More

    ತಿಪಟೂರಿನಲ್ಲಿ ತೆಂಗು ಸಂಶೋಧನೆ ಕೇಂದ್ರ ಆರಂಭಿಸಿ, ಇಲ್ಲವೆ ಕಟ್ಟಡ ವಾಪಸ್ ಕೊಡಿ!

    ತುಮಕೂರು: 2016ರಲ್ಲಿ ಜಿಲ್ಲೆಯ ಜನರ ಬಹು ನಿರೀಕ್ಷಿತ ತೆಂಗು, ಕೊಬ್ಬರಿ ಉತ್ಪನ್ನಗಳ ಸಂಶೋಧನೆ ಕೋರ್ಸ್ ಆರಂಭಿಸಲು ತುಮಕೂರು ವಿವಿ ತಿಪಟೂರು ಎಪಿಎಂಸಿ ಆವರಣದಲ್ಲಿ ಪಡೆದಿದ್ದ ಸುಸಜ್ಜಿತ ಕಟ್ಟಡ ಅನಾಥವಾಗಿದೆ.

    2017ರಲ್ಲಿ ಕೋರ್ಸ್ ಆರಂಭಿಸುವುದಾಗಿ ಹೇಳಿ ಪಡೆದಿದ್ದ 2,500 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಕಟ್ಟಡ ಶಿಥಿಲವಾಗುತ್ತಿದ್ದು ಕೂಡಲೇ ಕೋರ್ಸ್ ಆರಂಭಿಸಿ, ಸಾಧ್ಯವಾಗದಿದ್ದರೆ ವಾಪಸ್ ನೀಡಿ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ ವಿವಿಗೆ ಪತ್ರ ಬರೆದಿದ್ದಾರೆ.

    ಕೋರ್ಸ್‌ಗೆ ಅಗತ್ಯ ಅನುದಾನ ನೀಡಲು ತೆಂಗು ಅಭಿವೃದ್ಧಿ ಮಂಡಳಿ ಒಪ್ಪಿಗೆ ನೀಡಿದ್ದು, ವಿವಿ ಸಹ ಶೈಕ್ಷಣಿಕ ಮಂಡಳಿ ಒಪ್ಪಿಗೆ ಪಡೆದು ಪಠ್ಯಕ್ರಮ ರೂಪಿಸಿದೆ, ಆದರೂ ‘ತೆಂಗು ಹಾಗೂ ಕೊಬ್ಬರಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ ಜತೆಗೆ ಡಿಪ್ಲೊಮಾ ಕೋರ್ಸ್’ ನನೆಗುದಿಗೆ ಬಿದ್ದಿದೆ.

    ತೆಂಗು ಹಾಗೂ ತೆಂಗು ಉತ್ಪನ್ನಗಳ ಮೌಲ್ಯವರ್ಧಿತ ಕೋರ್ಸ್ ಆರಂಭಿಸಲು ತಿಪಟೂರು ಎಪಿಎಂಸಿ, ತೆಂಗು ಅಭಿವೃದ್ಧಿ ಮಂಡಳಿ ಹಾಗೂ ತುಮಕೂರು ವಿವಿ ಒಪ್ಪಿಗೆ ನೀಡಿದ್ದು ನೀಲಿನಕ್ಷೆ ಸಿದ್ಧವಾಗಿಯೇ 4 ವರ್ಷವಾಗಿದೆ. ತುಮಕೂರು ವಿವಿ ವಾಣಿಜ್ಯಶಾಸ್ತ್ರ, ಆಡಳಿತ ನಿರ್ವಹಣೆ, ಸಮಾಜಕಾರ್ಯ ಮತ್ತಿತರ ಸಮಾನ ಮನಸ್ಕ ವಿಷಯಗಳ ಪ್ರಾಧ್ಯಾಪಕರಿಗೆ ವಿಶೇಷ ತರಬೇತಿ ನೀಡಿ, ವಿದ್ಯಾರ್ಥಿಗಳಿಗೆ ಪಾಠ ಮಾಡಿಸಲು ತೀರ್ಮಾನಿಸಲಾಗಿತ್ತು.

    ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ ತಿಪಟೂರಿನ ಹೊರವಲಯದ 30ಎಕರೆ ಪ್ರದೇಶದಲ್ಲಿ ತುಮಕೂರು ವಿವಿ ಸ್ನಾತಕೋತ್ತರ ಕೇಂದ್ರ 2017ರಲ್ಲಿಯೇ ಕೋರ್ಸ್ ಪ್ರಾಯೋಗಿಕವಾಗಿ ಆರಂಭವಾಗಬೇಕಿತ್ತು. ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್‌ನ್ನ ಶೇ.80ರಷ್ಟು ಸೀಟುಗಳು ಕನಿಷ್ಠ ವಿದ್ಯಾರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೀಡುವುದು ಹಾಗೂ ಉಳಿದ ಶೇ.20ರಷ್ಟು ಸೀಟು ಅಕ್ಷರ ಕಲಿಯದಿದ್ದರೂ ತೆಂಗು ಬೆಳೆಗಾರರಾಗಿ ಉತ್ತಮ ಜ್ಞಾನ ಹೊಂದಿರುವ ಆಸಕ್ತರಿಗೆ ನೀಡಲು ವಿವಿಗೆ ತಜ್ಞರ ಸಮಿತಿ ಸಲಹೆ ನೀಡಿ, ಪಠ್ಯಕ್ರಮ ಕೂಡ ರೂಪಿಸಿತ್ತು.

    ಯಾರಿಗೆಲ್ಲ ಉಪಯೋಗ?: ವಿದ್ಯಾರ್ಥಿಗಳಿಗಷ್ಟೇ ಅಲ್ಲ ತೆಂಗು ಬೆಳೆಗಾರರಿಗೂ ಕೇಂದ್ರ ನೆರವಾಗುವ ಉದ್ದೇಶವಿದೆ. ರಾಜ್ಯದಲ್ಲಿ ತೆಂಗಿಗೆ ಸಂಬಂಧಪಟ್ಟ ಅಧ್ಯಯನ ಎಲ್ಲಿಯೂ ನಡೆಯುತ್ತಿಲ್ಲ, ನೀರಾ ಪೂರಕ ತಿನಿಸು, ತೆಂಗು ಹಾಗೂ ಕೊಬ್ಬರಿ ಬಳಸಿ ಮಾಡಬಹುದಾದ ಉತ್ಪನ್ನಗಳ ಬಗ್ಗೆ ಸಂಶೋದನೆ ನಡೆಯುವ ಆಸೆ ಕಮರಿದೆ. ಎಲ್ಲವೂ ಅಂದುಕೊಂಡಂತೆ ಆದರೆ ತೆಂಗು ಕೃಷಿಯಲ್ಲಿ ಸಣ್ಣದೊಂದು ಕ್ರಾಂತಿಯಾಗಲಿದೆ.

    ತಜ್ಞರ ಸಮಿತಿಯೂ ಒಪ್ಪಿಗೆ 2016ರಲ್ಲಿ ತುಮಕೂರು ವಿವಿ ನೇಮಿಸಿದ್ದ 18ಜನ ತಜ್ಞರ ಸಮಿತಿ 4 ತಿಂಗಳ 2 ಸರ್ಟಿಫಿಕೇಟ್ ಕೋರ್ಸ್ ಹಾಗೂ ಒಂದು ವರ್ಷದ 2 ಡಿಪ್ಲೊಮಾ ಕೋರ್ಸ್ ಆರಂಭಕ್ಕೆ ಶಿಫಾರಸು ಮಾಡಿದೆ. ಅಕ್ಷರ ಕಲಿಯದ ತೆಂಗು ಬೆಳೆಗಾರರು ಈ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಕಲಿಯಲು ಅವಕಾಶ ನೀಡಿದೆ. ತೆಂಗು ಬೆಳೆಯುವ ಮನೆಯ ವಿದ್ಯಾರ್ಥಿಗಳು ಪದವಿ ಓದುವಾಗಲೇ ಕೌಶಲಾಭಿವೃದ್ಧಿ ಕೋರ್ಸ್ ಕೂಡ ಮಾಡಿಕೊಳ್ಳಲು ಅವಕಾಶವಿತ್ತು.

    35 ಲಕ್ಷ ರೂ. ಖರ್ಚು ಮಾಡಿತ್ತು ಎಪಿಎಂಸಿ!: ತೆಂಗು, ಕೊಬ್ಬರಿ ಹಾಗೂ ತೆಂಗಿನ ಉತ್ಪನ್ನಗಳ ಬಗ್ಗೆ ನಿರಂತರ ಸಂಶೋಧನೆಗೆ ಅನುಕೂಲವಾಗುವಂತೆ ತೆಂಗು ಉತ್ಪನ್ನ ಸಂಸ್ಕರಣಾ ಲ್ಯಾಬ್ ಆರಭಿಂಸಲು ಅಗತ್ಯ ಜಾಗ ನೀಡಿದ್ದ ತಿಪಟೂರು ಎಪಿಎಂಸಿ 35 ಲಕ್ಷ ರೂ. ವೆಚ್ಚದಲ್ಲಿ ಕೊಠಡಿಗೆ ಹೈಟೆಕ್ ಸ್ಪರ್ಶ ನೀಡಿತ್ತು. ಪ್ರಸ್ತುತ ಅದು ಸದುಪಯೋಗವಿಲ್ಲದೇ ಹಾಳಾಗುತ್ತಿದೆ.

    ನಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಸಂಶೋಧನಾ ಕೇಂದ್ರ ನೆರವಾಗುವ ಭರವಸೆಯಿಂದ ಎಪಿಎಂಸಿ ಕಟ್ಟಡ ನೀಡಲಾಗಿದೆ. ಕೇಂದ್ರ ಆರಂಭಿಸಲು ತುಮಕೂರು ವಿವಿಗೆ ಎರಡು ಪತ್ರ ಬರೆಯಲಾಗಿದೆ. ವಿವಿ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಮುಂದಿನ ವರ್ಷದಿಂದಾದರೂ ಕೋರ್ಸ್ ಆರಂಭಕ್ಕೆ ಕ್ರಮವಹಿಸಲಿ.
    ಎಸ್.ಬಿ.ನ್ಯಾಮಗೌಡ ಕಾರ್ಯದರ್ಶಿ, ತಿಪಟೂರು ಎಪಿಎಂಸಿ

    ಜಿಲ್ಲೆಯ ಪ್ರಮುಖ ಬೆಳೆ ತೆಂಗು ಬೆಳೆಗಾರರಿಗೆ ನೆರವಾಗಲು ವಿವಿ ಉತ್ಸುಕವಾಗಿದೆ, ಮುಂದಿನ ಶೈಕ್ಷಣಿಕ ವರ್ಷದಿಂದ ಉದ್ದೇಶಿತ ಕೋರ್ಸ್ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಕಟ್ಟಡದ ಸದುಪಯೋಗಕ್ಕೆ ಕ್ರಮಕೈಗೊಳ್ಳಲಾಗುವುದು.
    ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts