More

    ನಿಂತಲ್ಲೇ ನಿಂತ ಹೆದ್ದಾರಿ ಕಾಮಗಾರಿ

    ಖಾನಾಪುರ: ಖಾನಾಪುರ-ರಾಮನಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಹದಗೆಟ್ಟ ಪರ್ಯಾಯ ರಸ್ತೆಯಲ್ಲಿ ವಾಹನ ಸವಾರರು ಜೀವದ ಹಂಗು ತೊರೆದು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ, ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಮಗಾರಿ ಸ್ಥಗಿತಗೊಂಡಿದ್ದು, ನಾಲ್ಕೈದು ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಕೆಲಸ ಮತ್ತೆ ಆರಂಭವಾಗಿಲ್ಲ. ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ನಿರ್ಮಾಣ ಮಾಡಲು ಗುತ್ತಿಗೆದಾರರು ವಿಫಲರಾದ ಕಾರಣ ತಾಲೂಕಿನಲ್ಲಿ 45 ಕಿ.ಮೀ ದೂರದ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಇದ್ದೂ ಇಲ್ಲದಂತಾಗಿದೆ. ಖಾನಾಪುರ-ಲೋಂಡಾ ಮಾರ್ಗದ ಮಧ್ಯೆ ರಸ್ತೆ ತುಂಬ ಗುಂಡಿಗಳು ಬಿದ್ದಿದ್ದು, ಖಾನಾಪುರ-ರಾಮನಗರ ಮಾರ್ಗದಲ್ಲಿ ಪ್ರಯಾಣಿಸುವುದು ನರಕಯಾತನೆಯಾಗಿದೆ.

    ಬೆಳಗಾವಿ ನಗರದ ಹೊರವಲಯದ ಪೀರನವಾಡಿಯಿಂದ ಝಾಡ ಶಹಾಪುರ ಗ್ರಾಮದ ವರೆಗೆ, ಖಾನಾಪುರ ಪಟ್ಟಣದ ಹಲವೆಡೆ, ತಾಲೂಕಿನ ಹೊಣಕಲ್ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪಟ್ಟಣದವರೆಗಿನ ಈ ರಸ್ತೆಯ ಹಲವೆಡೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದು, ಬೆಳಗಾವಿ ಬಳಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ.

    ಖಾನಾಪುರ-ರಾಮನಗರ ಮಾರ್ಗದಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಹಲವು ಸಮಸ್ಯೆ ಸೃಷ್ಟಿಸಿದೆ. ಖಾನಾಪುರ-ರಾಮನಗರ ಮಾರ್ಗದ 30 ಕಿ.ಮೀ. ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಡೈವರ್ಶನ್‌ಗಳಿವೆ. ಈ ಡೈವರ್ಶನ್‌ಗಳನ್ನೂ ಸರಿಯಾಗಿ ರೂಪಿಸಿಲ್ಲ. ಇದರಿಂದ ಅಪಘಾತ ಸಂಭವಿಸುವ ಭಯ ವಾಹನ ಸವಾರರಿಗೆ ಕಾಡುತ್ತಿದೆ.

    ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ನಂ. 4ಎ ಖಾನಾಪುರ, ಲೋಂಡಾ, ರಾಮನಗರ, ತಿಣೈಘಾಟ್, ಅನಮೋಡ್ ಮೂಲಕ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ಬೆಳಗಾವಿಯಿಂದ ರಾಮನಗರ-ಗಣೇಶಗುಡಿ ಸದಾಶಿವಗಡ ಮೂಲಕ ಕಾರವಾರಕ್ಕೆ ಮತ್ತು ಸುಕ್ಷೇತ್ರ ಉಳವಿಗೆ ತೆರಳಲು ಸಮೀಪದ ಸಂಪರ್ಕ ರಸ್ತೆಯಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಖಾನಾಪುರ-ರಾಮನಗರ ಭಾಗದಲ್ಲಿ ಪರ್ಯಾಯ ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ನಿಮಿಷಗಳಲ್ಲಿ ತಲುಪಬೇಕಾದ ಸ್ಥಳಕ್ಕೆ ಗಂಟೆಗಳ ಕಾಲ ಪ್ರಯಾಣಿಸಬೇಕಾಗಿದೆ.

    ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ತ್ವರಿತವಾಗಿ ಕಾಮಗಾರಿ ಮುಗಿಸಿ, ವಾಹನ ಸವಾರರ ಗೋಳು ತಪ್ಪಿಸಬೇಕಿದೆ. ಅಲ್ಲಿಯವರೆಗೆ ಸಮರ್ಪಕವಾದ ಪರ್ಯಾಯ ರಸ್ತೆಗಳನ್ನಾದರೂ ಕಲ್ಪಿಸಿ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

    ಖಾನಾಪುರ-ರಾಮನಗರ ಮಾರ್ಗದ ಹೆದ್ದಾರಿ ಕಾಮಗಾರಿ ಸಧ್ಯಕ್ಕೆ ಸ್ಥಗಿತಗೊಂಡಿದೆ. ಆದರೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ವಾಹನಗಳು ಸಂಚರಿಸಲು ಬದಲೀ ವ್ಯವಸ್ಥೆ ಮಾಡುವಲ್ಲಿ ಎಡವಿದ್ದಾರೆ. ಈ ರಸ್ತೆಯಲ್ಲಿ ಸುಲಭ ಸಂಚಾರ ದುಸ್ತರವಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರನ್ನು ವಿನಂತಿಸುತ್ತೇವೆ.
    | ಪರಶುರಾಮ ಪಾಂಡವ ಲೋಂಡಾ ಗ್ರಾಮಸ್ಥ

    ಖಾನಾಪುರ-ರಾಮನಗರ ಹೆದ್ದಾರಿ ಸಮಸ್ಯೆ ಬಗ್ಗೆ ನಾಗರಿಕರಿಂದ ದೂರುಗಳು ಬಂದಿವೆ. ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳ ಮತ್ತು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ.
    | ರೇಷ್ಮಾ ತಾಳಿಕೋಟಿ ತಹಸೀಲ್ದಾರ್, ಖಾನಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts