More

    ಪುರುಷರು, ಮಹಿಳೆಯರ ತೂಕ ಎಷ್ಟಿರಬೇಕು? ಹೀಗಿದೆ ಐಸಿಎಂಆರ್ ಮಾನದಂಡ…

    ನವದೆಹಲಿ: ಭಾರತದಲ್ಲಿ ಪುರುಷ ಮತ್ತು ಮಹಿಳೆಯರ ಆದರ್ಶ ತೂಕವನ್ನು ಐಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್​ ನ್ಯೂಟ್ರೀಷನ್ 5 ಕೆ.ಜಿ.ಯಷ್ಟು ಹೆಚ್ಚಳ ಮಾಡಿದೆ. ಪುರುಷರಿಗೆ 65 ಕೆ.ಜಿ. ಮತ್ತು ಮಹಿಳೆಯರಿಗೆ 55 ಕೆ.ಜಿ. ‘ಸರಿಯಾದ ತೂಕ’ವೆಂದು ಸ್ಪಷ್ಟಪಡಿಸಿದೆ.

    ಪ್ರತಿ 10 ವರ್ಷಕ್ಕೆ ಒಮ್ಮೆ ಈ ‘ಆದರ್ಶ ತೂಕ’ದ ಪರಿಷ್ಕರಣೆ ಆಗುತ್ತದೆ. 2010ರ ಪರಿಷ್ಕರಣೆಯ ಪ್ರಕಾರ ಪುರುಷರು 60 ಕೆ.ಜಿ. ಮತ್ತು ಮಹಿಳೆಯರು 50 ಕೆ.ಜಿ. ತೂಕವಿದ್ದರೆ ಅದನ್ನು ಆದರ್ಶ ತೂಕ ಎನ್ನಲಾಗುತ್ತಿತ್ತು. ಹಾಗೆಯೇ ಪುರುಷರಿಗೆ 5.6 ಅಡಿ (171 ಸೆಂ.ಮೀ) ಮತ್ತು ಮಹಿಳೆಯರಿಗೆ 5 ಅಡಿ (152 ಸೆಂ.ಮೀ)ಯನ್ನು ಸೂಕ್ತ ಎತ್ತರ ಎಂದು ಪರಿಗಣಿಸಲಾಗಿತ್ತು.

    ಆದರೆ ಇದೀಗ ಸೂಕ್ತ ಎತ್ತರವನ್ನು ಪುರುಷರಿಗೆ 5.8 ಅಡಿ (177 ಸೆಂ.ಮೀ) ಮತ್ತು ಮಹಿಳೆಯರಿಗೆ 5.3 ಅಡಿಗೆ (162 ಸೆಂ.ಮೀ) ಹೆಚ್ಚಿಸಲಾಗಿದೆ. ಜನರು ಸೇವಿಸುತ್ತಿರುವ ಆಹಾರದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಿದೆ. 1989ರಲ್ಲಿ ನಡೆದ ಪರಿಷ್ಕರಣೆಯಲ್ಲಿ ತಜ್ಞರ ಸಮಿತಿಯು ಮಕ್ಕಳು ಮತ್ತು ಹದಿಹರೆಯದವರನ್ನು ಮಾತ್ರವೇ ಪರಿಗಣಿಸಿದ್ದರು. 2010ರಲ್ಲಿ ಕೇವಲ 10 ರಾಜ್ಯಗಳ ವರದಿಯ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗಿತ್ತು. ಆದರೆ 2020ರಲ್ಲಿ ಎಲ್ಲ ರಾಜ್ಯಗಳ ಎಲ್ಲ ವಯಸ್ಸಿನ ಜನರನ್ನು ಗಣನೆಯಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಲಾಗಿದೆ.

    ಪ್ರತಿ ಮನುಷ್ಯ ಆರೋಗ್ಯಯುತವಾಗಿರಲು ಪ್ರತಿ ದಿನ ಯಾವ ಪ್ರಮಾಣದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿದೆ. ಇದೇ ಮೊದಲನೇ ಬಾರಿಗೆ ನಾರಿನ ಅಂಶದ ಆಹಾರ ಸೇವನೆಯನ್ನು ಪೌಷ್ಟಿಕಾಂಶ ಪಟ್ಟಿಗೆ ಐಸಿಎಂಆರ್ ಸೇರಿಸಿದೆ. 2 ಸಾವಿರ ಕಿಲೋ ಕ್ಯಾಲರಿಯಲ್ಲಿ 40 ಗ್ರಾಂ ನಾರಿನಾಂಶ ಇದ್ದರೆ ದೇಹಕ್ಕೆ ಹಾನಿಯಾಗುವುದಿಲ್ಲ ಎಂದು ಹೇಳಲಾಗಿದೆ.

    ಮಧ್ಯಮ ವಯಸ್ಕ ಪುರುಷರಲ್ಲಿ ಕಡಿಮೆ ಕೆಲಸ ಮಾಡುವವರು, ಮಧ್ಯಮ ಕೆಲಸ ಮಾಡುವವರು ಮತ್ತು ಹೆಚ್ಚು ಶ್ರಮ ಪಡುವವರು ದಿನಕ್ಕೆ ಕ್ರಮವಾಗಿ 25 ಗ್ರಾಂ, 30 ಗ್ರಾಂ ಮತ್ತು 40 ಗ್ರಾಂ ಕೊಬ್ಬಿನಾಂಶ ಸ್ವೀಕರಿಸಬಹುದು. ಇದು ಮಹಿಳೆಯರಿಗೆ 20 ಗ್ರಾಂ, 25 ಗ್ರಾಂ ಮತ್ತು 30 ಗ್ರಾಂಗೆ ಇಳಿಕೆಯಾಗುತ್ತದೆ.

    2010ರ ಪರಿಷ್ಕರಣೆಯಲ್ಲಿ ಪುರುಷರು ಮತ್ತು ಸೀಯರು ಸಮಾನವಾದ ಕೊಬ್ಬಿನಾಂಶ ಸ್ವೀಕರಿಸಬಹುದು ಎನ್ನಲಾಗಿತ್ತು. ದಿನಕ್ಕೆ 100ರಿಂದ 130 ಗ್ರಾಂ ಕಾರ್ಬೋಹೈಡ್ರೇಟ್ ಸೇವನೆಯನ್ನು ಐಸಿಎಂಆರ್ ಶಿಾರಸು ಮಾಡಿದೆ. ವಯಸ್ಕ ಪುರುಷ ಮತ್ತು ಮಹಿಳೆಯರು ಪ್ರತಿದಿನ 1000 ಮಿ.ಗ್ರಾಂ ಕ್ಯಾಲ್ಸಿಯಂ (2010ರಲ್ಲಿ 600 ಮಿ.ಗ್ರಾಂ ಮಿತಿ ನೀಡಲಾಗಿತ್ತು) ಸೇವನೆ ಮಾಡಬಹುದು. ಹಾಲುಣಿಸುವ ತಾಯಂದಿರು 200 ಮಿ.ಗ್ರಾಂ ಕ್ಯಾಲ್ಸಿಯಂ ಹೆಚ್ಚಾಗಿ ಸೇವಿಸಬಹುದು ಎಂದು ತಿಳಿಸಲಾಗಿದೆ. ಪ್ರತಿದಿನ 5 ಗ್ರಾಂ ಉಪ್ಪು ಮತ್ತು 2 ಗ್ರಾಂ ಸೋಡಿಯಂ ಮತ್ತು 3,510 ಗ್ರಾಂ ಪೊಟ್ಯಾಸಿಯಂ ಬಳಸುವುದು ಆರೋಗ್ಯಕರ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts