More

    ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಪ್ರಯೋಜನ ಇಲ್ಲ: ಕಿಮ್ಮನೆ

    ಶಿವಮೊಗ್ಗ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 25 ಸಂಸದರು ಆಯ್ಕೆಯಾದರೂ, ನಾಲ್ವರು ಕೇಂದ್ರದಲ್ಲಿ ಸಚಿವರಾದರೂ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ. ಅನುದಾನ ತಾರತಮ್ಯದ ಬಗ್ಗೆಯೂ ಧ್ವನಿ ಎತ್ತಲಿಲ್ಲ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.

    ಅತಿವೃಷ್ಟಿಯಾದರೂ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಲಿಲ್ಲ. ಈಗ ಅನಾವೃಷ್ಟಿಯಾದರೂ ಕೇಂದ್ರ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಬಿಡುಗಡೆಯಾಗಬೇಕಾದ ಅನುದಾನದಲ್ಲೂ ತಾರತಮ್ಯವಾಗಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಇದರ ಬಗ್ಗೆ ತುಟಿಬಿಚ್ಚಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
    ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಎರಡನೇ ಸ್ಥಾನ. ಆದರೆ ಕಡಿಮೆ ತೆರಿಗೆ ಸಂಗ್ರಹವಾಗುವ ಉತ್ತರ ಪ್ರದೇಶಕ್ಕೆ ಕೇಂದ್ರ ಹೆಚ್ಚು ಅನುದಾನ ನೀಡಿದೆ. ಕರ್ನಾಟಕಕ್ಕೆ ಸಿಗಬೇಕಾದ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ವಿತ್ತ ಸಚಿವರು, ಗೃಹ ಸಚಿವರನ್ನು ಭೇಟಿಯಾದರೂ ಪ್ರಯೋಜನವಾಗಲಿಲ್ಲ ಎಂದರು.
    ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ 1.87 ಲಕ್ಷ ಕೋಟಿ ರೂ. ನೀಡದ ಕಾರಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಕೇಳುವ ಸ್ಥಿತಿ ಬಂದೊದಗಿದೆ. ಇದು ವಿಶ್ವಗುರು ನರೇಂದ್ರ ಮೋದಿ ಅವರ ಸಾಧನೆ. ಕೇಂದ್ರದ ನಡೆಯಿಂದ ಒಕ್ಕೂಟ ವ್ಯವಸ್ಥೆಗೆ ಹಾನಿ ಉಂಟಾಗುತ್ತಿದೆ ಎಂದು ಟೀಕಿಸಿದರು.
    ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಜನರಿಗೆ ಯೋಜನೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸುತ್ತಿದ್ದಾರೆ. ಯಾರಿಗೆ ಸಿಕ್ಕಿಲ್ಲ ಎಂಬ ಪಟ್ಟಿಯನ್ನು ಅವರು ಬಿಡುಗಡೆ ಮಾಡಲಿ. ಅವರೊಂದಿಗೆ ನಾನು ಚರ್ಚಿಸಲು ಸಿದ್ಧನಿದ್ದೇನೆ ಎಂದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ.ಮಂಜುನಾಥ್, ಪ್ರಮುಖರಾದ ಶಿವಾನಂದ್, ಮಧು, ಜಿತೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts