More

    ಎಸ್ಸೆಸ್ಸೆಲ್ಸಿ ಫಲಿತಾಂಶ, ಅಗ್ರಗಣ್ಯ ಸಾಲಿನಲ್ಲಿ ಉಡುಪಿ ಜಿಲ್ಲೆ

    ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಬದಲಾದ ಕ್ರಮದಲ್ಲಿ ಉಡುಪಿ ಜಿಲ್ಲೆ ‘ಎ’ ಶ್ರೇಣಿ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
    2015ರಲ್ಲಿ ಪ್ರಥಮ, 2016ರಲ್ಲಿ ದ್ವಿತೀಯ(ಶೇ.89.52), ನಂತರದ ಎರಡು (2017 ಮತ್ತು 2018) ವರ್ಷಗಳಲ್ಲಿ ಕ್ರಮವಾಗಿ ಶೇ.84.23 ಮತ್ತು ಶೇ.88.18 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದ ಜಿಲ್ಲೆ, 2019ರಲ್ಲಿ ಐದನೇ ಸ್ಥಾನಕ್ಕೆ (ಶೇ.88.11) ಕುಸಿದಿತ್ತು.

    ಈ ಬಾರಿ ಗ್ರೇಡ್‌ವಾರು ಫಲಿತಾಂಶ ನೀಡಲಾಗಿದೆ. ಇದರಲ್ಲಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಬೈಂದೂರು, ಉಡುಪಿ ಉತ್ತರ, ಉಡುಪಿ ದಕ್ಷಿಣ ವಲಯಗಳು ‘ಎ’ ಶ್ರೇಣಿ ಪಡೆದಿವೆ. ಜಿಲ್ಲೆಯ 159 ಶಾಲೆಗಳು ಎ, 79 ಶಾಲೆಗಳು ಬಿ ಹಾಗೂ 23 ಶಾಲೆಗಳು ಸಿ ಶ್ರೇಣಿ ಗಿಟ್ಟಿಸಿವೆ.
    ಬೈಂದೂರು ವಲಯದಲ್ಲಿ 21 ಶಾಲೆಗಳು ಎ ಹಾಗೂ 9 ಶಾಲೆಗಳು ಬಿ ಶ್ರೇಣಿ ಪಡೆದಿವೆ. ಕುಂದಾಪುರ ವಲಯದಲ್ಲಿ 24 ಶಾಲೆಗಳು ಎ, 15 ಶಾಲೆಗಳು ಬಿ ಶ್ರೇಣಿ ಪಡೆದಿವೆ. ಕಾರ್ಕಳದಲ್ಲಿ 37 ಶಾಲೆ ಎ, 13 ಶಾಲೆಗಳು ಬಿ ಶ್ರೇಣಿ ಪಡೆದಿವೆ. ಉಡುಪಿ ಉತ್ತರ ವಲಯದ 38 ಶಾಲೆ ಎ, 17 ಶಾಲೆಗಳು ಬಿ, ಉಡುಪಿ ದಕ್ಷಿಣ ವಲಯದ 39 ಶಾಲೆಗಳು ಎ, 25 ಶಾಲೆಗಳು ಬಿ ಶ್ರೇಣಿ ಪಡೆದಿವೆ.

    ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಕಾಪು ಪ್ರಿಮೆಟ್ರಿಕ್ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು, ಪಡುಬಿದ್ರಿಯಲ್ಲಿ ಮೂವರು ವಿದ್ಯಾರ್ಥಿಗಳು, ಬನ್ನಂಜೆ ಮತ್ತು ಕಾರ್ಕಳದಲ್ಲಿರುವ ಪ್ರಿ ಮೆಟ್ರಿಕ್‌ನ ಹಾಸ್ಟೆಲ್‌ನಲ್ಲಿರುವ ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟು ಶೇ.76 ಫಲಿತಾಂಶ ದಾಖಲಾಗಿದೆ. ಕಾಪು, ಪಡುಬಿದ್ರಿ ಹಾಸ್ಟೆಲ್‌ಗಳಿಗೆ ಶೇ.100 ಫಲಿತಾಂಶ ಲಭಿಸಿದೆ ಎಂದು ಇಲಾಖೆ ಉಪ ನಿರ್ದೇಶಕ ಪ್ರೇಮ ಕುಮಾರ್ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆ ಟಾಪರ್ಸ್‌:
    – ಸುರಭಿ ಎಸ್.ಶೆಟ್ಟಿ, ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ಬೈಂದೂರು (624)
    – ಭವ್ಯಾ ನಾಯಕ್, ಒಳಕಾಡು ಪ್ರೌಢಶಾಲೆ, ಉಡುಪಿ (622)
    – ಶ್ರಾವ್ಯಾ ಮೊಗವೀರ, ಬಸ್ರೂರು ಸರ್ಕಾರಿ ಪ್ರೌಢಶಾಲೆ (621)
    – ಗ್ರೀಷ್ಮಾ ಶೆಟ್ಟಿಗಾರ್, ಹಂಗಾರಕಟ್ಟೆ ಚೇತನ ಪ್ರೌಢಶಾಲೆ (621)
    – ಎ.ವಿ. ಸುಮೇಧಾ ಆಚಾರ್ಯ, ಹೆಬ್ರಿ ಪಾಂಡುರಂಗರಮಣ ನಾಯಕ್ ಅಮೃತಭಾರತಿ ವಿದ್ಯಾಲಯ (621)
    – ಅದ್ವೈತ್ ಶರ್ಮ, ಪೆರುವಾಜೆ ಸುಂದರ ಪುರಾಣಿಕ ಸರ್ಕಾರಿ ಪ್ರೌಢಶಾಲೆ (620)

    ಉಡುಪಿ ಜಿಲ್ಲೆ ಅಗ್ರ ಶ್ರೇಣಿಯೊಂದಿಗೆ ಅತ್ಯುತ್ತಮ ಸಾಧನೆ ತೋರಿದೆ. ಲಾಕ್‌ಡೌನ್ ಅವಧಿಯಲ್ಲಿಯೂ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಲಹೆ, ಸೂಚನೆ ನೀಡಲಾಗುತ್ತಿತ್ತು. ಪೋಷಕರು, ಶಿಕ್ಷಕರ ಸಹಕಾರದ ಜತೆಗೆ ವಿದ್ಯಾರ್ಥಿಗಳ ಉತ್ತಮ ಕಲಿಕೆಯಿಂದಾಗಿ ಜಿಲ್ಲೆಯೂ ಶೇ.85ಕ್ಕೂ ಅಧಿಕ ಅಂಕ ಪಡೆಯಲು ಸಾಧ್ಯವಾಗಿದೆ.

    -ಶೇಷಶಯನ ಕಾರಿಂಜ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts