More

    ರಾಜ್ಯ ಸರ್ಕಾರದಿಂದ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬರ ಪರಿಹಾರ ಹಾಗೂ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ನೀತಿಯಲ್ಲಿ ವ್ಯತ್ಯಾಸವಿತ್ತು. ನಾವು ಎಸ್​ಡಿಆರ್​ಎಫ್​ನಲ್ಲಿ ಶೇ. 75ರಷ್ಟು ಹಣವನ್ನು ರಾಜ್ಯ ಸರ್ಕಾರಗಳಿಗೆ ಮುಂಗಡವಾಗಿ ಹಾಕಿದ್ದೇವೆ. ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಿಲ್ಲ ಎಂದು ಹೇಳಿದರು.

    ಕೇಂದ್ರದಿಂದ ರಾಜ್ಯಕ್ಕೆ ಸಲ್ಲಿಕೆಯಾಗಬೇಕಾದ ಜಿಎಸ್​ಟಿ ಪಾಲಿನ ಹಣದಲ್ಲಿ ಯಾವುದು ಬಾಕಿ ಉಳಿಸಿಕೊಂಡಿಲ್ಲ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ವಿಶೇಷ ಅನುದಾನಕ್ಕೆ ಶಿಫಾರಸ್ಸು ಮಾಡಿತ್ತು ಎಂಬುದು ಶುದ್ಧ ಸುಳ್ಳು. ಈ ಕುರಿತು ಆಯೋಗವು ಯಾವುದೇ ಶಿಫಾರಸ್ಸು ಮಾಡಿಲ್ಲ. ಈ ಹಿಂದೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರ ಪರಿಹಾರ, ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದರು.

    ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬಹಳಷ್ಟು ಕಡೆಗೆ ಕುಡಿಯುವ ನೀರಿಗೆ ತಾತ್ವಾರ ಇದೆ. ಇದನ್ನೆಲ್ಲ ಮುಚ್ವಿಕೊಳ್ಳಲು ರಾಜ್ಯ ಸರ್ಕಾರ, ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್​ಗೆ ಹೋಗಿದ್ದು ಖಂಡನೀಯ. ಇದು ದ್ವೇಷದ ರಾಜಕಾರಣ ಎಂದು ಹರಿಹಾಯ್ದರು.

    ಮೋದಿ, ಮೋದಿ ಎಂದು ಘೊಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಖಂಡಿಸಿದ ಪ್ರಲ್ಹಾದ್ ಜೋಶಿ, ದೇಶದಲ್ಲಿ ಶೇ.70-80ರಷ್ಟು ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮದಲ್ಲೂ ಸ್ವಯಂ ಪ್ರೇರಣೆಯಿಂದ ಮೋದಿ ಮೋದಿ ಎಂದು ಘೊಷಣೆ ಹಾಕುತ್ತಾರೆ. ಕಾಂಗ್ರೆಸ್ಸಿಗರ ಕೈಯಲ್ಲಿ ಎಷ್ಟು ಶಕ್ತಿಯಿದೆ ಎಂಬುದನ್ನು ಒಂದು ಸಲ ತೋರಿಸಿ ಬಿಡಲಿ. ಕಾಂಗ್ರೆಸ್ಸಿಗರ ಮೋದಿ ಅವರನ್ನು ದ್ವೇಷಿಸಿದಷ್ಟು ದೇಶದ ಜನತೆ ಮೋದಿ ಅವರನ್ನು ಪ್ರೀತಿಸುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts