More

    ಮದ್ಯ ನಿಷೇಧ ಭರವಸೆ ನೀಡುವ ಅಭ್ಯರ್ಥಿಗೆ ಬೆಂಬಲ

    ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಭರವಸೆ ನೀಡುವ ಅಭ್ಯರ್ಥಿಗೆ ಬೆಂಬಲ ನೀಡಲು ಮಹಿಳೆಯರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಮದ್ಯ ನಿಷೇಧ ಆಂದೋಲನದಿಂದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮೋಕ್ಷಮ್ಮ ತಿಳಿಸಿದರು.

    ಹೈಕೋರ್ಟ್ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆದೇಶಿಸಿದ್ದರೂ ಸರ್ಕಾರ ಮಾತ್ರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಕಳೆದ ಏಳು ವರ್ಷಗಳಿಂದ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ. ಜತೆಗೆ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಡಿಸಿ, ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ದಾಖಲೆ ಸಮೇತ ಪಟ್ಟಿ ನೀಡಲಾಗಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಅಕ್ರಮ ಮದ್ಯ ಮಾರಾಟ ತಡೆಗೆ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಸಮಿತಿಗೆ ಅರೆ ನ್ಯಾಯಾಂಗ ಅಧಿಕಾರ ನೀಡಬೇಕು. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ವಿಶೇಷ ಗ್ರಾಮಸಭೆ ಮಾಡಿ ಅದನ್ನು ತಡೆಯುವ ಅಧಿಕಾರ ಗ್ರಾಪಂಗೆ ನೀಡಬೇಕು. ಗ್ರಾಮ ಸಭೆಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಮಹಾರಾಷ್ಟ್ರ ಪಾನ ನಿಷೇಧ ಕಾಯ್ದೆ ಮಾದರಿಯಂತೆ ಸರಹದ್ದಿನಲ್ಲಿರುವ ಶೇ.10 ಜನರು ಮದ್ಯ ಮಾರಾಟಕ್ಕೆ ವಿರೋಧಿಸಿದರೆ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಬಾರದೆನ್ನುವ ಅಂಶವನ್ನು ಕರ್ನಾಟಕ ಪಾನ ನಿಷೇಧಕ ಕಾಯ್ದೆ ಅಧ್ಯಾಯ 3ರಲ್ಲಿ ಸೇರಿಸಬೇಕು. ಈ ಎಲ್ಲ ಅಂಶಗಳನ್ನು ಜಾರಿಗೊಳಿಸುವ ಭರವಸೆ ನೀಡುವ ಅಭ್ಯರ್ಥಿಗೆ ಮತ ಚಲಾಯಿಸಲು ಮಹಿಳೆಯರು ಮುಂದಾಗಿದ್ದು, ಸಂಘಟನೆಯಿಂದ ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ಹಕ್ಕೋತ್ತಾಯ ಮಂಡಿಸುವಂತೆ ಗ್ರಾಮಗಳಲ್ಲಿ ಕರಪತ್ರ ಹಂಚಲಾಗುತ್ತಿದೆ ಎಂದು ಮೋಕ್ಷಮ್ಮ ತಿಳಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ವಿದ್ಯಾ ಪಾಟೀಲ್, ಮಾರೆಮ್ಮ, ಬಸಮ್ಮ ನಾಗಲಿಕರ್, ಅಂಬ್ರಮ್ಮ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts