳು ಒಳಪಡುತ್ತವೆ. ನಿತ್ಯ ಹಲವಾರು ಜನ ನಾನಾ ವ್ಯವಹಾರಕ್ಕಾಗಿ ಆಗಮಿಸುತ್ತಾರೆ.

    ಉಚ್ಚಲಕುಂಟಾ, ತಿಪ್ಪನಾಳ, ಕಟಗಿಹಳ್ಳಿ ಹಾಗೂ ಹಿರೇವಡ್ರಕಲ್ ಮಾರ್ಗವಾಗಿ ಕನಕಗಿರಿ, ಗಂಗಾವತಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಮದ ಹೃದಯ ಭಾಗದಲ್ಲಿ ಮೊದಲು ಬಸ್ ನಿಲ್ದಾಣವಿತ್ತು.

    ಅಭಿವೃದ್ಧಿ ಹಿತದೃಷ್ಠಿಯಿಂದ ರಸ್ತೆ ವಿಸ್ತರಣೆ ಮತ್ತು ಸೌಂದರ್ಯೀಕರಣ ಕಾಮಗಾರಿಗಾಗಿ ಪಿಡಬ್ಲುೃಡಿ ಇಲಾಖೆಯಿಂದ 3.50 ಕೋಟಿ ರೂ.ವೆಚ್ಚದಲ್ಲಿ ಎನ್‌ಎಚ್-50ಕ್ಕೆ ಹೊಂದಿಕೊಂಡ ಉಪ್ಪಲದಿನ್ನಿ ಕ್ರಾಸ್‌ನಿಂದ ಹಿರೇವಂಕಲಕುಂಟಾದ ಪ್ರಮುಖ ಬಸ್ ನಿಲ್ದಾಣದವರೆಗೆ ಕೆಲಸ ಕೈಗೊಳ್ಳಲಾಗಿತ್ತು.\

    ವಿಸ್ತರಣೆ ವೇಳೆ ಅಡ್ಡಿಯಾಗಿದ್ದ ನಿಲ್ದಾಣವನ್ನು ತೆರವುಗೊಳಿಸಿ, ಮಿನಿ ಬಸ್ ನಿಲ್ದಾಣ ನಿರ್ಮಾಣ ಭರವಸೆ ನೀಡಲಾಗಿತ್ತು. ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡರೂ, ಮಿನಿ ಬಸ್ ನಿಲ್ದಾಣ ಮಾಡದೇ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ.

    ಬಸ್ ನಿಲ್ದಾಣವಿದ್ದ ಸ್ಥಳದಲ್ಲಿ ಕೆಲ ವ್ಯಾಪಾರಸ್ಥರು ಅಂಗಡಿ ಹಾಕಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಅಕ್ಕಪಕ್ಕದ ಅಂಗಡಿಗಳ ಮುಂದೆ ಕುಳಿತು ಬಸ್‌ಗಾಗಿ ಕಾಯುವ ಸ್ಥಿತಿ ಬಂದಿದೆ.

    ಇಲ್ಲಿ ಕುಳಿತುಕೊಳ್ಳಲು ಅಂಗಡಿ ಮಾಲೀಕರ ನಡುವೆ ಜಗಳವಾಗಿದ್ದುಂಟು. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.


    ಹಿರೇವಂಕಲಕುಂಟಾ ಹೋಬಳಿ ಕೇಂದ್ರಕ್ಕೆ ವಿದ್ಯಾರ್ಥಿಗಳು ಸೇರಿ ಅನೇಕ ಜನ ಆಗಮಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಇದ್ದ ಬಸ್ ನಿಲ್ದಾಣ ತೆರವಿನಿಂದ ತೊಂದರೆಯಾಗಿದೆ.

    ನೆರಳು ಮತ್ತು ಬಸ್‌ಗಾಗಿ ಅಂಗಡಿಗಳ ಮುಂದೆ ಕುಳಿತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು.

    ಹಿರೇವಂಕಲಕುಂಟಾದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವ ವೇಳೆ ಬಸ್ ನಿಲ್ದಾಣ ತೆರವುಗೊಳಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಮಿನಿ ಬಸ್ ನಿಲ್ದಾಣ ನಿರ್ಮಿಸುವಂತೆ ಪಿಡಬ್ಲುೃಡಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ನಿಲ್ದಾಣ ತೆರವುಗೊಂಡ ಜಾಗದಲ್ಲಿ ಅಂಗಡಿ ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತೆರವುಗೊಳಿಸುವಂತೆ ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ. ಅಂಗಡಿಕಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ.
    ಗೋಣೆಪ್ಪ ಜಿರ್ಲಿ, ಹಿರೇವಂಕಲಕುಂಟಾ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts