More

    ಎಸ್ಸೆಸ್ಸೆಲ್ಸಿ ಅಗ್ನಿಪರೀಕ್ಷೆ ಸರ್ಕಾರ, ವಿದ್ಯಾರ್ಥಿಗಳ ಶುಭಾರಂಭ

    ಬೆಂಗಳೂರು: ಕರೊನಾತಂಕದಿಂದಾಗಿ ಸರ್ಕಾರದ ಜತೆಗೆ ವಿದ್ಯಾರ್ಥಿಗಳು, ಪಾಲಕರ ಪಾಲಿಗೂ ಅಗ್ನಿಪರೀಕ್ಷೆಯಂತಾಗಿರುವ 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯಾದ್ಯಂತ ಸುಸೂತ್ರವಾಗಿ ಆರಂಭವಾಗಿದೆ. ಗುರುವಾರ ನಡೆದ ಇಂಗ್ಲಿಷ್ ಭಾಷಾ ಪರೀಕ್ಷೆಗೆ ಶೇ.98.03 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಪರೀಕ್ಷೆ ಆಯೋಜಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರು.

    ಒಟ್ಟಾರೆ 7,85,140 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಈ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 13,262 ವಿದ್ಯಾರ್ಥಿಗಳ ಗೈರಿಗೆ ಕರೊನಾ ಸಂಬಂಧಿತ ವಿಚಾರ ಕಾರಣವಾಗಿದ್ದಲ್ಲಿ ಅವರಿಗೆ ಮತ್ತೊಂದು ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ವಿಶೇಷ ಎಂದರೆ ಇಂದು ಪರೀಕ್ಷೆಯಲ್ಲಿ ಯಾವುದೇ ನಕಲು ಮಾಡಿ ಸಿಕ್ಕಿಬಿದ್ದ ಪ್ರಕರಣ ವರದಿಯಾಗಿಲ್ಲ. ಬೆಂಗಳೂರಿನಲ್ಲಿ ಸುಮಾರು 12 ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿ ಸುರಕ್ಷತಾ ಕ್ರಮ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

    ಇಲಾಖಾ ಸಿಬ್ಬಂದಿ, ಪೊಲೀಸ್, ಜಿಲ್ಲಾಡಳಿತ ಸೇರಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ. ಮುಂದಿನ ಪರೀಕ್ಷೆಗೂ ನಿಮ್ಮ ಸಹಕಾರ ನಿರೀಕ್ಷಿಸುತ್ತೇನೆ.
    | ಸುರೇಶ್​ಕುಮಾರ್                ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ

    ಪರೀಕ್ಷೆ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಪರೀಕ್ಷೆಯನ್ನು ಸುಸೂತ್ರವಾಗಿ ಆರಂಭಿಸಲು ಸಹಕಾರ ನೀಡುತ್ತಿರುವ ಇಲಾಖಾ ಸಿಬ್ಬಂದಿ, ಪೊಲೀಸ್, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಸ್ವಯಂ ಸೇವಕರಿಗೆ ಅಭಿನಂದನೆ ತಿಳಿಸಿದರು. ಮುಂದಿನ ಪರೀಕ್ಷೆಗಳಿಗೂ ಸಹಕಾರ ಕೋರಿದರು. ಒಟ್ಟಾರೆ ಶೇ.98.3 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜ ಞರಾಗಿದ್ದಾರೆ. ಈ ಪೈಕಿ ವಸತಿ ಮತ್ತು ಹಾಸ್ಟೆಲ್​ಗಳಲ್ಲಿ ಇದ್ದ 1,438 ವಿದ್ಯಾರ್ಥಿಗಳೂ ಸೇರಿದ್ದಾರೆ. ನೆರೆ ರಾಜ್ಯಗಳಿಂದ ನೋಂದಾಯಿತ 614 ವಿದ್ಯಾರ್ಥಿಗಳಲ್ಲಿ 555 ಮಂದಿ ಪರೀಕ್ಷೆ ಬರೆದರು.

    ಕರೊನಾ ಭಯ ಮೆಟ್ಟಿ ನಿಂತರು: ದ್ವಿತೀಯ ಪಿಯು ಆಂಗ್ಲ ಪರೀಕ್ಷೆಗೆ 27 ಸಾವಿರ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಂತೆ ಎಸ್ಸೆಸ್ಸೆಲ್ಸಿಯಲ್ಲೂ ಗೈರು ಹಾಜರಾಗುತ್ತಾರೆಂಬ ಆತಂಕವನ್ನು ವಿದ್ಯಾರ್ಥಿಗಳು ಹುಸಿಗೊಳಿಸಿದರು. ಆಗಸ್ಟ್​ನಲ್ಲಿ ಪೂರಕ ಪರೀಕ್ಷೆಯಲ್ಲಿ ಮತ್ತೊಂದು ಅವಕಾಶ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು.

    3212 ಬಸ್ ವ್ಯವಸ್ಥೆ: ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದಕ್ಕಾಗಿ 3,212 ಬಸ್ ಹಾಗೂ ಇತರ ವಾಹನ ವ್ಯವಸ್ಥೆ ಮಾಡಲಾಗಿತ್ತು. ಕೇರಳದಿಂದ ಪರೀಕ್ಷೆ ಬರೆಯಲು ತಾಳಪ್ಪಾಡಿ ಚೆಕ್​ಪೋಸ್ಟ್​ನಿಂದ 92 ಬಸ್​ಗಳಲ್ಲಿ 367 ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಲಾಕ್​ಡೌನ್ ವೇಳೆ ತಮ್ಮ ಊರುಗಳಿಗೆ ತೆರಳಿರುವ ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದ ವಲಸೆ ಕಾರ್ವಿುಕರು ಸೇರಿದಂತೆ 12,644 ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 12,548 ವಿದ್ಯಾರ್ಥಿಗಳು ಹಾಜರಾಗಿದ್ದು, 96 ಮಂದಿ ಗೈರು ಹಾಜರಾಗಿದ್ದಾರೆ. ಗೈರು ಹಾಜರಾಗಿರುವ ವಿದ್ಯಾರ್ಥಿಗಳನ್ನು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಿಂದ ಪರಿಶೀಲಿಸಿ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

    ಕೇಸ್ ದಾಖಲು

    ಪರೀಕ್ಷೆ ಆರಂಭಕ್ಕೆ ಒಂದು ದಿನ ಮೊದಲೇ ಕಿಡಿಗೇಡಿಗಳು ಫೇಸ್​ಬುಕ್​ನಲ್ಲಿ ಆಂಗ್ಲ ಭಾಷಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹರಿಬಿಟ್ಟಿದ್ದರು. ತಕ್ಷಣ ಇಲಾಖೆ ಇದೊಂದು ವದಂತಿ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಆ ಕಿಡಿಗೇಡಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

    1,200 ಪ್ರತ್ಯೇಕ ಕೊಠಡಿ ವ್ಯವಸ್ಥೆ: 13 ಕೊರೊನಾ ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಕಂಟೇನ್ಮೆಂಟ್ ವಲಯದಲ್ಲಿದ್ದ 28 ಪರೀಕ್ಷಾ ಕೇಂದ್ರಗಳ 8,128 ವಿದ್ಯಾರ್ಥಿಗಳನ್ನು 1,200 ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಕಂಟೇನ್ಮೆಂಟ್​ವಲಯದಲ್ಲಿದ್ದ 998 ವಿದ್ಯಾರ್ಥಿಗಳು ಹಾಗೂ ಸ್ಕ್ಯಾನಿಂಗ್ ವೇಳೆ ಹೆಚ್ಚಿನ ತಾಪಮಾನ ಕಂಡುಬಂದ 201 ವಿದ್ಯಾರ್ಥಿಗಳನ್ನು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ.

    ಸಂಭ್ರಮ, ಸ್ವಾಗತ, ವಿಷಾದ: ಕೊಪ್ಪಳ ಜಿಲ್ಲೆ ಗಂಗಾವತಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಪರೀಕ್ಷೆ ಬರೆಯಲು ಬಂದ ಮಕ್ಕಳಿಗೆ ಶಿಕ್ಷಕರು ಹೂಮಳೆಮೂಲಕ ಸ್ವಾಗತಿಸಿದ್ದು ವಿಶೇಷ. ಗಂಗಾವತಿಯಲ್ಲಿ ಪರೀಕ್ಷಾರ್ಥಿಗಳನ್ನು ಆಟೋ ಚಾಲಕನೋರ್ವ ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದ. ಶಿರಹಟ್ಟಿಯಲ್ಲಿ ಬಸ್ ಸಿಗದೆ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ಜೀಪ್​ನಲ್ಲಿ ಕರೆದೊಯ್ದರೆ, ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸ್ವಾಮಿ ಜಪಾನಂದರು 3,330 ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದರು. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿಸಿದ್ದಕ್ಕಾಗಿ ಅವರನ್ನು ಸಚಿವರು ಅಭಿನಂದಿಸಿದರು. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಮಗನನ್ನು ಬೈಕ್​ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದ ವಿಶ್ವನಾಥ ಕಟ್ಟಿಮನಿ ಎಂಬುವವರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು. ಶಿಕ್ಷಕರಾಗಿರುವ ಇವರಿಗೆ ಇಲಾಖೆಯಿಂದ ಸಲ್ಲಬೇಕಿರುವ ಎಲ್ಲ ಸೌಲಭ್ಯಗಳನ್ನು ಶೀಘ್ರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸುರೇಶ್ ಕುಮಾರ್ ತಿಳಿಸಿದರು. ಇಂದು (ಶುಕ್ರವಾರ) ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts