More

    ಕಲಾದಗಿಯಲ್ಲಿ ರಾಜ್ಯಮಟ್ಟದ ಕಥಾಕಮ್ಮಟ

    ಕಲಾದಗಿ: ಬಾಗಲಕೋಟೆ ಜಿಲ್ಲೆಯ ಕಥೆಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ವೀರಲೋಕ ಪ್ರಕಾಶನ ಹಾಗೂ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಸಹಯೋಗದಲ್ಲಿ ಗ್ರಾಮದಲ್ಲಿ ಡಿ.9 ಮತ್ತು 10 ರಂದು ನಡೆಯಲಿರುವ ರಾಜ್ಯಮಟ್ಟದ ಕಥಾಕಮ್ಮಟವನ್ನು ಎಲ್ಲರೂ ಕೂಡಿ ಯಶಸ್ವಿಗೊಳಿಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಕೋರಿದರು.

    ಇಲ್ಲಿನ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಕಥಾಕಮ್ಮಟದ ಆಯೋಜನೆ ಕುರಿತು ನಡೆದ ಕಸಾಪ ವಲಯ ಘಟಕದ ಪದಾಧಿಕಾರಿಗಳು, ಆಯೋಜಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಸಾಪ ಘಟಕ ಅನೇಕ ಹೊಸತನದ ಕಾರ್ಯಕ್ರಮಗಳ ಮೂಲಕ ಕ್ರಿಯಾಶೀಲವಾಗಿದ್ದು, ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕಲಾದಗಿಯಲ್ಲಿ ರಾಜ್ಯಮಟ್ಟದ ಕಥಾಕಮ್ಮಟ ಆಯೋಜನೆ ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ ಎಂದರು.

    ಕಥಾಕಮ್ಮಟದ ನಿರ್ದೇಶಕ, ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ, ಕಾ.ತಾ.ಚಿಕ್ಕಣ್ಣ, ಲಕ್ಷ್ಮಣ ಕೊಡಸೆ, ಬಾಳಾಸಾಬ ಲೋಕಾಪುರ ಅವರಂಥ ಮಹಾನ್ ಕಥೆಗಾರರ ಸಮ್ಮುಖದಲ್ಲಿ ನಡೆಯುತ್ತಿರುವ ಕಥಾಕಮ್ಮಟದಲ್ಲಿ ಜಿಲ್ಲೆಯನ್ನೊಳಗೊಂಡಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸುತ್ತಿರುವ ಹಿರಿಯ ಹಾಗೂ ಕಿರಿಯ 40 ಜನ ಕಥೆಗಾರರು ಪಾಲ್ಗೊಳ್ಳುತ್ತಿದ್ದು, ಕಮ್ಮಟ ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳೋಣ ಎಂದು ಹೇಳಿದರು.

    ಸಭೆಯಲ್ಲಿ ಮಾತನಾಡಿದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ.ಪಾಟೀಲ, ಇಂಥಹದೊಂದು ವಿಶೇಷ ಕಾರ್ಯಕ್ರಮ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವುದಕ್ಕೆ ಸಂಸ್ಥೆ ಅಭಿಮಾನಪಡುತ್ತದೆ. ಹಣ್ಣು ಬೆಳೆಗಾರ ಸಂಘದ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರ ಸೂಚನೆಯಂತೆ ಕಮ್ಮಟದಲ್ಲಿ ಪಾಲ್ಗೊಳ್ಳುವವರ ಆದರಾತಿಥ್ಯವನ್ನು ಅಚ್ಚುಕಟ್ಟಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಕಸಾಪ ಕಲಾದಗಿ ವಲಯ ಘಟಕದ ಅಧ್ಯಕ್ಷ ಲಕ್ಷ್ಮಣ ಅಂಕಲಗಿ ಹಾಗೂ ಪದಾಧಿಕಾರಿಗಳು, ಕಥೆಗಾರ ಅನೀಲ ಗುನ್ನಾಪುರ, ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ಆರ್. ವಿ. ಜಾಧವ, ದ.ರಾ.ಪುರೋಹಿತ ಮುಂತಾದವರು ಪಾಲ್ಗೊಂಡಿದ್ದ ಸಭೆಯಲ್ಲಿ ಎರಡು ದಿನ ನಡೆಯುವ ಕಮ್ಮಟದ ರೂಪುರೇಷೆ, ಆಯೋಜನೆ, ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts