More

    ದಿನಗೂಲಿ ನೌಕರರ ಪುತ್ರ ಈಗ ಟೀಮ್ ಇಂಡಿಯಾ ವೇಗಿ!

    ಬೆಂಗಳೂರು: ತಮಿಳುನಾಡಿನ ಸಲೇಂ ಹೊರವಲಯದ ಚಿನ್ನಪ್ಪಂಪಟ್ಟಿ ಎಂಬ ಸಣ್ಣಹಳ್ಳಿಯ ದಿನಗೂಲಿ ನೌಕರ ದಂಪತಿಯ ಪುತ್ರ ಕಳೆದ ಐಪಿಎಲ್‌ನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದೀಗ ಅವರು ಟೀಮ್ ಇಂಡಿಯಾಗೂ ಪ್ರವೇಶ ಪಡೆದಿದ್ದಾರೆ. ಅವರೇ ತಂಗರಸು ನಟರಾಜನ್.

    ಬುಧವಾರ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಡುವ ಮೂಲಕ 29 ವರ್ಷದ ಟಿ. ನಟರಾಜನ್ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 232ನೇ ಆಟಗಾರ ಮತ್ತು 11ನೇ ಎಡಗೈ ವೇಗಿ ಎನಿಸಿದರು. ಪಂದ್ಯದಲ್ಲಿ 10 ಓವರ್‌ಗಳಲ್ಲಿ 70 ರನ್ ಬಿಟ್ಟುಕೊಟ್ಟರೂ, 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

    ಅರಬ್ ನಾಡಿನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಜಸ್‌ಪ್ರೀತ್ ಬುಮ್ರಾ ಮತ್ತು ವಿದೇಶಿ ವೇಗಿಗಳಿಗಿಂತಲೂ ಹೆಚ್ಚು ಯಾರ್ಕರ್ ಎಸೆತಗಳನ್ನು ಎಸೆಯವ ಮೂಲಕ ಪರಿಣಾಮಕಾರಿ ಬೌಲಿಂಗ್ ನಿರ್ವಹಣೆ ತೋರಿದ್ದ ಟಿ. ನಟರಾಜನ್, ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಗುರುತಿಸಲ್ಪಟ್ಟಿದ್ದಾರೆ.

    20ನೇ ವಯಸ್ಸಿನವರೆಗೂ ನಟರಾಜನ್ ತಮ್ಮ ಹಳ್ಳಿಯಲ್ಲಿ ಟೆನಿಸ್ ಬಾಲ್ ಟೂರ್ನಿಗಳಲ್ಲಿ ಮಾತ್ರ ಆಡಿದ್ದರು. ಶಾಲೆ ಅಥವಾ ಕಾಲೇಜು ತಂಡಗಳಲ್ಲೂ ಆಡಿರಲಿಲ್ಲ. ಆದರೆ ಬಳಿಕ ಕೋಚ್ ಎ. ಜಯಪ್ರಕಾಶ್ ಮಾರ್ಗದರ್ಶನದ ಮೇರೆಗೆ ಚೆನ್ನೈಗೆ ತೆರಳಿ ಕ್ಲಬ್ ಕ್ರಿಕೆಟ್‌ಗಳಲ್ಲಿ ಆಡಲಾರಂಭಿಸಿದ ನಟರಾಜನ್ ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಆಡಿ ಗಮನಸೆಳೆದರು. ಇದರಿಂದಾಗಿ 2017ರಲ್ಲಿ ಮೊದಲಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾಗಿದ್ದರು. 3 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಸೇರಿ ಅಚ್ಚರಿ ಸೃಷ್ಟಿಸಿದ್ದ ನಟರಾಜನ್, 6 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ ನಿರಾಸೆ ಮೂಡಿಸಿದ್ದರು.

    2018ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 40 ಲಕ್ಷ ರೂ. ಮೊತ್ತಕ್ಕೆ ಸೇರ್ಪಡೆಗೊಂಡ ನಟರಾಜನ್, 2 ವರ್ಷಗಳ ಕಾಲ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ಈ ಬಾರಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಗಮನ ಸೆಳೆದಿದ್ದಾರೆ. ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದ್ದರು.

    ಐಪಿಎಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರೂ ನಟರಾಜನ್‌ರ ಟೋಯಿ-ಕ್ರಷರ್ಸ್‌ ಯಾರ್ಕರ್ ಎಸೆತಗಳನ್ನು ಎದುರಿಸಲು ಪರದಾಡಿದ್ದರು. ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಕೂಡ ಟೂರ್ನಿಯ ವೇಳೆ ನಟರಾಜನ್ ಬೌಲಿಂಗ್ ಮೆಚ್ಚಿಕೊಂಡಿದ್ದರು. ಇದರಿಂದ ಮೊದಲಿಗೆ ಆಸೀಸ್ ಪ್ರವಾಸದ ಭಾರತ ತಂಡಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ನಟರಾಜನ್ ಬಳಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯಗೊಂಡಾಗ ಟಿ20 ತಂಡಕ್ಕೆ ಸೇರ್ಪಡೆಗೊಂಡರು. ಬಳಿಕ ಕೊನೇಕ್ಷಣದಲ್ಲಿ ಏಕದಿನ ತಂಡಕ್ಕೂ ಸೇರ್ಪಡೆಗೊಂಡಿದ್ದ ಅವರಿಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಅವಕಾಶವೂ ಕೂಡ ಬಂದಿದೆ.

    ಐಪಿಎಲ್‌ನಿಂದ ನಟರಾಜನ್‌ರ ವೈಯಕ್ತಿಕ ಜೀವನವೂ ಬದಲಾಗಿದೆ. ದಿನಗೂಲಿ ನೌಕರರಾಗಿದ್ದ ಹೆತ್ತವರಿಗೆ ಈಗ ನಟರಾಜನ್ ಸ್ವಂತ ಮನೆಕಟ್ಟಿಕೊಟ್ಟಿದ್ದಾರೆ. ಮೂವರು ಸಹೋದರಿಯರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಅಲ್ಲದೆ ತಮ್ಮದೇ ಕ್ರಿಕೆಟ್ ಅಕಾಡೆಮಿ ತೆರೆದು ತಮ್ಮ ಹಳ್ಳಿಯ ಇತರ ಪ್ರತಿಭಾನ್ವಿತ ಆಟಗಾರರಿಗೂ ಕ್ರಿಕೆಟ್ ಕಲಿಯಲು ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ.

    ಐಪಿಎಲ್ ವೇಳೆ ನಟರಾಜನ್ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅರಬ್ ನಾಡಿನಲ್ಲಿದ್ದ ಅವರು ತವರಿಗೆ ಮರಳಿರಲಿಲ್ಲ. ಬಳಿಕ ಅಲ್ಲಿಂದಲೇ ಆಸೀಸ್‌ಗೆ ಪ್ರಯಾಣಿಸಿದ್ದರು. ಹೀಗಾಗಿ ಅವರಿನ್ನೂ ಮಗುವಿನ ಮುಖ ನೋಡಿಲ್ಲ.

    ಜೆರ್ಸಿ ಮೇಲೆ ಕೋಚ್ ಹೆಸರು!
    ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಆಡುತ್ತಿದ್ದ ವೇಳೆ ಟಿ. ನಟರಾಜನ್ ಅವರ ಜೆರ್ಸಿಯಹಿಂದೆ ‘ಜೆಪಿ ನಟ್ಟು’ ಎಂದು ಬರೆದಿತ್ತು. ಇದು ಅವರ ಕೋಚ್ ಹಾಗೂ ಮಾರ್ಗದರ್ಶನ ಜಯಪ್ರಕಾಶ್ ನಟ್ಟು ಅವರ ಹೆಸರಾಗಿದೆ. ಕೋಚ್ ಮೇಲಿನ ಅಪಾರ ಗೌರವದಿಂದಾಗಿ ಅವರು ಜೆರ್ಸಿ ಮೇಲೆ ಅವರ ಹೆಸರನ್ನೇ ಬರೆಸಿದ್ದರು. 2015ರಲ್ಲಿ ತಮಿಳುನಾಡು ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ನಟರಾಜನ್, 20 ಪಂದ್ಯಗಳಲ್ಲಿ 64 ವಿಕೆಟ್ ಕಬಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts