More

    ಬಿ ಶ್ರೇಣಿಗೆ ದಕ್ಷಿಣ ಕನ್ನಡ ತೃಪ್ತಿ

    ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಹೊಂದಿದ್ದರೂ ಒಟ್ಟಾರೆ ಫಲಿತಾಂಶದಲ್ಲಿ ಕುಸಿತ ದಾಖಲಿಸಿದೆ. ರಾಜ್ಯದ ಒಟ್ಟು ನಿರ್ವಹಣೆಯಲ್ಲಿ ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ‘ಬಿ’ ಶ್ರೇಣಿಗೆ ತೃಪ್ತಿಪಟ್ಟುಕೊಂಡಿದೆ.

    ಮೂರು ವರ್ಷಗಳಿಂದ ದಕ್ಷಿಣ ಕನ್ನಡದ ಫಲಿತಾಂಶ ಇಳಿಕೆ ಗತಿಯಲ್ಲಿದೆ. 2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ(ಶೇ.82.39) ಪಡೆದಿದ್ದ ಜಿಲ್ಲೆ, 2017-18ನೇ ಸಾಲಿನಲ್ಲಿ ನಾಲ್ಕನೇ(ಶೇ.85.56)ಕ್ಕೆ ಹಾಗೂ 2018-19ರಲ್ಲಿ ಏಳನೇ (86.85) ಸ್ಥಾನಕ್ಕೆ ಕುಸಿದಿತ್ತು. ಈ ವರ್ಷ ಶೇಕಡಾವಾರು ಫಲಿತಾಂಶ ಬದಲು ಗ್ರೇಡ್‌ವಾರು ಫಲಿತಾಂಶ ಒದಗಿಸಲಾಗಿದ್ದು, ಜಿಲ್ಲೆ ಬಿ ವರ್ಗದಲ್ಲಿ ಸ್ಥಾನ ಪಡೆದಿದೆ.

    ಜಿಲ್ಲೆಯ ಒಟ್ಟು 510 ಶಾಲೆಗಳಲ್ಲಿ 213- ಎ, 176- ಬಿ ಮತ್ತು 121 ಶಾಲೆಗಳು ‘ಸಿ’ ಗ್ರೇಡ್ ಸ್ಥಾನ ಪಡೆದಿವೆ. ಮಂಗಳೂರು ದಕ್ಷಿಣ ಶೈಕ್ಷಣಿಕ ವಲಯ ಅತೀ ಹೆಚ್ಚು, ಅಂದರೆ 46 ಶಾಲೆಗಳು ‘ಎ’ ಗ್ರೇಡ್ ಪಡೆದಿವೆ. ಮಂಗಳೂರು ಉತ್ತರ ಎರಡನೇ(45) ಸ್ಥಾನದಲ್ಲಿದೆ.
    ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ 29,032 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಅವರಲ್ಲಿ 27,374 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,318 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದಾರೆ. 234 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ.

    ದ.ಕ. ಟಾಪರ್ಸ್‌:
    ಅನುಷ್ ಎ.ಎಲ್, ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ (625)
    ನಿಧಿ ರಾವ್, ಕೆನರಾ ಹೈಸ್ಕೂಲ್, ಮಂಗಳೂರು (624)
    ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ (624)
    ಕೌಶಿಕ್ ರಾವ್, ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ (623)
    ತನ್ವಿ ಎಸ್.ನಾಯಕ್, ಲೇಡಿಹಿಲ್ ವಿಕ್ಟೋರಿಯ ಹೆಣ್ಮಕ್ಕಳ ಪ್ರೌಢಶಾಲೆ (623)
    ಪ್ರತೀಕ್ಷಾ ನಾಯಕ್, ಡಿ.ಜೆ. ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ(623)
    ಪ್ರಕೃತಿಪ್ರಿಯ ಗೋಖವಿ, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ (622)
    – ಶ್ರೇಯಾ ಡೋಂಗ್ರೆ, ಲಾಯಿಲ ಸೇಂಟ್‌ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ (622)
    ಸಮ್ಮೇದ್ ಮಹಾವೀರ ಹಂಜೆ, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ (622)
    ಕಾವ್ಯಾ ಪಿ.ಹಳ್ಳಿ, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ (621)
    ಶ್ರಾವ್ಯಾ ಎಚ್, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ (621)

    ಅನುಷ್‌ಗೆ ಅಭಿನಂದನೆ ಮಹಾಪೂರ
    ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ (625) ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್ ಎ.ಎಲ್. ಸಂಸದರ ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ, ಗುತ್ತಿಗಾರಿನಲ್ಲಿ ಮೆಸ್ಕಾಂ ಜೆಇ ಆಗಿರುವ ಲೋಕೇಶ್ – ಗೃಹಿಣಿ ಉಷಾ ದಂಪತಿ ಪುತ್ರ. ಅವರ ಮನೆಯಲ್ಲಿ ಸೋಮವಾರ ಸಂಭ್ರಮ ಕಳೆಗಟ್ಟಿತ್ತು. ತಂದೆ -ತಾಯಿ ಮತ್ತು ಸಹೋದರ ಆಕಾಶ್, ಅಜ್ಜಿ ಸಿಹಿ ತಿನ್ನಿಸಿ ಖುಷಿಪಟ್ಟರು. ಕುಟುಂಬಸ್ಥರು, ಸ್ಥಳೀಯರು ಮನೆಗೆ ಬಂದು ಅಭಿನಂದಿಸುತ್ತಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್.ಅಂಗಾರ ಮತ್ತಿತರರು ದೂರವಾಣಿ ಮೂಲಕ ಶುಭಾಶಯ ಕೋರಿದರು. ಕುಮಾರಸ್ವಾಮಿ ವಿದ್ಯಾಲಯದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಸಂಚಾಲಕ ಚಂದ್ರಶೇಖರ ನಾಯರ್ ಮತ್ತು ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ.ಎಚ್ ಶಾಲು ಹೊದಿಸಿ ಸಿಹಿ ತಿನಿಸು ನೀಡಿ ಅಭಿನಂದಿಸಿದರು.

    ದ.ಕ. ಜಿಲ್ಲೆಗೆ ಗುಣಮಟ್ಟದ ಫಲಿತಾಂಶ ಬಂದಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಉಭಯ ವಿಭಾಗಗಳಲ್ಲೂ ನಮ್ಮಲ್ಲಿ ಟಾಪರ್‌ಗಳು ಇದ್ದಾರೆ. ಆದರೆ ಇನ್ನೂ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆವು. ಈ ಬಗ್ಗೆ ಅವಲೋಕನ ಮಾಡಿ ಫಲಿತಾಶ ಅಭಿವೃದ್ದಿಪಡಿಸಲು ಅಗತ್ಯ ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ.
    – ಮಲ್ಲೇಸ್ವಾಮಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts