More

    ಸೌಲಭ್ಯ ಕೊಟ್ಟಿದ್ದು ಬಿಜೆಪಿ, ಆದರೂ ಕೈ ಹಿಡಿಯದ ವಾಲ್ಮಿಕಿ ಸಮಾಜ; ಎಸ್.ಟಿ.ಮೋರ್ಚಾ ಸಮಾವೇಶದಲ್ಲಿ ಬಿಜೆಪಿ ನಾಯಕರ ಅಳಲು ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲು ಕರೆ

    ಬೆಂಗಳೂರು:
    ಪರಿಶಿಷ್ಟ ಪಂಗಡಕ್ಕೆ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದು, ವಾಲ್ಮಿಕಿ ಜಯಂತಿ ಆಚರಣೆ ೋಷಿಸಿದ್ದು, ಈ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಬಿಜೆಪಿ ನೇತೃತ್ವದ ಸರ್ಕಾರ. ಆದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗಿದ್ದು ಯಾಕೆ? ಎನ್ನುವ ವಿಷಯ ಬಿಜೆಪಿ ನಾಯಕರನ್ನು ತೀವ್ರವಾಗಿ ಕಾಡಿತು.
    ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಎಸ್.ಟಿ.ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ನಾಯಕರುಗಳೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದ ಹಿನ್ನೆಡೆಯನ್ನು ಪ್ರಸ್ತಾಪಿಸಿ, ಮುಂದೆ ಲೋಕಸಭೆ ಚುನಾವಣೆಯಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
    ಕಳೆದ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಒಬ್ಬರೂ ವಾಲ್ಮೀಕಿ ಸಮುದಾಯದ ನಾಯಕರು ಗೆದ್ದಿಲ್ಲ. ಸಮುದಾಯ ಪರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸಗಳನ್ನು, ತೆಗೆದುಕೊಂಡ ಮಹತ್ವದ ತೀರ್ಮಾನಗಳನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ನಾವು ವಿಲರಾಗಿದ್ದೇವೆ. ಕಾಂಗ್ರೆಸ್ ಮಾಡುವ ಗಿಮಿಕ್ ರಾಜಕಾರಣವನ್ನು ಜನರಿಗೆ ಮನದಟ್ಟು ಮಾಡಿದರೆ ಮಾತ್ರ ಸೋಲಿನ ಕಹಿಯನ್ನು ಮರೆತು ಗೆಲುವಿನ ಸಹಿ ಸವಿಯಲು ಸಾಧ್ಯ. ಅದಕ್ಕಾಗಿ ಇಡೀ ಸಮುದಾಯ ಕಂಕಣಬದ್ಧವಾಗಬೇಕು ಎಂದು ಸಮುದಾಯದ ನಾಯಕರು ಕರೆ ನೀಡಿದರು.
    ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಳೆದ ಚುನಾವಣೆಯಲ್ಲಿ ಈ ಸಮುದಾಯ ಬಿಜೆಪಿಯಿಂದ ದೂರ ಹೋದುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಈ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ ಎನ್ನುವುದನ್ನು ನಾವು ತಿಳಿಸಿಕೊಡಬೇಕು ಎಂದರು.
    ಬಿಜೆಪಿ ಮತ್ತು ಎಸ್‌ಟಿ ಸಮಾಜದ ನಡುವೆ ಒಂದು ಅವಿನಾಭಾವ ಸಂಬಂಧ ಹಿಂದಿನಿಂದಲೂ ಇದೆ. ಯಡಿಯೂರಪ್ಪ ಅವರು ಮಾಡಿದ ಅಭಿವೃದ್ಧಿ ಕಾರ್ಯದ ಹಿಂದೆ ವಾಲ್ಮೀಕಿ ಸಮುದಾಯದ ಶಾಸಕರ ತ್ಯಾಗ ಮತ್ತು ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
    ರಾಷ್ಟ್ರಪತಿ ಸ್ಥಾನಕ್ಕೆ ಎಸ್‌ಟಿ ಸಮುದಾಯದ ಗೌರವಾನ್ವಿತ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಸಾಕು, ಪ್ರಧಾನಿ ಮೋದಿ ಅವರು ಎಸ್‌ಟಿ ಸಮುದಾಯದ ಬಗ್ಗೆ ಇಟ್ಟಿರುವ ಕಳಕಳಿ ಗೊತ್ತಾಗಲಿದೆ ಎಂದರು.
    ಮೀಸಲಾತಿ ಪ್ರಮಾಣ ಹೆಚ್ಚಿಸಿದ ಕೀರ್ತಿ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದು ಯಡಿಯೂರಪ್ಪ ಅವರ ಸರಕಾರ ಎನ್ನುವುದನ್ನು ಮರೆಯಬಾರದು ಎಂದರು.
    ದೇಶದಲ್ಲಿ ಎಸ್‌ಟಿ ಸಮುದಾಯದ ಉನ್ನತಿಗೆ ಕಾರಣರಾದ ಭಗವಾನ್ ಬಿರ್ಸಾ ಮುಂಡ ಅವರ ಜನ್ಮ ದಿನ ನ.15ರಂದು ರಾಷ್ಟ್ರೀಯ ಜನಜಾತಿಯ ದಿನವೆಂದು ಆಚರಿಸಲಾಗುತ್ತಿದೆ. ಇದೆಲ್ಲವೂ ಬಿಜೆಪಿ ಸರ್ಕಾರದಿಂದ ಆಗಿದ್ದು ಎಂದರು.
    ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ, 28 ಕ್ಷೇತ್ರಗಳನ್ನು ಗೆಲ್ಲಬಹುದು. ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಲು ಶ್ರಮಿಸುತ್ತಿದೆ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸಬೇಕು ಎಂದರು.

    ಚುನಾವಣೆಗೆ ಸಜ್ಜಾಗಲು ಬಿಎಸ್ವೈ ಕರೆ
    ನಾನು ಸಿಎಂ ಆಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಲಾಯಿತು. ಇದೆಲ್ಲವನ್ನು ಜನರಿಗೆ ಅರ್ಥ ಮಾಡಿಸಬೇಕಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ಈ ಸಮುದಾಯವನ್ನು ಕಾಂಗ್ರೆಸ್ ಮತಬ್ಯಾಂಕ್ ಮಾಡಿಕೊಂಡಿತ್ತು. ಮುಖ್ಯವಾಹಿನಿಗೆ ತರುವಲ್ಲಿ ಬಿಜೆಪಿ ಸರ್ಕಾರ ಎಲ್ಲಾ ರೀತಿಯಲ್ಲೂ ಆದ್ಯತೆ ನೀಡಿದೆ ಎಂದರು.
    ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸಲು ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

    ಹಾಜರಿದ್ದವರು
    ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಸುನೀಲ್ ಕುಮಾರ್, ಬಿ.ಶ್ರೀರಾಮುಲು, ರಾಜುಗೌಡ ನಾಯಕ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ವಿಧಾನಪರಿಷತ್ ಸದಸ್ಯರಾದ ಡಾ. ತೇಜಸ್ವಿನಿಗೌಡ, ಹೇಮಲತಾ ನಾಯಕ್, ಮಾಜಿ ಶಾಸಕ ಶಿವನಗೌಡ ನಾಯಕ್, ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

    *ಅಯೋಧ್ಯೆಯ ವಿಮಾನನಿಲ್ದಾಣಕ್ಕೆ ನರೇಂದ್ರ ಮೋದಿಜೀ ಅವರು ಮಹರ್ಷಿ ವಾಲ್ಮೀಕಿಯ ಹೆಸರಿಟ್ಟಿದ್ದಾರೆ. ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದು, ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ೋಷಿಸಿದ್ದು ಯಡಿಯೂರಪ್ಪ ಅವರು. ಪ್ರತ್ಯೇಕ ಸಚಿವ ಸ್ಥಾನ ಹಾಗೂ ಸಚಿವಾಲಯ ಸ್ಥಾಪಿಸಿದ್ದು ಮತ್ತು ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಳ ಮಾಡಿದ್ದು ಬೊಮ್ಮಾಯಿ ಸರ್ಕಾರ. ಆದರೂ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ನಾವು ಎಚ್ಚರ ವಹಿಸಬೇಕಿದೆ.
    -ಶ್ರೀರಾಮುಲು, ಮಾಜಿ ಸಚಿವ

    *ಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ. ಮೂಗಿಗೆ, ಮೊಣಕೈಗೆ ಸವರಿದ ತುಪ್ಪ ತಿನ್ನಲಾಗುತ್ತದೆಯೇ? ಶೇ.3ರಷ್ಟಿದ್ದ ಎಸ್‌ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದ್ದು ಬಿಜೆಪಿ ಎನ್ನುವುದನ್ನು ಮರೆಯದಿರಿ.
    -ಸಿ.ಟಿ.ರವಿ, ಮಾಜಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts