ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ಧಾರೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲೂ ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಈಗ ವಿಚಾರ ಒಂದಕ್ಕೆ ಸಿನಿರಸಿಕರ ಗಮನ ಸೆಳೆಯುತ್ತಿದ್ದಾರೆ.
ಇನ್ನೂ ವಿಕ್ಕಿ ಕೌಶಲ್ ನಟನೆಯ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಛತ್ರಪತಿ ಸಾಂಭಾಜಿ ಜೀವನಚರಿತ್ರೆಯ ಕುರಿತಾದ ಸಿನಿಮಾ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿ ಅವರು ಛತ್ರಪತಿ ಸಾಂಭಾಜಿ ಮಹರಾಜ್ ಅವರ ಪತ್ನಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರೀಕರಣ ಶುರುವಾಗುವುದಕ್ಕೂ ಮುನ್ನ ಈ ಸಿನಿಮಾ ಎಲ್ಲರ ಗಮನ ಸೆಳೆದಿದ್ದು, ಮುಖ್ಯವಾಗಿ ನಾಯಕ ವಿಕ್ಕಿ ಕೌಶಲ್ ವಿಚಾರಕ್ಕೆ ಸದ್ದು ಮಾಡುತ್ತಿದೆ. ಈ ಚಿತ್ರಕ್ಕಾಗಿ ವಿಕ್ಕಿ ಬರೋಬ್ಬರಿ 25 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಈಗಾಗಲೇ ಕಸರತ್ತು ಆರಂಭಿಸಿರುವ ವಿಕ್ಕಿ ಪ್ರತ್ಯೇಕ ಡಯಟ್ ಫಾಲೋ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಕ್ಕಿ ಕೌಶಲ್ ಒಂದೇ ರೀತಿಯ ಪಾತ್ರಗಳಿಗೆ ಕಟ್ಟು ಬಿದ್ದವರಲ್ಲ. ಪೋಷಕ ಪಾತ್ರವಾಗಲೀ, ಹೀರೋ ಆಗಿ ಮಿಂಚೋದಾಗಿರಲಿ, ವಿಕ್ಕಿ ಕೌಶಲ್ ನಟಿಸಿ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ. 5-10 ಕೆಜಿ ದೇಹದ ತೂಕ ಹೆಚ್ಚಿಸಿಕೊಳ್ಳುವುದು ದೊಡ್ಡ ವಿಚಾರ ಅಲ್ಲ. ಆದರೆ, ಒಮ್ಮೆಲೆ 25 ಕೆಜಿ ಹೆಚ್ಚಿಸಿಕೊಳ್ಳಬೇಕು ಎಂದರೆ ಅದು ಸುಲಭದ ವಿಚಾರ ಅಲ್ಲವೇ ಅಲ್ಲ ಎಂದು ಹೇಳಬಹುದಾಗಿದೆ.
ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಸಿನಿಮಾದ ಪ್ರಾಥಮಿಕ ಹಂತದ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗಲಿದೆ.