More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ

    ವಿಜಯವಾಣಿ ಸುದ್ದಿಜಾಲ ಗದಗ

    ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಆರಂಭವಾಗಲಿದೆ. ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ಪರೀಕ್ಷೆ ಕೇಂದ್ರದಲ್ಲಿ ಹಾಜರಿದ್ದು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಮಾಡಿಸಿಕೊಂಡು ಕೊಠಡಿಯೊಳಗೆ ಪ್ರವೇಶಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಕರೊನಾ ವೈರಸ್ ಹರಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆ ಕೇಂದ್ರದಲ್ಲಿ ಕೊಠಡಿಗಳಿಗೆ ಸ್ಯಾನಿಟೈಜ್ ಸಿಂಪಡಿಸಿ ಶುಚಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಪರೀಕ್ಷೆ ಕೇಂದ್ರಗಳಿಗೆ (58), ಉಪಕೇಂದ್ರಗಳಿಗೆ (7) ಆಸನ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. 13,934 ಮಕ್ಕಳಿಗೆ ಒಂದು ಸೆಟ್ ಮಾಸ್ಕ್ ಪೂರೈಸಲಾಗಿದೆ. ಎಲ್ಲ 65 ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

    ಈ ಮೊದಲು ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಇದೀಗ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಡೆಸ್ಕ್​ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಗೆ 18 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತದೆ. ಜ್ವರದಿಂದ ಬಳಲುತ್ತಿರುವ ಮಕ್ಕಳು ಹಾಗೂ ಕಂಟೇನ್ಮೆಂಟ್ ಪ್ರದೇಶದ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    13,964 ವಿದ್ಯಾರ್ಥಿಗಳು: ಗದಗ ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷೆ ಕೇಂದ್ರಗಳಿದ್ದು, 7,078 ಗಂಡು, 6,856 ಹೆಣ್ಣು (ಒಟ್ಟು 13,964) ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಪಕ್ಕದಲ್ಲಿಯೇ ಹೆಚ್ಚುವರಿಯಾಗಿ 7 ಉಪಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಗದಗ ಶಹರ 14, ಗದಗ ಗ್ರಾಮೀಣ 8, ಮುಂಡರಗಿ 8, ನರಗುಂದ 6, ರೋಣ 12, ಶಿರಹಟ್ಟಿ 10 ಸೇರಿ 58 ಪರೀಕ್ಷಾ ಕೇಂದ್ರಗಳಿವೆ. ಗದಗ ಗ್ರಾಮೀಣ 2, ಮುಂಡರಗಿ 2, ಶಿರಹಟ್ಟಿ 3 ಸೇರಿ ಒಟ್ಟು 7 ಉಪಕೇಂದ್ರಗಳಿವೆ. ಗದಗ ಶಹರ 217, ಗದಗ ಗ್ರಾಮೀಣ 154, ಮುಂಡರಗಿ 106, ನರಗುಂದ 84, ರೋಣ 189, ಶಿರಹಟ್ಟಿ 155 ಸೇರಿ ಒಟ್ಟು ಜಿಲ್ಲೆಯಲ್ಲಿ 905 ಬ್ಲಾಕ್​ಗಳನ್ನು ಗುರುತಿಸಲಾಗಿದೆ.

    ಕೇಂದ್ರಕ್ಕೆ ಬರಲು ವ್ಯವಸ್ಥೆ: ಒಟ್ಟು ವಿದ್ಯಾರ್ಥಿಗಳು 13,964, ಕಾಲ್ನಡಿಗೆಯಲ್ಲಿ ಬರುವವರು 5,313, ಪಾಲಕರೊಂದಿಗೆ ಬರುವವರು 3,925, ಅಟೋ ಮೂಲಕ 1,527 ಸೈಕಲ್ ಮೂಲಕ ಬರುವವರು 232, ಶಾಲಾ ವಾಹನದಲ್ಲಿ ಬರುವವರು 99, ಸಾರಿಗೆ ಬಸ್ ಮೂಲಕ ಬರುವವರು 2,232, ಖಾಸಗಿ ವಾಹನದಲ್ಲಿ ಬರುವ ವಿದ್ಯಾರ್ಥಿಗಳು 572.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts