More

    ಬಿತ್ತನೆ ಬೀಜ ವಿತರಣೆ ಶುರು

    ಲಕ್ಷ್ಮೇಶ್ವರ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಸಹಾಯಕ ಕೃಷಿ ನಿರ್ದೇಶಕ ಮಹೇಶಬಾಬು ಎಚ್.ಎಂ. ಬುಧವಾರ ಚಾಲನೆ ನೀಡಿದರು.

    ಈ ವೇಳೆ ರೈತರಿಗೆ ಮಾಹಿತಿ ನೀಡಿದ ಅವರು, ಇಲಾಖೆಯಿಂದ ಪಡೆದ ಪ್ರಮಾಣಿತ ಬೀಜಗಳನ್ನು ರೈತರು 3 ವರ್ಷ ಬಳಸಬಹುದು. ಆದ್ದರಿಂದ ಒಕ್ಕಲಿ ನಂತರ ಉತ್ತಮವಾದ ಬೀಜಗಳನ್ನು ಬಿತ್ತನೆಗೆ ಸಂಗ್ರಹಿಸಿಕೊಳ್ಳಬೇಕು. ರೈತರು ಮಿಶ್ರ ಬೆಳೆ ಪದ್ಧತಿ ರೂಢಿಸಿಕೊಳ್ಳಬೇಕು ಅಂದಾಗ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಸದ್ಯ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ 60 ಕ್ವಿಂಟಾಲ್ ಹೆಸರು, 21 ಕ್ವಿಂಟಾಲ್ ತೊಗರಿ, 10.20 ಕ್ವಿಂಟಾಲ್ ಜೋಳದ ಬೀಜ ದಾಸ್ತಾನಿದೆ. ಶೇಂಗಾ, ಗೋವಿನ ಜೋಳದ ಬೀಜಗಳು ಜೂನ್ ಮೊದಲ ವಾರದಲ್ಲಿ ಬರಲಿವೆ ಎಂದರು.

    ಸಾಮಾನ್ಯ ರೈತರಿಗೆ ಶೇ. 50 ಮತ್ತು ಎಸ್​ಸಿ/ಎಸ್​ಟಿ ರೈತರಿಗೆ ಶೇ.75ರಷ್ಟು ರಿಯಾಯಿತಿ ದರದಲ್ಲಿ ಬೀಜ ಕೊಡಲಾಗುತ್ತಿದೆ. ಆಧಾರ್ ಕಾರ್ಡ್, ಖಾತೆ ಉತಾರ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್​ಬುಕ್ ತರಬೇಕು. ಬೀಜ ವಿತರಣೆ ಗಣಕೀಕೃತವಾಗಿದ್ದರಿಂದ ಸ್ವಲ್ಪ ತಡವಾಗುತ್ತದೆ. ಪರಸ್ಪರ ಅಂತರ ಕಾಪಾಡಿ, ಮಾಸ್ಕ್ ಧರಿಸಬೇಕು ಎಂದರು.

    ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ಅಧಿಕಾರಿ ಎಂ.ಎಚ್. ಹಣಗಿ, ಅಮೀತ ಹಾಲೇವಾಡಿಮಠ, ಮಹೇಶ ನಂದೆಣ್ಣವರ, ಸಿದ್ದು ಕನವಳ್ಳಿ, ಹರೀಶ ಭದ್ರಾಪುರ, ಶಂಕರ ರ್ಬಾ, ಚಾಂದುಸಾಬ ಸರಾವರಿ ಇದ್ದರು.

    ಖರೀದಿಗೆ ಮುಗಿಬಿದ್ದ ರೈತರು

    ಹೆಸರು ಬಿತ್ತನೆ ಸಿದ್ಧವಾಗಿರುವ ರೈತರು ಬುಧವಾರ ರೈತ ಸಂಪರ್ಕ ಕೇಂದ್ರಕ್ಕೆ ದೌಡಾಯಿಸಿದ್ದರು. ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮಾತ್ರ ಬೀಜ ವಿತರಣೆಗೆ ಅವಕಾಶ ಇರುವುದರಿಂದ ಹೆಚ್ಚು ರೈತರು ಸೇರಿದ್ದರು. ಕೋವಿಡ್ ನಿಯಮ ಪಾಲಿಸಲು ರೈತರು ಸರದಿ ಸಾಲಿನಲ್ಲಿ ನಿಲ್ಲಲು ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವ್ಯವಸ್ಥೆ ಕಲ್ಪಿಸಿ ಮಾರ್ಗಸೂಚಿ ಅಳವಡಿಸಿದ್ದರು. ಆದರೂ, ರೈತರು ಬೀಜಕ್ಕಾಗಿ ಮುಗಿಬಿದ್ದ ದೃಶ್ಯ ಕಂಡುಬಂದಿತು. ಶೇಂಗಾ ಮತ್ತು ಗೋವಿನಜೋಳ ಬೀಜ ವಿತರಿಸಲು ರೈತರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts