More

    ಶೆ… ಎಂಚಿನ ಫೀಲ್ಡಿಂಗ್ ಮಾರ‌್ರೆ!

    ಮಂಗಳೂರು: ಶೆ… ಎಂಚಿನ ಫೀಲ್ಡಿಂಗ್ ಮಾರ‌್ರೆ… ಶಾರ್ಜಾದಲ್ಲಿ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ಮಧ್ಯೆ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ನಿಕೊಲಸ್ ಪೂರನ್ ಸಿಕ್ಸರ್ ಒಂದನ್ನು ಅದ್ಭುತವಾಗಿ ತಡೆದ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಹೀಗೆ ಟ್ವೀಟ್ ಮಾಡಿದೆ.
    ಶಾರ್ಜಾದ ಅಂಗಳದಲ್ಲಿ ಸಿಕ್ಸರ್, ಬೌಂಡರಿಗಳ ಮೇಲಾಟದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡನ್ನು ಮೇಲಕ್ಕೆ ನೆಗೆದು ಸಿಕ್ಸರ್ ತಡೆದ ನಿಕೊಲಸ್ ಪೂರನ್‌ರ ಸಾಹಸಿಕ ಫೀಲ್ಡಿಂಗ್‌ಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಪೂರನ್ ಸಿಕ್ಸರ್ ಆಗಲಿದ್ದ ಚೆಂಡನ್ನು ಬೌಂಡರಿಯಾಚೆಯಿಂದಲೂ ಬಾಚಿ ಒಳಗೆಳೆದು ಅದ್ಭುತ ಕ್ಷಣಗಳನ್ನು ಸೃಷ್ಟಿಸಿದ್ದರು. ಕ್ರಿಕೆಟ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ‘ಇದು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಸೇವ್’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ರೀ ಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ‘ಶೆ… ಎಂಚಿನ ಫೀಲ್ಡಿಂಗ್ ಮಾರ‌್ರೆ’ (ಎಂತಹ ಫೀಲ್ಡಿಂಗ್) ಎಂದು ಬರೆದುಕೊಂಡಿದೆ. ಇದು ಎಲ್ಲ ಕಡೆ ವೈರಲ್ ಆಗಿದ್ದು ಚಾನೆಲ್‌ನ ತುಳು ಭಾಷೆಯ ಪ್ರಚಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ತುಳು ಭಾಷೆಯ ಪ್ರಶಂಸೆಯ ಮೂಲಕ ತುಳುವರ ಮನ ಗೆಲ್ಲುವ ಪ್ರಯತ್ನವನ್ನು ಈ ಚಾನೆಲ್ ನಡೆಸಿದ್ದು ತುಳು ನೆಟ್ಟಿಗರ ಮನ ಗೆದ್ದಿದೆ.
    ಪೂರನ್ ಫೀಲ್ಡಿಂಗ್ ನೋಡಿ ತಮ್ಮ ಮನಸ್ಸಿನಲ್ಲಿ ಆ ಕ್ಷಣಕ್ಕೆ ಬಂದ ಯೋಚನೆಯನ್ನೇ ಟ್ವೀಟ್ ಮಾಡಿದ್ದು, ಕರ್ನಾಟಕದ ಸ್ಥಳೀಯ ಭಾಷೆಗಳನ್ನು ಪ್ರಚುರಪಡಿಸುವ ಉದ್ದೇಶ ಎಂದು ಟ್ವೀಟ್ ಮಾಡಿರುವ ಸಂತೋಷ್ ನಾಯ್ಕ ತಿಳಿಸಿದ್ದಾರೆ.

    ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುತ್ತದೆ. ಕರಾವಳಿ ಭಾಗದ ಭಾಷೆಯನ್ನೂ ಬಳಸಿ ಅಭಿಮಾನಿಗಳನ್ನು ತಲುಪುವ ಉದ್ದೇಶ ನಮ್ಮದು. ಆ ಕ್ಷಣದಲ್ಲಿ ಮನಸ್ಸಿಗೆ ಬಂದ ವಾಕ್ಯವನ್ನು ಅಲ್ಲಿ ಹಾಕಿದ್ದು ಎಲ್ಲ ಕಡೆ ವೈರಲ್ ಆಗಿರುವ ಬಗ್ಗೆ ಅಭಿಮಾನವಿದೆ.
    ರೋಹನ್, ಸ್ಟಾರ್ ಸ್ಪೋರ್ಟ್ಸ್ ಪಿಆರ್ ಟೀಮ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts